ಬೆಂಗಳೂರು: ಮಹಿಳೆಯರ ಬಗ್ಗೆ ಹೊಸಕೋಟೆ ಉಪ ಚುನಾವಣೆ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಅವಹೇಳನಕಾರಿ ಹೇಳಿಕೆ ನೀಡಿ ಅಪಮಾನ ಮಾಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯೆ ಮೋಟಮ್ಮ ಆರೋಪಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಹಿಳಾ ಮುಖಂಡರ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಎಂಟಿಬಿ ನಾಗರಾಜ್ ನಮ್ಮ ಜೊತೆ ರಾಜಕಾರಣ ಮಾಡಿದ್ದವರು. ಆದರೆ ಬಿಜೆಪಿಗೆ ಹೋಗ್ತಿದ್ದಂತೆ ಇಂತಹ ಹೇಳಿಕೆ ನೀಡ್ತಾರೆ. ಬುದ್ಧಿ ಭ್ರಮಣೆಯಾದಂತೆ ಅವರು ಹೇಳಿಕೆ ಕೊಟ್ಟಿದ್ದಾರೆ. ಮಹಿಳಾ ಅಭ್ಯರ್ಥಿ ನನ್ನ ಮುಂದೆ ಏನು ಮಾಡಬಲ್ಲರು ಎಂದು ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಸುರೇಶ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡ್ತಾರೆ. ನಾವೆಲ್ಲರೂ ರಾಜಕಾರಣ ಮಾಡಿಲ್ಲವೇ ಎಂದು ಪ್ರಶ್ನಿಸಿದರು.
ಅವರ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸಬೇಕು. ಅವರಿಗೆ ಈ ಹೇಳಿಕೆಯೇ ಮುಳ್ಳಾಗುತ್ತದೆ. ಅವರ ಮನೆಯ ಮಹಿಳೆಯರ ಮೇಲೆ ಅವರಿಗೆ ಗೌರವ ಇಲ್ಲ ಅನ್ನೋದು ಇದು ತೋರಿಸುತ್ತದೆ. ಅವರು ಕ್ಷಮೆ ಕೇಳುವ ವಿಚಾರ ಅಲ್ಲ. ಅವರು ಮಹಿಳೆಯರ ಬಗ್ಗೆ ಅಗೌರವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ. ಚುನಾವಣಾ ಆಯೋಗ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಮನವಿ ಮಾಡಿದರು.