ಬೆಂಗಳೂರು: ಈ ಹಿಂದೆ ತಾವೇ ಬೆಂಬಲಿಸಿದ್ದ ಕೃಷಿ ಸುಧಾರಣೆಗಳನ್ನು ಈಗ ಪ್ರತಿಪಕ್ಷಗಳು ವಿನಾಕಾರಣ ವಿರೋಧಿಸುತ್ತಿದ್ದು, ಪಟ್ಟಭದ್ರ ಹಿತಾಸಕ್ತಿಗಳ ಅಪಪ್ರಚಾರದ ವಿರುದ್ಧ ಬಿಜೆಪಿ ಹೋರಾಟ ನಡೆಸುತ್ತದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರೈತರ ಹಿತಾಸಕ್ತಿ ಕಾಪಾಡಲು ಬದ್ಧವಾಗಿದೆ. ಪ್ರತಿಪಕ್ಷಗಳು ಈ ಹಿಂದೆ ತಾವೇ ಕೃಷಿ ಸುಧಾರಣೆಗಳನ್ನು ಬೆಂಬಲಿಸಿದ್ದವು. ಪ್ರತಿಪಕ್ಷಗಳ ಈಗಿನ ನಡೆ ರಾಜಕೀಯ ದುರುದ್ದೇಶದಿಂದ ಕೂಡಿದೆ. ಇದರ ವಿರುದ್ಧ ಬಿಜೆಪಿ ಹೋರಾಟ ನಡೆಸುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ಓದಿ: ಟೌನ್ಹಾಲ್ಗೆ ಆಗಮಿಸಿದ ರೈತ ಸಂಘಟನೆಗಳು: ಫ್ರೀಡಂ ಪಾರ್ಕ್ಗೆ ತೆರಳಲಿರುವ ರ‍್ಯಾಲಿ
ಜನರ ವಿಶ್ವಾಸ ಕಳೆದುಕೊಂಡು ಚುನಾವಣೆಗಳಲ್ಲಿ ಸತತ ಸೋಲುಗಳಿಂದ ಹತಾಶಗೊಂಡಿರುವ ವಿಪಕ್ಷಗಳು ರೈತರನ್ನು ದಿಕ್ಕು ತಪ್ಪಿಸಲು ಯತ್ನಿಸುತ್ತಿವೆ. ಕೇಂದ್ರ ಸರ್ಕಾರದ ಕೃಷಿ ಮಸೂದೆಗಳು ವಿಸ್ತೃತ ಮಾರುಕಟ್ಟೆ ಕಲ್ಪಿಸಿ, ಅನ್ನದಾತರ ಆದಾಯ ಹೆಚ್ಚಿಸುವ ಸದುದ್ದೇಶ ಹೊಂದಿದ್ದು, ಈಗಿರುವ ಎಪಿಎಂಸಿ, ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆ ಸಹ ಮುಂದುವರಿಯಲಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಯುಪಿಎ ಅಧಿಕಾರದಲ್ಲಿದ್ದಾಗ ಇದೇ ರೀತಿಯ ಕೃಷಿ ಸುಧಾರಣೆಗಳನ್ನು ತರಲು ಮುಂದಾಗಿತ್ತು. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲೂ ಇದೇ ಭರವಸೆ ನೀಡಲಾಗಿತ್ತು. ಅಂದಿನ ಕೇಂದ್ರ ಕೃಷಿ ಸಚಿವರಾಗಿದ್ದ ಶರದ್ ಪವಾರ್ ಈ ಸುಧಾರಣೆಗಳನ್ನು ತರಲು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು. ಡಿಎಂಕೆ ಪ್ರಣಾಳಿಕೆ, ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರ ಹೇಳಿಕೆಗಳೂ ಈ ಹಿಂದೆ ಈ ಸುಧಾರಣೆಗಳನ್ನು ಬೆಂಬಲಿಸಿದ್ದವು. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಈಗಾಗಲೇ ಕೇಂದ್ರದ ಮಸೂದೆಗಳು ಜಾರಿ ಬರುವಂತೆ ಅಧಿಸೂಚನೆ ಹೊರಡಿಸಿದ್ದಾರೆ ಎಂದು ಹೇಳಿದ್ದಾರೆ.