ವಿವಾದಿತ ವ್ಯಕ್ತಿಗಳು ಹಾಗು ನೈಜ ಘಟನೆಗಳು ಕನ್ನಡ ಚಿತ್ರರಂಗದಲ್ಲಿ ಸಿನಿಮಾ ಟೈಟಲ್ ಆಗೋದು ಕಾಮನ್ ಆಗಿದೆ. ಇದೀಗ ಕಳೆದ ಒಂದು ವಾರದಿಂದ ರಾಜ್ಯದ ಗಮನ ಸೆಳೆದಿರುವ ಮಹಿಳಾ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳಿಬ್ಬರ ಕಿತ್ತಾಟ ಸಿನಿಮಾ ಆಗಲಿದೆ. ಇಬ್ಬರು ನಿರ್ಮಾಪಕರು ಈ ಬ್ಯೂರೋಕ್ರಾಟ್ ಬಡಿದಾಟವನ್ನು ಸಿನಿಮಾ ಮಾಡಲು ಮುಂದಾಗಿದ್ದು, ಟೈಟಲ್ ರಿಜಿಸ್ಟರ್ಗಾಗಿ ಫಿಲಂ ಚೇಂಬರ್ಗೆ ಅರ್ಜಿ ಹಾಕಿದ್ದಾರೆ.
ಹೌದು ರಾಜ್ಯದಲ್ಲಿ ಇಬ್ಬರು ಮಹಿಳಾ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳಿಬ್ಬರ ಕಿತ್ತಾಟ ಸಿನಿಮಾ ಮಾಡಲು ಇಬ್ಬರು ಸಿನಿಮಾ ನಿರ್ಮಾಪಕರು ಮುಂದೆ ಬಂದಿದ್ದಾರೆ. ಈ ಹಿಂದೆ ಐದು ಅಡಿ ಏಳು ಅಂಗುಲ ಕೋಡಂಗಿ ಸಿನಿಮಾಗಳನ್ನು ನಿರ್ಮಿಸಿರುವ ಬಿಯಾಂಡ್ ಡ್ರೀಮ್ಸ್ ಹೆಸರಿನ ನಿರ್ಮಾಣ ಸಂಸ್ಥೆ ಹಾಗೂ ಪ್ರವೀಣ್ ಶೆಟ್ಟಿ ಎಂಬ ನಿರ್ಮಾಪಕರು ಎರಡು ಪ್ರತ್ಯೇಕ ಟೈಟಲ್ ನೀಡುವಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಅರ್ಜಿ ಹಾಕಲಾಗಿದೆ.
ನೈಜ ಘಟನೆ ಆಧಾರಿತ ಸಿನಿಮಾ ಆಗಿರಲಿದೆ: ಇನ್ನು ಆರ್ವಿ ವರ್ಸಸ್ ಎಸ್ಆರ್ ಹೆಸರಿನಲ್ಲಿ ನಿತ್ಯಾನಂದ ಪ್ರಭು ಎಸ್ ಎಂಬುವರು ಸಿನಿಮಾವನ್ನ ನಿರ್ದೇಶನ ಮಾಡಲಿದ್ದು, ಬಿಯಾಂಡ್ ಡ್ರೀಮ್ಸ್ ಹೆಸರಿನ ನಿರ್ಮಾಣ ಸಂಸ್ಥೆ ಬಂಡವಾಳ ಹೂಡಲಿದೆ. ನಿರ್ದೇಶಕ ನಿತ್ಯಾನಂದ ಪ್ರಭು ಮಾತನಾಡಿ, ಆರ್ vs ಆರ್ ಟೈಟಲ್ ನೀಡುವಂತೆ ಅರ್ಜಿ ಹಾಕಲಾಗಿದ್ದು, ಇದು ನೈಜ ಘಟನೆ ಆಧಾರಿತ ಸಿನಿಮಾ ಆಗಿರಲಿದೆ. ಆದರೆ ಸಿನಿಮಾದಲ್ಲಿ ಒಂದೊಳ್ಳೆ ಸಂದೇಶ ಸಹ ಇರುತ್ತದೆ. ಫಿಲ್ಮ್ ಚೇಂಬರ್ ಟೈಟಲ್ ಕೊಟ್ಟ ನಂತರ ಕಥೆಯ ಸಾರಾಂಶವನ್ನು ಫಿಲ್ಮ್ ಚೇಂಬರ್ಗೆ ನೀಡುತ್ತೇವೆ ಎಂದು ಹೇಳಿದ್ದಾರೆ.
