ಬೆಂಗಳೂರು: ಒಂದು ಬಾರಿ ಟಿಕೆಟ್ ಪ್ರಕಟವಾದ ಮೇಲೆ ಅಸಮಾಧಾನಗಳು ಸಹಜ. ಇಂದೇ ಎಲ್ಲಾ ಅಸಮಧಾನಿತರನ್ನು ಕರೆಯಿಸಿ ಮಾತುಕತೆ ನಡೆಸುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ. ಅದೆಲ್ಲಾ ಕೇವಲ ಊಹಾಪೋಹ ಅಷ್ಟೇ ಎಂದು ಬಿಎಸ್ವೈ ಸ್ಪಷ್ಟಪಡಿಸಿದ್ದಾರೆ.
ಇಂದು ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಚಿವ ಡಾ. ಎ.ಬಿ. ಮಾಲಕರೆಡ್ಡಿ ಬಿಜೆಪಿ ಸೇರ್ಪಡೆಯಾದರು. ಪಕ್ಷದ ಚುನಾವಣಾ ಕಚೇರಿಯಲ್ಲಿ ಪಕ್ಷದ ಶಾಲು ಹೊದಿಸಿ ಧ್ವಜ ನೀಡುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಬೆಂಬಲಿಗರೊಂದಿಗೆ ಪಕ್ಷಕ್ಕೆ ಬರಮಾಡಿಕೊಂಡರು. ನಂತರ ಮಾತನಾಡಿದ ಅವರು, ಡಾ.ಮಾಲಕರೆಡ್ಡಿಯವರ ಸೇರ್ಪಡೆಯಿಂದ ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ ಎಂದರು.
ಬೆಂಗಳೂರು ದಕ್ಷಿಣದಲ್ಲಿ ಮೋದಿ ನಿಲ್ತಾರೆ ಎಂಬ ವಿಚಾರ ಸತ್ಯಕ್ಕೆ ದೂರವಾದದ್ದು. ಅಂತಹ ಯಾವುದೇ ಬೆಳವಣಿಗೆ ಇಲ್ಲ. ಇನ್ನು ಏಳು ಕ್ಷೇತ್ರಗಳಲ್ಲಿ ಯಾರು ಅಭ್ಯರ್ಥಿ ಎನ್ನುವುದು ಇಂದು ಸಂಜೆ ಗೊತ್ತಾಗಲಿದೆ. ರಾಜ್ಯದಲ್ಲಿ 22 ಕ್ಷೇತ್ರ ಗೆಲ್ಲುತ್ತೇವೆ. ಇನ್ನೂ ಹೆಚ್ಚಿನ ಮುಖಂಡರು ಬಿಜೆಪಿಗೆ ಸೇರುವವರಿದ್ದಾರೆ. ತುಮಕೂರು ಹಾಗೂ ಬೇರೆ ಕಡೆ ಅಸಮಾಧಾನ ವ್ಯಕ್ತವಾಗಿದೆ. ಆದ್ರೆ ಒಂದು ಬಾರಿ ಟಿಕೆಟ್ ಪ್ರಕಟ ಆದ ಮೇಲೆ ಇದೆಲ್ಲಾ ಸಹಜ. ನಮ್ಮ ಉದ್ದೇಶ ಮೋದಿ ಅವರನ್ನು ಗೆಲ್ಲಿಸಿ, ಪ್ರಧಾನಿ ಮಾಡೋದು. ಹಾಗಾಗಿ ಅಸಮಾಧಾನಿತರನ್ನು ಕರೆದು ಮಾತನಾಡಿಸುತ್ತೇನೆ ಎಂದು ಬಿಎಸ್ವೈ ತಿಳಿಸಿದ್ರು.
ಇನ್ನು ಮಂಡ್ಯದಲ್ಲಿ ಸುಮಲತಾ ಅವರಿಗೆ ಬೆಂಬಲ ಕೊಡಬೇಕು ಅಂತಾ ಕಾರ್ಯಕರ್ತರು ಹೇಳಿದ್ದಾರೆ. ಅದನ್ನು ಹೈಕಮಾಂಡ್ ಗಮನಕ್ಕೂ ತಂದಿದ್ದೇವೆ. ಅಲ್ಲಿ ಅವರಿಗೆ ಬೆಂಬಲ ನೀಡಬೇಕು ಅನ್ನೋದು ನಮ್ಮ ಅಶಯ. ಆದರೆ ರಾಷ್ಟ್ರೀಯ ಪಕ್ಷವಾಗಿರೋದ್ರಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಅನ್ನೋ ಚಿಂತನೆ ಕೂಡ ಇದೆ. ಅದು ರಾಷ್ಟ್ರೀಯ ಮುಖಂಡರ ಚಿಂತನೆಗೆ ಬಿಟ್ಟದ್ದು ಎಂದರು.
