ಬೆಂಗಳೂರು: ಪ್ರಾಜೆಕ್ಟ್ ಶಿವಾಜಿ ನಗರ ಘನ ತ್ಯಾಜ್ಯ ವಿಲೇವಾರಿ ನೂತನ ಮಾದರಿಯ ಯೋಜನೆಗೆ ಸ್ಥಳೀಯ ಶಾಸಕ ಮತ್ತು ಆಯುಕ್ತರು ಇಂದು ಚಾಲನೆ ನೀಡಿದರು.
ಶಿವಾಜಿ ನಗರದಲ್ಲಿ ಕಸ ದೊಡ್ಡ ಸಮಸ್ಯೆಯಾಗಿದೆ. ಎಲ್ಲೆಂದರಲ್ಲಿ ಕಸ ಬಿಸಾಡುತ್ತಾರೆ. ಈ ಸಂಬಂಧ ರಸ್ತೆ ಬದಿ ಕಸ ಬಿಸಾಡುವ ಸ್ಥಳಗಳನ್ನು ಗುರುತಿಸಿ ಆ ಸ್ಥಳದಲ್ಲಿ ಹಾಕಿರುವ ಕಸ ತೆರವು ಮಾಡಿ ಸುಂದರೀಕರಣ ಮಾಡಲಾಗುತ್ತಿದೆ. ಒಂದು ಬಾರಿ ಸುಂದರಗೊಳಿಸಿದ ಬಳಿಕ ಮತ್ತೆ ಆ ಸ್ಥಳದಲ್ಲಿ ಕಸ ಹಾಕದಂತೆ ಸ್ಥಳೀಯರೇ ನಿಗಾವಹಿಸಿ ಸ್ವಚ್ಛವಿರುವಂತೆ ನೋಡಿಕೊಳ್ಳಬೇಕು ಶಾಸಕ ಅರ್ಷದ್ ಹೇಳಿದರು.
ಓದಿ: ಶಿವಾಜಿನಗರದಲ್ಲಿ ಕಾಟಾಚಾರಕ್ಕೆ ಸಿದ್ದರಾಮಯ್ಯ ಪ್ರಚಾರ..!?
ಬಿಬಿಎಂಪಿ ಆಯುಕ್ತರಾದ ಮಂಜುನಾಥ್ ಪ್ರಸಾದ್ ಮಾತನಾಡಿ, ಶಿವಾಜಿ ನಗರ ವ್ಯಾಪ್ತಿಯಲ್ಲಿ ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡುವ ಹಾಗೂ ಕಸ ಸುರಿಯುವ ಸ್ಥಳಗಳನ್ನು ತೆರವುಗೊಳಿಸಿ ಆ ಸ್ಥಳವನ್ನು ಸುಂದರೀಕರಣಗೊಳಿಸುವ ಕೆಲಸ ಮಾಡಲಾಗುತ್ತಿದೆ. ರಸ್ತೆ ಬದಿ ಕಸ ಸುರಿಯುವ ಸ್ಥಳಗಳನ್ನು ತೆರವು ಮಾಡಿ ಸುಂದರೀಕರಣ ಮಾಡಿದ ಬಳಿಕ ಸ್ಥಳೀಯ ನಾಗರಿಕರು ಮತ್ತೆ ಅಲ್ಲಿಯೇ ಕಸ ಸುರಿಯದೆ ಪ್ರತಿನಿತ್ಯ ಕಸ ಸಂಗ್ರಹಿಸಲು ಬರುವ ಆಟೋಗಳಿಗೆ ಕಸ ನೀಡಬೇಕು. ಇದು ಸಮುದಾಯದ ಜವಾಬ್ದಾರಿಯಾಗಿದ್ದು, ಎಲ್ಲರೂ ಕೈಜೋಡಿಸಿ ಕೆಲಸ ಮಾಡಿದರೆ ಕಸದ ಸಮಸ್ಯೆ ತ್ವರಿತವಾಗಿ ಬಗೆಹರಿಸಬಹುದು ಎಂದರು.
ಈ ವೇಳೆ ಜಂಟಿ ಆಯುಕ್ತ (ಘನತ್ಯಾಜ್ಯ) ಸರ್ಫರಾಜ್ ಖಾನ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.