ಬೆಂಗಳೂರು: ವ್ಯಕ್ತಿಯೊಬ್ಬನನ್ನು ಕೊಲೆಗೈದು ದ್ವಿಚಕ್ರ ವಾಹನದಲ್ಲಿ ಶವ ಸಾಗಿಸಿ ಎಸೆದಿದ್ದ ದಂಪತಿ ಸಹಿತ ಮೂವರು ಆರೋಪಿಗಳನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಸೆರೆ ಹಿಡಿದಿದ್ದಾರೆ. ರೀನಾ, ಆಕೆಯ ಪತಿ ಗಂಗೇಶ್ ಹಾಗೂ ಬಿಜೋಯ್ ಬಂಧಿತ ಆರೋಪಿಗಳು. ನಿಬಾಶೀಸ್ ಪಾಲ್ ಕೊಲೆಯಾದ ವ್ಯಕ್ತಿ.
ಉತ್ತರ ಪ್ರದೇಶ ಮೂಲದ ರೀನಾ ಹಾಗೂ ಗಂಗೇಶ್ ದಂಪತಿ ಎಲೆಕ್ಟ್ರಾನಿಕ್ ಸಿಟಿ ವ್ಯಾಪ್ತಿಯಲ್ಲಿ ವಾಸವಿದ್ದರು. ಗಂಗೇಶ್ ಪೈಂಟಿಂಗ್ ಕೆಲಸ ಮಾಡಿಕೊಂಡಿದ್ದರೆ, ರೀನಾ ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುತ್ತಿದ್ದಳು. ಈ ನಡುವೆ ಕೊರಿಯರ್ ಡಿಲವರಿ ಮಾಡುತ್ತಿದ್ದ ಅಸ್ಸಾಂ ಮೂಲದ ನಿಬಾಶಿಸ್ ಪಾಲ್ ಮತ್ತು ರೀನಾ ಪರಿಚಯವಾಗಿ ಬಳಿಕ ದೈಹಿಕ ಸಂಬಂಧಕ್ಕೆ ತಿರುಗಿತ್ತು. ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತ ಗಂಗೇಶ್ ಹೆಂಡತಿಯನ್ನ ಬಿಟ್ಟು ವಾಪಸ್ ಊರಿಗೆ ಮರಳಿದ್ದ.
ಗಂಗೇಶ್ ಬಿಟ್ಟು ಹೋದ ಬಳಿಕ ರೀನಾಗೆ ನಿಭಾಶಿಸ್ ಕಾಟ ಕೊಡಲಾರಂಭಿಸಿದ್ದನಂತೆ. ಹಣಕ್ಕಾಗಿ ಆಕೆಯಿಂದ ವೇಶ್ಯಾವಾಟಿಕೆ ನಡೆಸಲು ಒತ್ತಾಯಿಸಲಾರಂಭಿಸಿದ್ದ. ಇದರಿಂದ ಬೇಸತ್ತ ರೀನಾ ಈ ಬಗ್ಗೆ ತನ್ನ ಗಂಡ ಗಂಗೇಶ್ಗೆ ಫೋನ್ ಮಾಡಿ ವಿಚಾರ ತಿಳಿಸಿದ್ದಳು. ಕೂಡಲೇ ಗಂಗೇಶ್ ತನ್ನ ಸ್ನೇಹಿತ ಬಿಜೋಯ್ ಜತೆಗೆ ಬೆಂಗಳೂರಿಗೆ ಬಂದಿದ್ದ. ಡಿ. 3ರಂದು ಆರೋಪಿಗಳು ನಿಭಾಶಿಸ್ನ ಕತ್ತು ಬಿಗಿದು ಕೊಲೆಗೈದಿದ್ದರು. ಬಳಿಕ ಶವವನ್ನ ದ್ವಿಚಕ್ರ ವಾಹನದಲ್ಲಿ ಸಾಗಿಸಿ ಎಲೆಕ್ಟ್ರಾನಿಕ್ ಸಿಟಿ ಠಾಣಾ ವ್ಯಾಪ್ತಿಯ ನೈಸ್ ರಸ್ತೆಯಲ್ಲಿ ಎಸೆದು ಪರಾರಿಯಾಗಿದ್ದರು. ಆರೋಪಿಗಳ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಇದನ್ನೂ ಓದಿ: ಬೆಂಗಳೂರಿನ ದೇವಾಲಯದಲ್ಲಿ ಮಹಿಳೆ ಮೇಲೆ ಹಲ್ಲೆ ಪ್ರಕರಣ: ಆರೋಪಿ ಧರ್ಮದರ್ಶಿ ಬಂಧನ
ಮಾರನೇ ದಿನ ಶವ ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ತನಿಖೆ ಕೈಗೊಂಡಾಗ ಆರೋಪಿಗಳ ಕೃತ್ಯ ಬಯಲಾಗಿದೆ. ಸದ್ಯ ಮೂವರನ್ನೂ ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ ಬಾಬಾ ತಿಳಿಸಿದ್ದಾರೆ.
ಪ್ರಿಯಕರನೊಂದಿಗೆ ಸೇರಿ ಗಂಡನ ಹತ್ಯೆ: ಪ್ರಿಯಕರನ ಜತೆಗೂಡಿ ಗಂಡನನ್ನೇ ಕೊಲೆ ಮಾಡಿದ್ದ ಮಹಿಳೆಗೆ ಕೊನೆಗೆ ಸ್ವಂತ ಮಗಳು ನುಡಿದ ಸತ್ಯ ಉರುಳಾಗಿದೆ. ಕೊಲೆ ಮಾಡಿ, ಸಹಜ ಸಾವು ಎಂದು ಬಿಂಬಿಸಿ ಆರಾಮಾಗಿದ್ದವರು ಆರು ತಿಂಗಳ ಬಳಿಕ ಮಗಳು ಬಿಚ್ಚಿಟ್ಟ ಸತ್ಯದಿಂದ ಕೊನೆಗೆ ಪ್ರಿಯಕರನ ಜೊತೆ ಪೊಲೀಸರ ಅತಿಥಿಯಾಗಿದ್ದಾಳೆ. ನಂದಿನಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಆರು ತಿಂಗಳ ಹಿಂದೆ ಆಂಜನೇಯ(35) ಎಂಬಾತನನ್ನ ಕೊಲೆಯಾಗಿತ್ತು. ಈ ಸಂಬಂಧ ಮೃತನ ಪತ್ನಿ ಅನಿತಾ ಹಾಗೂ ಆಕೆಯ ಪ್ರಿಯಕರ ರಾಕೇಶ್ನನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಪ್ರಿಯಕರನೊಂದಿಗೆ ಸೇರಿ ಗಂಡನ ಹತ್ಯೆ: ಆರು ತಿಂಗಳ ಬಳಿಕ ತಾಯಿಗೆ ಉರುಳಾದ ಮಕ್ಕಳ ಹೇಳಿಕೆ