ಸತ್ಯಕತೆಯನ್ನು ಸಿನಿಮಾ ಮಾಡಲು ನಿರ್ಮಾಪಕರು ಕಾತರ: ಅಧಿಕಾರ, ರಾಜಕೀಯ, ಭ್ರಷ್ಟಾಚಾರ, ಹಣ, ಸೌಂದರ್ಯ, ಮಾದಕತೆ, ಪ್ರೀತಿ, ಮೋಸ, ನಿರಾಸೆ, ಆತ್ಮಹತ್ಯೆ, ಕುಟುಂಬ ಹಲವು ಅಂಶಗಳನ್ನು ಒಳಗೊಂಡ ಈ ಸತ್ಯಕತೆಯನ್ನು ಸಿನಿಮಾ ಮಾಡಲು ನಿರ್ಮಾಪಕರು ಕಾತರರಾಗಿದ್ದು, ತಾವು ಕೋರಿರುವ ಟೈಟಲ್ ಅನ್ನು ನೀಡುವಂತೆ ಫಿಲ್ಮ್ ಚೇಂಬರ್ಗೆ ಮನವಿ ಮಾಡಿದ್ದಾರೆ.
ಸೋಮವಾರ ಫಿಲ್ಮ್ ಚೇಂಬರ್ ಟೈಟಲ್ ಕಮಿಟಿ ಸಭೆ: ಟೈಟಲ್ ರಿಜಿಸ್ಟರ್ಗೆ ಅರ್ಜಿ ಬಂದಿರುವ ಬಗ್ಗೆ ಮಾತನಾಡಿರೋ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಬಾ ಮಾ ಹರೀಶ್ ಮಾತನಾಡಿ. ಕೆಲ ದಿನಗಳ ಹಿಂದೆಷ್ಟೇ ಸಿನಿಮಾ ಟೈಟಲ್ಗಾಗಿ ಅರ್ಜಿಗಳು ಬಂದಿವೆ. ಬಂದಿರುವ ಎರಡೂ ಅರ್ಜಿಗಳನ್ನು ಸೋಮವಾರ ಟೈಟಲ್ ಕಮಿಟಿಯ ಮುಂದಿಡುತ್ತೇವೆ. ಸಮಿತಿ ಅನುಮತಿ ನೀಡಿದರೆ ಟೈಟಲ್ ನೀಡುತ್ತೇವೆ. ಯಾವುದೇ ವ್ಯಕ್ತಿಯ ಜೀವನ ಆಧರಿಸಿ ಸಿನಿಮಾ ಮಾಡುವುದಾದರೆ ಅವರಿಂದ ನಿರಪೇಕ್ಷಣಾ ಪತ್ರ (NOC) ಪಡೆಯಬೇಕಾಗುತ್ತದೆ ಎಂದಿದ್ದಾರೆ. ಈ ಸಂಬಂಧ ಈ ಸೋಮವಾರ ಫಿಲ್ಮ್ ಚೇಂಬರ್ ಟೈಟಲ್ ಕಮಿಟಿ ಸಭೆ ಮಾಡಿದ ಬಳಿಕ ಈ ಟೈಟಲ್ ಗಳನ್ನು ಕೊಡಬೇಕಾ ಬೇಡ್ವಾ ಅನ್ನೋದು ಗೊತ್ತಾಗಲಿದೆ ಎಂದಿದ್ದಾರೆ.
ಇದನ್ನೂ ಓದಿ:'ಮಾರ್ಟಿನ್' ಧ್ರುವ ಸರ್ಜಾ ಸೆಕ್ಯೂರಿಟಿಗೆ ನಿಂತಿದ್ದ ಚೆಂದುಳ್ಳಿ ಚೆಲುವೆಯರು ಯಾರು ಗೊತ್ತೇ?