ಬೆಂಗಳೂರು: ಸಂಸದ ಅನಂತ್ ಕುಮಾರ್ ಹೆಗಡೆ ಮಾನಸಿಕ ಅಸ್ವಸ್ಥರಾಗಿದ್ದು, ಅವರಿಗೆ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವುದು ಉತ್ತಮ ಎಂದು ಸಂಸದ ಡಿ.ಕೆ. ಸುರೇಶ್ ಹೇಳಿದರು. ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಪ್ರಗತಿಪರರ ಬಗ್ಗೆ ಅನಂತ್ ಕುಮಾರ್ ಹೆಗಡೆ ನೀಡಿದ ವಿವಾದಾತ್ಮಕ ಹೇಳಿಕೆಗೆ ತಿರುಗೇಟು ನೀಡಿದ ಅವರು, 'ಅನಂತ್ ಕುಮಾರ್ ಹೆಗಡೆ ಯಾರಿಗೂ ಬೇಡವಾದ ವಸ್ತು. ಅವರು ಬಿಜೆಪಿಯವರಿಗೂ ಬೇಡವಾಗಿದ್ದಾರೆ. ಅವರನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಿ ತಪಾಸಣೆ ಮಾಡಿಸುವುದೊಳಿತು ಎಂದರು.
ಸ್ವಾತಂತ್ರ್ಯ ಹೋರಾಟಗಾರರು ಇರದೇ ಹೋಗಿದ್ದರೆ ಹೆಗಡೆಗೂ ಮಾತನಾಡುವ ಅವಕಾಶವೇ ಇರುತ್ತಿರಲಿಲ್ಲ. ಬ್ರಿಟಿಷರ ಆಳ್ವಿಕೆ ಅಥವಾ ಹಿಟ್ಲರ್ ಮಾದರಿ ಆಡಳಿತ ಇದ್ದಿದ್ದರೆ, ಹೆಗಡೆಗೂ ಮಾತನಾಡುವ ವಾಕ್ ಸ್ವಾತಂತ್ರ್ಯ ಇರುತ್ತಿರಲಿಲ್ಲ. ಅವರು ಇಷ್ಟೊಂದು ಧೈರ್ಯವಾಗಿ ಮಾತನಾಡುತ್ತಿದ್ದಾರೆ ಅಂದ್ರೆ, ಸ್ವಾತಂತ್ರ್ಯ ಹೋರಾಟಗಾರರೇ ಕಾರಣ ಎಂದರು.
ಹೆಗಡೆ ಅವರನ್ನು ಅವರೇ ಗುರುತಿಸಿಕೊಳ್ಳಬೇಕಿದೆ. ಬಿಜೆಪಿಯವರು ಮತ್ತೆ ಅವರನ್ನು ಕೈ ಹಿಡಿಯುತ್ತಾರೇನೋ, ಲೈಮ್ ಲೈಟ್ಗೆ ಬರಬೇಕು, ಅಧಿಕಾರ ಕೊಡುತ್ತಾರೆ ಎಂದು ಹೀಗೆಲ್ಲಾ ಮಾತನಾಡಿದ್ದಾರೆ. ಬಿಜೆಪಿ ರಾಷ್ಟ್ರೀಯ ನಾಯಕರಿಗೆ ನೈತಿಕತೆ ಇದ್ದರೇ, ಅನಂತ್ ಕುಮಾರ್ ಹೆಗಡೆಯನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.