ಬೆಂಗಳೂರು : ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಅವರ ವಿರುದ್ಧ ಬಸವರಾಜ ಹೊರಟ್ಟಿ ಸೇರಿದಂತೆ ಹಲವು ಜೆಡಿಎಸ್ ಮುಖಂಡರು ಅಸಮಾಧಾನಗೊಂಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಜೆಡಿಎಸ್ ಶಾಸಕ ಸತ್ಯನಾರಾಯಣ, ಮಂತ್ರಿ ಆಗ್ಬೇಕು ಅಂತ ಎಲ್ಲರಿಗೂ ಆಸೆ ಇರುತ್ತದೆ. ಆದರೆ, ಎಲ್ಲರಿಗೂ ಮಂತ್ರಿ ಮಾಡೋಕೆ ಆಗುತ್ತಾ. ಈಗ ಯಡಿಯೂರಪ್ಪನವರು ಪರದಾಡ್ತಿಲ್ವಾ? ಎಂದು ಮರು ಪ್ರಶ್ನೆಯನ್ನೂ ಹಾಕಿದ್ದಾರೆ.
ವಿಧಾನಪರಿಷತ್ನ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ನಡೆಯುತ್ತಿರುವ ವಿಧಾನಪರಿಷತ್ ಸದಸ್ಯರ ಸಭೆಗೂ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಎಲ್ಲ ಪಕ್ಷದಲ್ಲೂ ಅಸಮಾಧಾನ ಸಹಜ. ಈಗ ಯಡಿಯೂರಪ್ಪ ನಾಯಕತ್ವವನ್ನು ಎಲ್ಲರೂ ಒಪ್ಪಿಕೊಂಡಿದ್ದಾರಾ ಎಂದು ಪ್ರಶ್ನಿಸಿದರು. ಬಸವರಾಜ ಹೊರಟ್ಟಿಯವರು ಹಿರಿಯ ನಾಯಕರು. ಅವರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ವರಿಷ್ಠರಿದ್ದಾರೆ. ಅವರು ಎಲ್ಲ ಸರಿಪಡಿಸುತ್ತಾರೆ ಎಂದರು.
ದೇವೇಗೌಡರ ಮೇಲೆ ಐಟಿ ತನಿಖೆ ಆಗಬೇಕೆಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರಜಾಪ್ರಭುತ್ವದಲ್ಲಿ ತನಿಖೆ ಯಾರ ಮೇಲಾದ್ರೂ ಆಗಬಹುದು. ಇಲ್ಲಿ ಯಾರೂ ಅತೀತರಲ್ಲ. ರಾಷ್ಟ್ರಪತಿಗಳ ಮೇಲೂ ತನಿಖೆ ಮಾಡಬಹುದು, ಪಂಚಾಯಿತಿ ಸದಸ್ಯನ ಮೇಲೂ ತನಿಖೆ ಮಾಡಬಹುದು ಎಂದು ಹೇಳಿದರು.