ಬಿಜೆಪಿಯವರಿಗೆ ಒಂದಂಕಿ ದಾಟಲು ಬಿಡೋದಿಲ್ಲ ಎಂದು ಜೆಡಿಎಸ್ ವರಿಷ್ಠ ದೇವೇಗೌಡರು ಹೇಳಿದ್ದಾರೆ. ಅವರು ಬಾಯಿ ತಪ್ಪಿ ಹೇಳಿರಬೇಕು. ಮೈತ್ರಿ ಪಕ್ಷಗಳ ಸ್ಥಿತಿಗತಿಗಳನ್ನು ಜನ ನೋಡುತ್ತಿದ್ದಾರೆ. ದೇವೇಗೌಡರಿಗೆ ತಾವು ಎಲ್ಲಿಂದ ನಿಲ್ಲಬೇಕು ಅನ್ನೋದೆ ಇನ್ನೂ ತೀರ್ಮಾನ ಆಗಿಲ್ಲ. ನಾವು 22 ಸ್ಥಾನ ಗೆದ್ದ ಮೇಲೆ ಎಲ್ಲ ಗೊತ್ತಾಗುತ್ತದೆ ಎಂದು ಯಡಿಯೂರಪ್ಪ ಟಾಂಗ್ ಕೊಟ್ಟರು.
ಬಿಜೆಪಿ ಸೇರ್ಪಡೆಗೊಂಡ ನಂತರ ಮಾತನಾಡಿದ ಡಾ.ಎ.ಬಿ.ಮಾಲಕರೆಡ್ಡಿ ಅವರು, ಯಡಿಯೂರಪ್ಪ ಅವರ ಜತೆ ಕೆಲಸ ಮಾಡುವುದು ಹೆಮ್ಮೆಯ ವಿಷಯ. ರಾಜಕಾರಣ ಅವರಿಗೆ ಫ್ಯಾಷನೇಟ್. ನಾನು ಇಂದು ಕಾಂಗ್ರೆಸನ್ನು ಟೀಕೆ ಮಾಡಲ್ಲ. ನಕಾರಾತ್ಮಕ ವಿಷಯ ಹೇಳಲ್ಲ. ಸಕಾರಾತ್ಮಕ ವಿಷಯಗಳನ್ನು ಮಾತ್ರ ಹೇಳುತ್ತೇನೆ. ಪ್ರಧಾನಿ ನರೇಂದ್ರ ಮೋದಿಯವರ ಉತ್ತಮ ಕಾರ್ಯಗಳನ್ನು ಕೆಪಿಸಿಸಿ ಸಭೆಯಲ್ಲೇ ಪ್ರಶಂಸಿಸಿದ್ದೇನೆ. ಈಗಲೂ ಅದನ್ನೇ ಹೇಳುತ್ತೇನೆ ಎಂದರು.
ಕಲಬುರಗಿಯ ರಾಜಕೀಯ ಪರಿಸ್ಥಿತಿಯಲ್ಲಿ ಖರ್ಗೆ ಅವರನ್ನೇ ಕೇಳಿ ಎಲ್ಲ ನಿರ್ಧಾರ ತಗೆದುಕೊಳ್ಳುತ್ತಾರೆ. ಅಲ್ಲಿ ಸ್ವಾರ್ಥ ಹೆಚ್ಚಾಗಿದೆ. ಯಾರಿಗೂ ಎಂಟ್ರಿ ಇಲ್ಲದಂತೆ ಆಗಿದೆ. ಯಾದಗಿರಿಯಲ್ಲಿ ಅವರ ಮಗನನ್ನ ತಂದು ಜಿಲ್ಲಾ ಸಚಿರವನ್ನಾಗಿ ಮಾಡಿದ್ರು. ಅಂತಹ ಹುಡುಗನ ಕೈಕೆಳಗೆ ಕೆಲಸ ಮಾಡುವಂತ ಪರಿಸ್ಥಿತಿ ನಮಗೆ ಬಂದಿತ್ತು. ನಮ್ಮಂತಹ ಹಿರಿಯ ನಾಯಕರು ಹುಡುಗನ ಕೈಕೆಳಗೆ ಹೇಗೆ ಕೆಲಸ ಮಾಡೋದು? ಅವರು ಪಕ್ಷವನ್ನು ವೀಕ್ ಮಾಡುವವರೇ ಹೊರತು ಬೆಳೆಸುವಂತವರಲ್ಲ. ಈಗ ಕಲಬುರಗಿಯಲ್ಲಿ ಶರಣಬಸಪ್ಪ ದರ್ಶನಾಪುರ ಅವರ ಪರಿಸ್ಥಿತಿಯೂ ಅದೇ ಆಗಿದೆ. ಹಾಗಾಗಿ ನಾನು ಅನ್ಯ ಮಾರ್ಗವಿಲ್ಲದೆ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರ್ಪಡೆ ಆಗಬೇಕಾಯಿತು ಎಂದರು.