ಬೆಂಗಳೂರು : ರಾಜ್ಯದಲ್ಲಿ ಮುಜರಾಯಿ ಇಲಾಖೆಗೆ ಒಳಪಡುವ ದೇವಸ್ಥಾನಗಳಿಂದ ಹೆಚ್ಚು ಆದಾಯ ಬರುತ್ತಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆ ಜಾರಿಯಾದಾಗಿನಿಂದ ದೇವಾಲಯಗಳಲ್ಲಿ ಮಹಿಳಾ ಭಕ್ತರ ಸಂಖ್ಯೆಯೂ ಏರಿಕೆಯಾಗಿದೆ. ಮಹಿಳಾ ಪ್ರಯಾಣಿಕರಿಗೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸಿರುವ ಕಾರಣ ಮಹಿಳೆಯರು ದೇವಸ್ಥಾನಗಳಿಗೆ ಹೆಚ್ಚೆಚ್ಚು ತೆರಳುತ್ತಿದ್ದಾರೆ. ಇದರಿಂದ ದೇವಾಲಯಗಳ ಆದಾಯವೂ ಹೆಚ್ಚುತ್ತಿದೆ.
ಇದರ ಜೊತೆಗೆ ರಾಜ್ಯದ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಬರುವ ಎ ಹಾಗೂ ಬಿ ಶ್ರೇಣಿಯ ದೇವಸ್ಥಾನಗಳಲ್ಲಿ 65 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರು ನೇರವಾಗಿ ದೇವರ ದರ್ಶನ ಪಡೆಯಲು ರಾಜ್ಯ ಸರ್ಕಾರ ಹೊಸ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಇದರಿಂದಲೂ ಭಕ್ತರ ಸಂಖ್ಯೆ ಜಾಸ್ತಿಯಾಗಿದೆ.
ಹಿರಿಯ ನಾಗರೀಕರು ಅವರ ವಯಸ್ಸಿನ ದಾಖಲೆ/ ಆಧಾರ್ ಕಾರ್ಡ್ ತೋರಿಸಿದಲ್ಲಿ ಅವರಿಗೆ ದರ್ಶನಕ್ಕೆ ಅನುಕೂಲವಾಗುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಎ ಕ್ಯಾಟಗರಿಯ 205, ಬಿ ಕ್ಯಾಟಗರಿಯ 193 ದೇವಸ್ಥಾನಗಳು ಮುಜರಾಯಿ ಇಲಾಖೆಯಲ್ಲಿವೆ. ಸಿ ಕ್ಯಾಟಗರಿಯಲ್ಲಿ ಸುಮಾರು 3 ಸಾವಿರ ದೇವಸ್ಥಾನಗಳಿವೆ. ಎ ಹಾಗೂ ಬಿ ನಲ್ಲಿ ಹೆಚ್ಚಿನ ಜನ ಬರುತ್ತಾರೆ ಎಂದು ಮುಜರಾಯಿ ಇಲಾಖೆ ತಿಳಿಸಿದೆ.
ಸರ್ಕಾರಕ್ಕೆ ಅತಿ ಹೆಚ್ಚಿನ ಆದಾಯ ಬರುವ ರಾಜ್ಯದ ಪ್ರಮುಖ 10 ದೇವಸ್ಥಾನಗಳ ಪಟ್ಟಿಯನ್ನು ಇಲಾಖೆ ಬಿಡುಗಡೆ ಮಾಡಿದೆ. 2022-23ರ ಅವಧಿಯಲ್ಲಿ ದೇವಸ್ಥಾನಗಳಲ್ಲಿ ಗಳಿಸಿರುವ ಒಟ್ಟು ಆದಾಯ ಮತ್ತು ಒಟ್ಟು ವೆಚ್ಚದ ಪಟ್ಟಿ ಈ ಕೆಳಕಂಡಂತಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಮೊದಲ ಸ್ಥಾನ ಪಡೆದಿದೆ. ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನ, ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಕ್ರಮವಾಗಿ 2 ಮತ್ತು 3ನೇ ಸ್ಥಾನ ಪಡೆದುಕೊಂಡಿದೆ.
ದೇವಾಲಯಗಳ ಆದಾಯ, ವೆಚ್ಚದ ಅಂಕಿ ಅಂಶಗಳು:
ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ : ಆದಾಯ- 123.64 ಕೋಟಿ ರೂ. ವೆಚ್ಚ- 63.77 ಕೋಟಿ ರೂ.
ಶ್ರೀ ಮೂಕಾಂಬಿಕಾ ದೇವಸ್ಥಾನ : ಆದಾಯ- 59.47 ಲಕ್ಷ ರೂ, ವೆಚ್ಚ- 33.32 ಲಕ್ಷ ರೂ.
ಶ್ರೀ ಚಾಮುಂಡೇಶ್ವರಿ ದೇವಾಲಯ : ಆದಾಯ- 52.40 ಲಕ್ಷ ರೂ., ವೆಚ್ಚ- 52.40 ಲಕ್ಷ ರೂ.
ಶ್ರೀ ಎಡೆಯೂರು ಸಿದ್ಧಲಿಂಗೇಶ್ವರ ದೇವಸ್ಥಾನ : ಆದಾಯ- 36.48 ಲಕ್ಷ ರೂ, ವೆಚ್ಚ- 35.68 ಲಕ್ಷ ರೂ.
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ : ಆದಾಯ- 32.10 ಕೋಟಿ ರೂ, ವೆಚ್ಚ- 25.97 ಕೋಟಿ ರೂ.
ನಂಜನಗೂಡು ಶ್ರೀಕಂಠೇಶ್ವರ ಸ್ವಾಮಿ ದೇವಾಲಯ: ಆದಾಯ- 26.71 ಕೋಟಿ ರೂ, ವೆಚ್ಚ- 18. 74 ಕೋಟಿ ರೂ.
ದೊಡ್ಡಬಳ್ಳಾಪುರ ಘಾಟಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ : ಆದಾಯ- 12.25 ಕೋಟಿ ರೂ, ವೆಚ್ಚ- 7.40 ಕೋಟಿ ರೂ.
ಸವದತ್ತಿ ಶ್ರೀ ರೇಣುಕಾ ಎಲ್ಲಮ್ಮ ದೇವಸ್ಥಾನ : ಆದಾಯ- 22.52 ಕೋಟಿ ರೂ, ವೆಚ್ಚ- 11.51 ಕೋಟಿ ರೂ.
ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಮಂದಾರ್ತಿ : ಆದಾಯ- 14 .55 ಕೋಟಿ ರೂ. ವೆಚ್ಚ- 13.02 ಕೋಟಿ ರೂ.
ಶ್ರೀ ಬನಶಂಕರಿ ದೇವಸ್ಥಾನ, ಬೆಂಗಳೂರು : ಆದಾಯ- 10.58 ಕೋಟಿ ರೂ. ಹಾಗೂ ವೆಚ್ಚ- 19.41 ಕೋಟಿ ರೂ.
ಇದನ್ನೂ ಓದಿ: 'ಹುದ್ದೆಗಳ ದುರ್ಬಳಕೆ, ಸರ್ಕಾರಕ್ಕೆ ಕೋಟಿಗಟ್ಟಲೆ ನಷ್ಟ': 25 ವೈದ್ಯರನ್ನು ಮಾತೃ ಇಲಾಖೆಗೆ ವಾಪಸ್ ಕಳುಹಿಸಲು ಪ್ರಸ್ತಾವನೆ