ಬೆಂಗಳೂರು: ಸಚಿವ ಸ್ಥಾನದ ಕುರಿತು ಮಾತನಾಡಲು ಇದು ಸೂಕ್ತ ಸಮಯವಲ್ಲ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿಯಾಗಿ ಮರು ನೇಮಕವಾಗಿರುವ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.
ಬಿಜೆಪಿ ಕಚೇರಿಯ ಜಗನ್ನಾಥ ಭವನದಲ್ಲಿ ಸಚಿವ ಸ್ಥಾನ ಕೈ ತಪ್ಪಿರುವ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅವರು, ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಈಗಾಗಲೇ ಸಚಿವನಾಗಿ ಕೆಲಸ ಮಾಡಿದ್ದೇನೆ. ಸದ್ಯಕ್ಕೆ ಹಾನಗಲ್ ಹಾಗೂ ಸಿಂದಗಿ ಉಪ ಚುನಾವಣೆ ಬರುತ್ತಿದೆ. ಹೀಗಾಗಿ, ಈಗ ಸಚಿವ ಸ್ಥಾನ ಕೇಳುವುದು ಸರಿಯಲ್ಲ. ಕಾಲ ಬಂದಾಗ ಕೇಳುತ್ತೇನೆ, ಜೊತೆಗೆ ಪಕ್ಷ ಸಹ ನನ್ನನ್ನು ಪರಿಗಣಿಸಬಹುದು ಎಂದು ವಿಶ್ವಾಸವನ್ನೂ ವ್ಯಕ್ತಪಡಿಸಿದರು.
ಹಿಂದೆ ನಮ್ಮ ನಾಯಕರಾದ ಬಿಎಸ್ವೈ ನನ್ನನ್ನು ಸಿಎಂ ರಾಜಕೀಯ ಕಾರ್ಯದರ್ಶಿಯಾಗಿ ಮಾಡಿದ್ದರು. ಆ ವೇಳೆ, ಪ್ರಮಾಣಿಕವಾಗಿ ಕೆಲಸ ಮಾಡಿದ್ದೇನೆ. ಈಗ ಮತ್ತೆ ಸಿಎಂ ಬೊಮ್ಮಾಯಿ ನನ್ನನ್ನು ರಾಜಕೀಯ ಕಾರ್ಯದರ್ಶಿ ಮಾಡಿದ್ದಾರೆ. ಇದರಲ್ಲಿ ವಿಶೇಷತೆ ಏನೂ ಇಲ್ಲ. ಸಿಎಂ ಮತ್ತು ಶಾಸಕರ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತೇನೆ. ನನ್ನ ಆಯ್ಕೆ ಮಾಡಿದ ಪಕ್ಷ ಮತ್ತು ಪಕ್ಷದ ನಾಯಕರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.