ಬೆಂಗಳೂರು : ಕೋವಿಡ್ ಆತಂಕ ಇನ್ನೇನು ಮುಗಿತಪ್ಪಾ ಅಂದುಕೊಳ್ಳುವಾಗಲೇ ಹೊಸ ರೂಪಾಂತರ ಎಲ್ಲರ ನಿದ್ದೆಗೆಡಿಸಿದೆ. ಅಂತಾರಾಷ್ಟ್ರೀಯ ಪ್ರಯಾಣಿಕರೇ ಇದೀಗ ರಾಜ್ಯಕ್ಕೆ ಕಂಟಕವಾಗಿದ್ದು, ಹೊರ ದೇಶದಿಂದ ಬಂದ 1,138 ಮಂದಿಗೆ ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದು, 14 ಜನರಿಗೆ ಸೋಂಕು ಬಂದಿದೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ಸಚಿವ ಸುಧಾಕರ್, ಈಗ ಪಾಸಿಟಿವ್ ಬಂದಿರುವವರ ಸ್ಯಾಂಪಲ್ಸ್ ನಿಮ್ಹಾನ್ಸ್ ಆಸ್ಪತ್ರೆಗೆ ಕಳುಹಿಸಿದ್ದೇವೆ. ದೀರ್ಘವಾಗಿ ಪರೀಕ್ಷೆ ಮಾಡ್ತಿದ್ದು, ಫಲಿತಾಂಶಕ್ಕೆ ಸುಮಾರು 48 ಗಂಟೆ ಬೇಕಾಗುತ್ತೆ. ನಾಳೆ ವರದಿಯ ಮಾಹಿತಿ ಸಿಗುತ್ತೆ.
ನಿಮ್ಹಾನ್ಸ್ ಅವರು ನೇರವಾಗಿ ಐಸಿಎಂಆರ್ಗೆ ಕಳಿಸುತ್ತಾರೆ. ಆದರೆ, ಕೇಂದ್ರ ಸರ್ಕಾರವೇ ಇದನ್ನ ಬಿಡುಗಡೆ ಮಾಡುತ್ತೆ, ನಮಗೆ ಮಾಹಿತಿ ಕೊಡಬೇಡಿ ಅಂತಾ ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬರುತ್ತಿರುವ ಎಲ್ಲರನ್ನೂ ಪರೀಕ್ಷೆ ಮಾಡ್ತಿದ್ದಾರೆ. 72 ಗಂಟೆಗಳ ಮೊದಲು ಅವರಲ್ಲಿ ರಿಪೋರ್ಟ್ ಇದ್ರೆ, ಅಂತವರಿಗೆ ಪರೀಕ್ಷೆ ಮಾಡಲ್ಲ. ಆದ್ರೆ, ರಿಪೋರ್ಟ್ ಇಲ್ಲದವರನ್ನ ಕಡ್ಡಾಯವಾಗಿ ಪರೀಕ್ಷೆ ಮಾಡ್ತಿದ್ದೇವೆ ಅಂತಾ ಮಾಹಿತಿ ನೀಡಿದ್ರು.
ಟ್ರಯಲ್ ವ್ಯಾಕ್ಸಿನ್ ಅಷ್ಟೇ.. : ಹೈದ್ರಾಬಾದ್ ಮೂಲದ ಕೋವ್ಯಾಕ್ಸಿನ್ 3ನೇ ಹಂತದ ಟ್ರಯಲ್ ನಾವೇ ಉದ್ಘಾಟನೆ ಮಾಡಿದ್ದೇವೆ. ಕೆಲವರು ತೆಗೆದುಕೊಂಡಿದ್ದಾರೆ. ಇನ್ನೂ ಕೂಡ ಕೆಲವರು ತೆಗೆದುಕೊಳ್ಳುವವರಿದ್ದಾರೆ. ನಾನೇ ಕೆಲವರಿಗೆ ಸಜೆಸ್ಟ್ ಮಾಡಿದ್ದೆ.
ವೈದ್ಯಕೀಯ ವಿದ್ಯಾರ್ಥಿಗಳಿಗೆ ನೀವು ತೆಗೆದುಕೊಳ್ಳಿ ಅಂತಾ ಹೇಳಿದ್ದೆ. ಫ್ರೆಂಟ್ಲೈನ್ನಲ್ಲಿ ಕೆಲಸ ಮಾಡುವವರು ತೆಗೆದುಕೊಳ್ಳಲು ಸಲಹೆ ಕೊಟ್ಟಿದ್ದೆ. ಇದು ಅಧಿಕೃತ ಅಲ್ಲ. ಆದರೆ, ಟ್ರಯಲ್ ವ್ಯಾಕ್ಸಿನ್ ತೆಗೆದುಕೊಳ್ಳಬಹುದು ಅಂದರು.
ಇನ್ನು ಸಚಿವರು ಶಾಸಕರು ವ್ಯಾಕ್ಸಿನ್ ತೆಗೆದುಕೊಂಡಿರುವ ಬಗ್ಗೆಯೂ ಮಾತನಾಡಿದ ಅವರು, ಈ ಬಗ್ಗೆ ಮಾಹಿತಿ ಇಲ್ಲ. ನಾನು ತೆಗೆದುಕೊಂಡಿಲ್ಲ, ಬೇರೆಯವರು ತೆಗೆದುಕೊಂಡಿದ್ರೆ ತಪ್ಪಲ್ಲ. ಟ್ರಯಲ್ ಮಾಡುವಾಗ ತೆಗೆದುಕೊಂಡ್ರೆ ಕಂಪನಿಗೆ ಸಹಾಯ ಮಾಡಿದಂತೆ ಆಗುತ್ತೆ. ಅದರಲ್ಲಿ ಯಾವುದೇ ತಪ್ಪು ಇಲ್ಲ ಅಂತಾ ತಿಳಿಸಿದರು.
ಹೊಸ ವರ್ಷಕ್ಕೆ ಹೊಸ ಮಾರ್ಗಸೂಚಿ ಪಾಲನೆ : ಇನ್ನು ವಾರ ಕಳೆದರೆ ಹೊಸ ವರ್ಷ ಬರಲಿದ್ದು, ಇದಕ್ಕಾಗಿ ಹೊಸ ಮಾರ್ಗಸೂಚಿ ಪಾಲನೆ ಮಾಡಬೇಕು. ಕೆಲ ಇಲಾಖೆಗಳ ಸಮನ್ವಯತೆಯಿಂದ ಕೆಲಸ ಮಾಡಬೇಕು.
ಆರೋಗ್ಯ ಮತ್ತು ಗೃಹ ಇಲಾಖೆ ಸಮನ್ವಯತೆಯಿಂದ ಮಾರ್ಗಸೂಚಿ ಮಾಡ್ತೀವಿ. ಕೊರೊನಾ ಮತ್ತು ಹೊಸ ವೈರಾಣು ವಿರುದ್ಧ ಹೋರಾಟದ ಮುಂದುವರೆದ ಭಾಗವಾಗಿ ಮಾರ್ಗಸೂಚಿ ಬಿಡುಗಡೆ ಮಾಡೋದಾಗಿ ತಿಳಿಸಿದರು.