ಬೆಂಗಳೂರು: 64ನೇ ಕನ್ನಡ ರಾಜ್ಯೋತ್ಸವ ಆಚರಣೆ ಕುರಿತಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಸಚಿವ ಸುರೇಶ್ ಕುಮಾರ್ ಸಭೆ ನಡೆಸಿದರು. ಇಲಾಖೆಯು ತೆಗೆದುಕೊಂಡಿರುವ ಪೂರ್ವಭಾವಿ ಕ್ರಮಗಳ ಕುರಿತಂತೆ ಪರಾಮರ್ಶಿಸಿದರು.
ವಿವಿಧ ಇಲಾಖೆಗಳ ಸಹಯೋಗದಲ್ಲಿ ನವೆಂಬರ್ 1 ರಂದು ರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಸುಮಾರು 8,000 ವಿದ್ಯಾರ್ಥಿಗಳು ಭಾಗವಹಿಸುವ ‘ಮಕ್ಕಳ ಮೇಳ’ವನ್ನು ಆಯೋಜಿಸುತ್ತಿದ್ದು, ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಹಿಸುತ್ತಿದ್ದಾರೆಂದು ಸಚಿವ ಸುರೇಶ್ ಕುಮಾರ್ ಮಾಹಿತಿ ನೀಡಿದರು.
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಕಾರ್ಯಕ್ರಮದ ಪೂರ್ವಭಾವಿ ಸಿದ್ದತೆಯನ್ನು ಪರಿಶೀಲಿಸಲು ಅಕ್ಟೋಬರ್ 31 ರಂದು ಕ್ರೀಡಾಂಗಣದಲ್ಲಿಯೇ ಅಧಿಕಾರಿಗಳ ಸಭೆಯನ್ನು ನಡೆಸಿ ಅಗತ್ಯ ಸೂಚನೆಗಳನ್ನು ನೀಡುವುದಾಗಿ ಸಚಿವ ಸುರೇಶ್ ಕುಮಾರ್ ತಿಳಿಸಿದರು.
ಇದೇ ಸಂದರ್ಭದಲ್ಲಿ ಕಳೆದ ಅಕ್ಟೋಬರ್ 23-24 ರಂದು ಎರಡು ದಿನಗಳ ಬೆಳಗಾವಿ ಪ್ರವಾಸದ ಬಗ್ಗೆ ಮಾಹಿತಿ ನೀಡಿದ ಸಚಿವರು, ಈ ವಿಭಾಗದ ಬಾಗಲಕೋಟೆ, ಚಿಕ್ಕೋಡಿ, ಬೆಳಗಾವಿ ಜಿಲ್ಲೆಗಳ ನೆರೆ ಪೀಡಿತ ಪ್ರದೇಶಗಳ ಹಲವಾರು ಶಾಲೆಗಳಿಗೆ ಭೇಟಿ ನೀಡಲಾಗಿದೆ. ಶಾಲಾ ಕೊಠಡಿಗಳನ್ನು ಪುನರ್ ನಿರ್ಮಾಣ ಮತ್ತು ದುರಸ್ಥಿಗೆ ಕಾರ್ಯಗಳನ್ನು ಶೀಘ್ರದಲ್ಲೇ ಕೈಗೆತ್ತಿಕೊಳ್ಳಲು ಸೂಚನೆಗಳನ್ನು ನೀಡಲಾಗಿದೆ ಎಂದರು.
ನವೆಂಬರ್ 2 ರಂದು ಶಿಕ್ಷಣ ಸಚಿವರ ಮಹಾತ್ಮಕಾಂಕ್ಷೆಯ ಸಾರ್ವಜನಿಕರು, ಶಿಕ್ಷಕರು, ವಿದ್ಯಾರ್ಥಿಗಳೊಂದಿಗೆ ಫೋನ್ ಇನ್ ಸಂವಾದವನ್ನು ನಡೆಸುವ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿರುವುದಾಗಿ ಘೋಷಿಸಿದರು. ಸಾರ್ವಜನಿಕರು, ವಿದ್ಯಾರ್ಥಿಗಳು, ಶಿಕ್ಷಕರು, ತಮ್ಮೊಂದಿಗೆ ನೇರವಾಗಿ ಮಾತನಾಡಿ ತಮ್ಮ ಕುಂದು ಕೊರತೆಗಳನ್ನು ಹಂಚಿ ಕೊಳ್ಳಬಹುದಾಗಿದೆ ಎಂದು ತಿಳಿಸಿದರು.