ಬೆಂಗಳೂರು : ಇನ್ನು 15 -20 ದಿನಗಳಲ್ಲಿ ಸುಮಾರು 15 ಸಾವಿರ ಎಕರೆ ಭೂಮಿಯನ್ನು ಸರ್ಕಾರದಿಂದ ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಹಸ್ತಾಂತರ ಮಾಡಲಾಗುತ್ತದೆ. ರಾಜ್ಯದಲ್ಲಿ ಒಂದು ಲಕ್ಷ ಮನೆಗಳ ನಿರ್ಮಾಣದ ಗುರಿ ಮುಟ್ಟಬೇಕಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.
ವಿಕಾಸಸೌಧದಲ್ಲಿ ಇಂದು ವಸತಿ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿ, ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫಲಾನುಭವಿಗಳ ಆಯ್ಕೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುತ್ತೇವೆ. ಶೇ.50 ರಷ್ಟನ್ನು ಶಾಸಕರು ಮತ್ತು ಸಂಸದರು ಶಿಫಾರಸು ಮಾಡಿದವರಿಗೆ ಹಾಗೂ ಉಳಿದ ಶೇ.50 ರಷ್ಟನ್ನು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿರುವ ಮಧ್ಯಮ ಹಾಗೂ ಬಡ ವರ್ಗದವರಿಗೆ ನೀಡಲಾಗುತ್ತದೆ. ಅವರಿಗೂ ಸಹ ಸ್ಥಳ ತೋರಿಸಿ ಅವರು ಇಚ್ಛೆಪಟ್ಟ ಸ್ಥಳದಲ್ಲೇ ಅಲಾಟ್ ಮಾಡಲಾಗುವುದು ಎಂದು ಹೇಳಿದರು.
ಹೌಸಿಂಗ್ ಬೋರ್ಡ್ನಿಂದ ಬಡಾವಣೆ ನಿರ್ಮಾಣಕ್ಕೆ ಅನುಮತಿ ನೀಡಲಾಗಿದ್ದು, 1.04 ಲಕ್ಷ ನಿವೇಶನಗಳನ್ನು ನಿರ್ಮಾಣ ಮಾಡಲಾಗುತ್ತದೆ. 334 ಎಕರೆಯಲ್ಲಿ ಮನೆಗಳ ನಿರ್ಮಾಣಕ್ಕೆ ಗುತ್ತಿಗೆದಾರರಿಗೆ ವರ್ಕ್ ಆರ್ಡರ್ ಕೊಟ್ಟಿದ್ದೇವೆ. 31,382 ಮನೆಗಳಿಗೆ ಭೂಮಿಪೂಜೆ ಮಾಡುತ್ತೇವೆ. ಮುಂದಿನ ಜೂನ್ ಗೆ 30 ಸಾವಿರ ಮನೆಗಳ ಹಂಚಿಕೆ ಮಾಡಲಾಗುವುದು ಎಂದರು.
ಗುತ್ತಿಗೆದಾರರಿಗೆ ಅಧಿಕಾರಿಗಳು ಸಹಕಾರ ಕೊಡಬೇಕು. ಗುತ್ತಿಗೆದಾರರಿಗೆ ಕಿರಿಕಿರಿ ಮಾಡಬೇಡಿ. ಮಧ್ಯಾಹ್ನದ ನಂತರ ಎರಡು ಗಂಟೆ ಕಾಲ ಗುತ್ತಿಗೆದಾರರ ಭೇಟಿಗೆ ಅವಕಾಶ ಕೊಡಿ ಎಂದು ವಸತಿ ಇಲಾಖೆಯ ಅಧಿಕಾರಿಗಳಿಗೆ ಸಚಿವ ವಿ.ಸೋಮಣ್ಣ ಸೂಚನೆ ನೀಡಿದರು.