ಬೆಂಗಳೂರು: ಡಿ.ಜೆ.ಹಳ್ಳಿ ಗಲಭೆ ಸಂಬಂಧ ಘಟನಾ ಸ್ಥಳಕ್ಕೆ ಹೋಗಿದ್ದೆವೆಂಬ ಕಾರಣಕ್ಕೆ ಎನ್ಐಎ ಅಧಿಕಾರಿಗಳು ಕರೆದಿದ್ದರು. ಮಾಹಿತಿ ಕೇಳಿದರು, ಕೊಟ್ಟು ಬಂದಿದ್ದೇವೆ ಎಂದು ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಹೇಳಿದ್ದಾರೆ.
ಶಾಸಕರ ಭವನದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಎನ್ಐಎ ಅಧಿಕಾರಿಗಳು ನಮ್ಮನ್ನು ಕರೆದಾಗ ನಮಗೂ ಅಚ್ಚರಿಯಾಯಿತು. ಅವರು ಕರೆದರೆಂದು ನಾವು ಜವಾಬ್ದಾರಿಯಿಂದ ಹೋಗಿ ಹೇಳಿಕೆ ಕೊಟ್ಟು ಬಂದಿದ್ದೇವೆ. ತನಿಖೆಗೆ ಸಂಪೂರ್ಣ ಸಹಕಾರ ಕೊಡುತ್ತೇವೆ ಎಂದರು.
ಡಿ.ಜೆ.ಹಳ್ಳಿ ಘಟನೆ ನಡೆದ ಸಂದರ್ಭದಲ್ಲಿ ಪೊಲೀಸರ ಮನವಿಯಂತೆ ನಾವು ಒಬ್ಬ ಜವಾಬ್ದಾರಿ ನಾಗರಿಕನಾಗಿ ನಾನು ಮತ್ತು ಶಾಸಕ ಜಮೀರ್ ಅಹಮದ್ ಅವರು ಸ್ಥಳಕ್ಕೆ ಹೋಗಿದ್ದೆವು. ಅಂದು ನನಗೆ ಪೊಲೀಸ್ ಹಿರಿಯ ಅಧಿಕಾರಿಗಳು ಕರೆ ಮಾಡಿದ್ದರು. ಜಮೀರ್ ಅಹಮದ್ ಖಾನ್ ಅವರಿಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಕರೆ ಮಾಡಿದ್ದರು. ಸ್ಥಳಕ್ಕೆ ಭೇಟಿ ಕೊಟ್ಟ ಹಿನ್ನೆಲೆಯಲ್ಲಿ ತನಿಖೆಗೆ ಅನುಕೂಲ ಆಗುತ್ತದೆಂದು ಎನ್ಐಎ ಅಧಿಕಾರಿಗಳು ವಿಚಾರಣೆಗೆ ಕರೆದಿದ್ದರು. ರೆಕಾರ್ಡ್ ಹೇಳಿಕೆ ತೆಗೆದುಕೊಂಡಿಲ್ಲ. ನಮ್ಮ ಬಳಿ ಇದ್ದ ಮಾಹಿತಿ ಅವರು ಪಡೆದುಕೊಂಡಿದ್ದಾರೆ ಎಂದು ಹೇಳಿದರು.
ಅಲ್ಲಿ ನಿಜವಾದ ಅಪರಾಧಿಗಳಿಗೆ ಶಿಕ್ಷೆ ಕೊಡಬೇಕು. ನಿರಪರಾಧಿಗಳಿಗೆ ಶಿಕ್ಷೆ ಆಗಬಾರದು. ಈ ಕೃತ್ಯದ ಹಿಂದೆ ಯಾವುದೇ ಪಕ್ಷದವರು ಇದ್ದರೂ ಕ್ರಮ ಜರಗಿಸಬೇಕು ಎಂದು ಒತ್ತಾಯಿಸಿದರು.