ಹಾವೇರಿ: ಉತ್ತರ ಕರ್ನಾಟಕದ ಹೆಬ್ಬಾಗಿಲು ಹಾವೇರಿ ಜಿಲ್ಲೆ ಕೋಮುಸೌಹಾರ್ದತೆಗೆ ಹೆಸರಾದ ಜಿಲ್ಲೆ. ಹಿಂದು ಮುಸ್ಲಿಂ, ಕ್ರೈಸ್ತರು ಸೇರಿದಂತೆ ಸರ್ವಜನಾಂಗದ ಜನರು ಇಲ್ಲಿ ಸೌಹಾರ್ದತೆಯಿಂದ ಜೀವನ ನಡೆಸುತ್ತಾರೆ. ಮುಸ್ಲಿಂರ ಮೊಹರಂ ಹಬ್ಬದಲ್ಲಿ ಹಿಂದೂಗಳು ಭಾಗವಹಿಸುವ ಮೂಲಕ ಸೌಹಾರ್ದತೆ ಮೆರೆದರೆ ಮುಸ್ಲಿಂರು ಗಣೇಶ ಚತುರ್ಥಿಯ ದಿನಗಳಂದು ಗಣೇಶನ ವಿಗ್ರಹ ಸ್ಥಾಪನೆ ಮಾಡಿ ಪೂಜೆ ಸಲ್ಲಿಸುತ್ತಾರೆ.
ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕಿನ ಕುಡಪಲಿ ಗ್ರಾಮದಲ್ಲಿ ಕಳೆದ ಮೂವತ್ತು ವರ್ಷಗಳಿಂದ ಮುಸ್ಲಿಂ ಬಾಂಧವರು ಗಜಾನನ ಯುವಕ ಸಂಘ ರಚಿಸಿಕೊಂಡಿದ್ದಾರೆ. ಈ ಸಂಘದವರು ಗ್ರಾಮದ ಮಸೀದಿ ಸಮೀಪದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಗಣೇಶನ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುತ್ತಾರೆ. ಸಮಿತಿಯಲ್ಲಿ ಪ್ರತಿಶತ 70ಕ್ಕೂ ಅಧಿಕ ಮುಸ್ಲಿಂ ಸದಸ್ಯರಿದ್ದಾರೆ.
ಹಿಂದೂಗಳು ತರುವ ರೀತಿಯಲ್ಲಿ ಗಣೇಶ ಮೂರ್ತಿಯನ್ನು ಬಾಜಾಭಜಂತ್ರಿಯೊಂದಿಗೆ ಮೆರವಣಿಗೆ ಮೂಲಕ ಬರಮಾಡಿಕೊಳ್ಳುತ್ತಾರೆ. ಐದು ದಿನಗಳ ಕಾಲ ಗ್ರಾಮದಲ್ಲಿ ಗಣೇಶನನ್ನು ಸ್ಥಾಪಿಸುವ ಮುಸ್ಲಿಂರು ತದನಂತರ ನಿಮಜ್ಜನ ಮಾಡುತ್ತಾರೆ. ಈ ಸಂದರ್ಭದಲ್ಲಿ ಗ್ರಾಮದ ಜನರಿಗೆ ಅನ್ನ ಸಂತರ್ಪಣೆಯನ್ನು ಏರ್ಪಡಿಸುತ್ತಾರೆ.
ಕಳೆದ 30 ವರ್ಷಗಳಿಂದ ನಾವು ಗಣೇಶನನ್ನು ಸ್ಥಾಪಿಸುತ್ತಿದ್ದೇವೆ. ಈ ರೀತಿ ಮಾಡುವುದು ನಮಗೆ ಖುಷಿ ನೀಡುತ್ತೆ. ನಮ್ಮೆಲ್ಲರಿಗೂ ಒಳ್ಳೆಯದಾಗುತ್ತಾ ಬಂದಿದೆ ಎನ್ನುತ್ತಾರೆ ಸದಸ್ಯರು. ನಮ್ಮ ತಂದೆ ತಾತನ ಕಾಲದಿಂದ ಈ ರೀತಿ ಗಣೇಶನ ಸ್ಥಾಪಿಸಿ ಪೂಜೆ ಸಲ್ಲಿಸುತ್ತಾ ಬಂದಿದ್ದೇವೆ. ಮುಂದೆ ಸಹ ನಮ್ಮ ಮಕ್ಕಳು ಈ ಸಂಪ್ರದಾಯ ಮುಂದುವರೆಸಿಕೊಂಡು ಹೋಗುತ್ತಾರೆ. ನಾವು ಗ್ರಾಮದಲ್ಲಿ ಸಹೋದರರಂತೆ ಜೀವನ ಸಾಗಿಸುತ್ತಿದ್ದೇವೆ. ಈ ರೀತಿಯ ಹಬ್ಬಗಳ ಆಚರಣೆ ನಮ್ಮ ಬಾಂಧವ್ಯವನ್ನ ಗಟ್ಟಿಗೊಳಿಸುತ್ತವೆ ಎನ್ನುತ್ತಾರೆ ಮುಸ್ಲಿಂ ಬಾಂಧವರು.
ಗಣೇಶ ಸ್ಥಾಪನೆ ಮಾಡಿ ಪ್ರತಿನಿತ್ಯ ಮೂರು ಹೊತ್ತು ಹಿಂದೂಗಳಂತೆ ಪೂಜೆ ಸಲ್ಲಿಸುತ್ತೇವೆ. ಐದು ದಿನಗಳ ಕಾಲ ಗಣೇಶನ ಸ್ಥಾಪಿಸುವ ಮುಸ್ಲಿಂ ಬಾಂಧವರು ಐದು ದಿನಗಳ ನಂತರ ಅದ್ದೂರಿಯಾಗಿ ನಿಮ್ಮಜ್ಜನ ಮಾಡುತ್ತಾರೆ. ಹಿಂದೂ ಮುಸ್ಲಿಂ ಭಾವಕ್ಯತೆಯ ಗಣೇಶ ಸ್ಥಾಪನೆ ಉಳಿದ ಗ್ರಾಮಗಳಿಗೆ ಮಾದರಿಯಾಗಿದೆ.
ಇದನ್ನೂ ಓದಿ : ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿ ಮೂರ್ತಿ ಪ್ರತಿಷ್ಠಾಪನೆ: ಸಾವರ್ಕರ್ ಪರ ಘೋಷಣೆ