ಬೆಂಗಳೂರು: ಜಯ ಕರ್ನಾಟಕ ಸಂಘಟನೆಯ ಸ್ಥಾಪಕ ಹಾಗೂ ಮಾಜಿ ಭೂಗತ ದೊರೆ ಮುತ್ತಪ್ಪ ರೈ ಚಿಕಿತ್ಸೆ ಫಲಿಸದೆ ವಿಧಿವಶರಾಗಿದ್ದಾರೆ.
ತಡರಾತ್ರಿ 2.30ರ ಸುಮಾರಿಗೆ ರೈ ವಿಧಿವಶರಾಗಿದ್ದಾರೆ ಎಂದು ಬೆಂಗಳೂರಿನ ಮಣಿಪಾಲ ಆಸ್ಪತ್ರೆ ಮೂಲಗಳು ತಿಳಿಸಿವೆ. ಕಳೆದ ಎರಡು ವರ್ಷಗಳಿಂದ ಇವರು ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಏಪ್ರಿಲ್ 30 ರಂದು ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು.
ಕಳೆದ ಮೂರ್ನಾಲ್ಕು ದಿನಗಳಿಂದ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದರು. ಕೊರೊನಾ ಹಿನ್ನೆಲೆ ಹೆಚ್ಚು ಜನ ಸೇರಬಾರದು ಎಂದು ಆಸ್ಪತ್ರೆ ಸುತ್ತ ಬ್ಯಾರಿಕೇಡ್ ಅಳವಡಿಸಿ ಭದ್ರತೆ ಕೈಗೊಳ್ಳಲಾಗಿದೆ.
ಮೃತದೇಹವನ್ನು ಬಿಡದಿಯಲ್ಲಿರುವ ಅವರ ಮನೆಗೆ ತೆಗೆದುಕೊಂಡು ಹೋಗಿ ಅಲ್ಲಿ ಅಂತಿಮ ಸಂಸ್ಕಾರ ಮಾಡಲು ಸಂಬಂಧಿಕರು ನಿರ್ಧಾರ ಮಾಡಿದ್ದಾರೆ. ಸದ್ಯ ಬೆಂಬಲಿಗರು ಅಂತಿಮ ದರ್ಶನಕ್ಕೆ ಆಗಮಿಸುತ್ತಿದ್ದು ,ಯಾರನ್ನೂ ಆಸ್ಪತ್ರೆಯ ಒಳಗೆ ಬಿಡುತ್ತಿಲ್ಲ.