ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆ ವೇಳೆ ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ಜಯ ಗಳಿಸಿದ್ದ ಮುನಿರತ್ನ ಚುನಾವಣೆಯಲ್ಲಿ ಅಕ್ರಮ ಎಸಗಿದ್ದಾರೆ ಎಂಬ ಆರೋಪಕ್ಕೆ ಸೂಕ್ತ ಸಾಕ್ಷ್ಯ ಒದಗಿಸುವಂತೆ ಹೈಕೋರ್ಟ್ ದೂರುದಾರರಿಗೆ ಸೂಚಿಸಿದೆ.
ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಭಾ ಕ್ಷೇತ್ರದಿಂದ ಗೆಲುವು ಸಾಧಿಸಿದ್ದ ಮುನಿರತ್ನ (ಅನರ್ಹ ಶಾಸಕ) ಆಯ್ಕೆಯನ್ನು ಅಸಿಂಧುಗೊಳಿಸಿ ತಮ್ಮನ್ನು ವಿಜೇತ ಅಭ್ಯರ್ಥಿಯಾಗಿ ಘೋಷಿಸಬೇಕು ಎಂದು ಕೋರಿ ಬಿಜೆಪಿಯ ಪರಾಜಿತ ಅಭ್ಯರ್ಥಿ ತುಳಸಿ ಮುನಿರಾಜುಗೌಡ ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ ಮಂಗಳವಾರ ವಿಚಾರಣೆ ನಡೆಸಿತು.
ಈ ವೇಳೆ ಮುನಿರತ್ನ ಪರ ವಾದಿಸಿದ ಹಿರಿಯ ವಕೀಲ ಅಶೋಕ ಹಾರನಹಳ್ಳಿ, ಮುನಿರಾಜುಗೌಡ ಅವರ ಆರೋಪಕ್ಕೆ ಮತ್ತು ಬೇಡಿಕೆಗಳಿಗೆ ಸಮರ್ಥ ಆಧಾರಗಳಿಲ್ಲ. ಹೀಗಾಗಿ, ಪೀಠ ದೂರುದಾರರ ಅರ್ಜಿ ವಜಾಗೊಳಿಸಿದರೆ ಕ್ಷೇತ್ರಕ್ಕೆ ಮರು ಚುನಾವಣೆ ನಡೆಸಬಹುದು ಎಂದು ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಮುನಿರತ್ನ ಯಾವ ರೀತಿ ಚುನಾವಣಾ ಭ್ರಷ್ಟಚಾರ ಎಸಗಿ ಗೆದ್ದಿದ್ದಾರೆ?. ಅಂತಹ ಅಕ್ರಮಗಳನ್ನು ಸಾಬೀತುಪಡಿಸಲು ನಿಮ್ಮ ಬಳಿ ಇರುವ ಅಂಶಗಳು ಯಾವುವು? ಎಂಬುದನ್ನು ಪೀಠಕ್ಕೆ ಮನವರಿಕೆ ಮಾಡಿಕೊಡಿ ಎಂದು ಅರ್ಜಿದಾರರ ಪರ ವಕೀಲರಿಗೆ ಸೂಚಿಸಿ, ವಿಚಾರಣೆಯನ್ನು ಫೆ.13ಕ್ಕೆ ಮುಂದೂಡಿದೆ.