ಬೆಂಗಳೂರು: ಡಿ.ಜೆ ಹಳ್ಳಿ-ಕೆಜೆ ಹಳ್ಳಿ ಪ್ರಕರಣದಲ್ಲಿ ಬಂಧಿತರಾಗಿರುವ ಬಹುತೇಕರು ನ್ಯಾಯಾಲಯದಲ್ಲಿ ನಿರ್ದೋಷಿಗಳೆಂದು ಸಾಬೀತಾಗುವ ವಿಶ್ವಾಸವಿದೆ ಎಂದು ಎಸ್ಡಿಪಿಐ ಮುಖಂಡ ಮುಜಾಮಿಲ್ ಪಾಷಾ ಹೇಲಿದರು. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಹುತೇಕ ಬಂಧಿತರು ಅಮಾಯಕರಾಗಿದ್ದರು. ಎಸ್ಡಿಪಿಐ ಪಕ್ಷದ 8-10 ಕಾರ್ಯಕರ್ತರನ್ನು ಬಂಧಿಸಲಾಗಿತ್ತು. ಅವರಲ್ಲಿ ನನ್ನನ್ನು ಸೇರಿ ಮತ್ತಿತರರು ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದಾರೆ ಎಂದು ಮಾಹಿತಿ ನೀಡಿದರು.
ಬಿಜೆಪಿ ಮಂತ್ರಿಗಳ ಒತ್ತಡದಿಂದ ನೂರಾರು ಅಮಾಯಕ ಮುಸ್ಲಿಮರನ್ನು ಬಂಧಿಸಿ ಕೇಸ್ ಜಡಿಯಲಾಗಿತ್ತು. ನಮಗೆ ನ್ಯಾಯಾಂಗದ ಮೇಲೆ ಸಂಪೂರ್ಣ ಭರವಸೆ ಇತ್ತು, ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡಿದೆವು. ಮುಂದೆ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ನಿರಪರಾಧಿಗಳು ಎಂದು ಸಾಬೀತಾಗುವ ಎಲ್ಲ ಭರವಸೆ ಇದೆ ಎಂದು ಮುಜಾಮಿಲ್ ಪಾಷಾ ತಿಳಿಸಿದರು.
ಪ್ರಕರಣದ ಹಿನ್ನೆಲೆ
ಡಿಜೆ ಹಳ್ಳಿ - ಕೆಜಿ ಹಳ್ಳಿಯಲ್ಲಿ ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಹಿಂಸಾಚಾರ ನಡೆದಿತ್ತು. ಈ ಸಂಬಂಧ ಪ್ರವಾದಿ ಮೊಹಮ್ಮದ್ ಬಗ್ಗೆ ಆಕ್ಷೇಪಾರ್ಹ ಪೋಸ್ಟನ್ನು ನವೀನ್ ಎಂಬಾತ ಹಾಕಿದ್ದ. ಇದರ ವಿರುದ್ಧ ಮುಸ್ಲಿಂ ಸಮುದಾಯ ಪೊಲೀಸ್ ಠಾಣೆಯಲ್ಲಿ ಜಮಾವಣೆಗೊಂಡು ನವೀನನನ್ನು ಬಂಧಿಸಲು ಆಗ್ರಹಿಸಿದ್ದರು. ಈ ಸಂದರ್ಭದಲ್ಲಿ ಹಿಂಸಾಚಾರ ನಡೆದು ಪೊಲೀಸ್ ಗೋಲಿಬಾರಿನಲ್ಲಿ ಮೂವರು ಮುಸ್ಲಿಮರು ಸಾವನ್ನಪ್ಪಿದ್ದರು. ನಾನೂರಕ್ಕೂ ಹೆಚ್ಚು ಮುಸ್ಲಿಮರನ್ನು ಬಂಧಿಸಲಾಗಿತ್ತು.