ಬೆಂಗಳೂರು: ನಾವು ಯಾವುದೇ ಪಕ್ಷದ ಸಂಪರ್ಕದಲ್ಲಿ ಇಲ್ಲ. ನಾನಾಗಲಿ, ರಮೇಶ್ ಜಾರಕಿಹೊಳಿ ಅವರಾಗಲಿ ಯಾವ ಕಾರಣಕ್ಕೂ ಬಿಜೆಪಿ ತೊರೆಯುವುದಿಲ್ಲ. ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವುದಕ್ಕಾಗಿ ಶ್ರಮಿಸಲಿದ್ದೇವೆ ಎಂದು ಶಾಸಕ ಮಹೇಶ್ ಕುಮಟಳ್ಳಿ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಥಣಿ ಕ್ಷೇತ್ರದ ಬಿಜೆಪಿ ಟಿಕೆಟ್ ವಿಚಾರದಲ್ಲಿ ಗೊಂದಲ ಇಲ್ಲ. ಈ ಬಾರಿಯೂ ಕ್ಷೇತ್ರಕ್ಕೆ ಒಂದು ಪರಿಷತ್ ಸ್ಥಾನ ಹಾಗೂ ಎಂಎಲ್ಎ ಟಿಕೆಟ್ ಸಿಗುತ್ತದೆ. ಲಕ್ಷ್ಮಣ ಸವದಿಯವರು ಪಕ್ಷಕ್ಕಾಗಿ ದುಡಿದಿದ್ದಾರೆ. ಅವ್ರೂ ಕೂಡ ಪಕ್ಷದಲ್ಲಿ ಹಿರಿಯರು ಎಂದು ಅವರು ಹೇಳಿದ್ದಾರೆ.
ಅಧಿಕಾರ ಬಯಸಿ ಬಿಜೆಪಿಗೆ ಬಂದಿಲ್ಲ: 2023ಕ್ಕೆ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಕೆಲಸ ಮಾಡುತ್ತೇನೆ. ನಮ್ಮ ನಾಯಕರಾದ ರಮೇಶ್ ಜಾರಕಿಹೊಳಿ ಜೊತೆಯಲ್ಲೇ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುತ್ತೇವೆ. ಪಕ್ಷದಲ್ಲಿ ಸ್ಥಾನಮಾನ ಸಿಗುವುದು, ಬಿಡುವುದು ಬೇರೆ ವಿಚಾರ. ನಾವಿಲ್ಲಿಗೆ ಸ್ಥಾನಮಾನ ಅಪೇಕ್ಷಿಸಿ ಬರಲಿಲ್ಲ ಎಂದರು.
ರಮೇಶ್ ಜಾರಕಿಹೊಳಿ ಒಬ್ಬ ವ್ಯಕ್ತಿ ಅಲ್ಲ, ಅವರೊಬ್ಬ ಶಕ್ತಿ. ಅವರ ಮೇಲೆ ಬಿಜೆಪಿ ವರಿಷ್ಠರು ಅಪಾರ ವಿಶ್ವಾಸ ಇಟ್ಟಿದ್ದಾರೆ. ರಮೇಶ್ ಜಾರಕಿಹೊಳಿ ಅವರು 2023 ರಲ್ಲಿ ಬಿಜೆಪಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಸಂಕಲ್ಪ ಮಾಡಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಯಾವುದೇ ಕಾರಣಕ್ಕೂ ನನ್ನ ಮಗ ರಾಜಕಾರಣಕ್ಕೆ ಬರಲ್ಲ: ಮುರುಗೇಶ ನಿರಾಣಿ
ಜೆಡಿಎಸ್ನವರ ಜತೆ ಸಂಪರ್ಕದಲ್ಲಿ ಇದ್ದೇವೆ ಎನ್ನಲಾದ ವಿಚಾರ ಸುಳ್ಳು. ನಾವು ಯಾರ ಜತೆಗೂ ಸಂಪರ್ಕದಲ್ಲಿಲ್ಲ. ಇದೇ 17,18 ರಂದು ನನ್ನ ಮಗನ ಆರತಕ್ಷತೆ ಕಾರ್ಯಕ್ರಮ ಇದೆ. ನಮ್ಮ ಪಕ್ಷದವರಿಗೂ ಆಹ್ವಾನ ಕೊಡುತ್ತೇನೆ. ಸಿದ್ದರಾಮಯ್ಯ, ಹೆಚ್ಡಿಕೆ ಅವರನ್ನೂ ಆಹ್ವಾನಿಸುತ್ತೇನೆ ಎಂದು ತಿಳಿಸಿದರು.