ಬೆಂಗಳೂರು: ಕಾರ್ಮಿಕ ಇಲಾಖೆಯಲ್ಲಿ ಮತ್ತೊಂದು ಹೊಸ ಆಯಾಮ ತರುವ ನಿಟ್ಟಿನಲ್ಲಿ ಹೊಸದಾಗಿ ಎರಡು ವಿಧೇಯಕಗಳನ್ನು ತರುವುದಾಗಿ ಕಾರ್ಮಿಕ ಇಲಾಖೆ ಸಚಿವ ಶಿವರಾಮ್ ಹೆಬ್ಬಾರ್ ತಿಳಿಸಿದರು.
ವಿಕಾಸಸೌಧದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಸಚಿವರು, ಆಟೋ, ಲಾರಿ, ಟ್ರಕ್ ಚಾಲಕರು, ಮೆಕಾನಿಕ್ಗಳು ಸೇರಿದಂತೆ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಈ ಹೊಸ ವಿಧೇಯಕ ರಚನೆಯಿಂದ ಅನುಕೂಲವಾಗಲಿದೆ. ಆರ್ಥಿಕ ಇಲಾಖೆಯಿಂದ ಕ್ಲಿಯರೆನ್ಸ್ ಸಿಕ್ಕಿದೆ. ಇದನ್ನು ಸಚಿವ ಸಂಪುಟದಲ್ಲಿ ಮಂಡಿಸಿ ಅನುಮೋದನೆ ಪಡೆದು ನಂತರ ಮುಂದಿನ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದರು.
ಕಾರ್ಮಿಕರ ಮಕ್ಕಳಿಗೆ ವಿದ್ಯಾಭ್ಯಾಸ, ಆರೋಗ್ಯ, ವಿವಾಹ ಹಾಗೂ ಅಪಘಾತ ವಿಮೆ 5 ಲಕ್ಷ ರೂ. ಸಿಗುವಂತೆ ಈ ಹೊಸ ವಿಧೇಯಕದಲ್ಲೂ ಸಿಗುತ್ತದೆ. ಒಂದು ವರ್ಷಕ್ಕೆ ಅಂದಾಜು 90 ಕೋಟಿ ರೂ. ಎತ್ತಿಡಲಾಗುತ್ತದೆ. ಹೊಸ ಬಿಲ್ನಿಂದ ಸುಮಾರು 15 ಲಕ್ಷ ಆಟೋ ರಿಕ್ಷಾ ಚಾಲಕರು ಸೇರಿದಂತೆ ಅಂದಾಜು 25 ಲಕ್ಷ ಮಂದಿಗೆ ಉಪಯೋಗವಾಗಲಿದೆ ಎಂದರು.
ಇನ್ನು ಖಾಸಗಿ ಅಥವಾ ಸರ್ಕಾರ ಗುತ್ತಿಗೆ ಆಧಾರದಲ್ಲಿ ನೌಕರರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಆದರೆ, ಔಟ್ ಸೋರ್ಸ್ ಏಜೆನ್ಸಿಗಳು ಸರ್ಕಾರದ ಹಿಡಿತದಲ್ಲಿಲ್ಲ. ಇಎಫ್, ಪಿಎಫ್ ಕೇಳಿದರೆ ಕೆಲಸದಿಂದ ತೆಗೆದು ಹಾಕುತ್ತಾರೆ. ಏಜೆನ್ಸಿಗಳಿಗೆ ಸರ್ಕಾರದ ಯಾವುದೇ ಹಿಡಿತ ಇಲ್ಲ. ಹಾಗಾಗಿ ಬಹಳ ಜನಕ್ಕೆ ಶೋಷಣೆ ಆಗುತ್ತಿದೆ ಎಂಬುದರ ಕುರಿತಂತೆ ಸಾಕಷ್ಟು ದೂರುಗಳು ಬಂದಿವೆ.
ಔಟ್ ಸೋರ್ಸ್ ಏಜೆನ್ಸಿಗಳ ನಿಯಂತ್ರಣಕ್ಕಾಗಿ ಒಂದು ಬಿಲ್ ತರಲು ಉದ್ದೇಶಿಸಲಾಗಿದೆ. ಹಾಗಾಗಿ ಎಸಿಎಸ್ ನೇತೃತ್ವದಲ್ಲಿ ಒಂದು ತಂಡ ರಚನೆ ಮಾಡುತ್ತೇವೆ. ಆ ತಂಡ, ಈ ಬಗೆಗಿನ ಸಾಧಕ- ಬಾಧಕಗಳ ಬಗ್ಗೆ ಪರಾಮರ್ಶೆ ನಡೆಸಿ ವರದಿ ನೀಡಲಿದ್ದು, ವರದಿ ಬಂದ ನಂತರ ಈ ಬಿಲ್ ಅನ್ನು ತಂದು ವಿದ್ಯಾವಂತ ನಿರುದ್ಯೋಗಿ ಕಾರ್ಮಿಕರಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಕಾರ್ಮಿಕ ಅದಾಲತ್ :
ಕಾರ್ಮಿಕ ಇಲಾಖೆಯ ಮುಖ್ಯಸ್ಥರ ಜೊತೆಗೆ ಸಭೆ ಮಾಡಿದ್ದೇವೆ. ಕಾರ್ಮಿಕ ಇಲಾಖೆಯಲ್ಲಿ ಪೆಂಡಿಂಗ್ ಇರುವ ಅರ್ಜಿಗಳಿಗೆ ಪರಿಹಾರ ಸಿಕ್ಕಿಲ್ಲ. ಇದಕ್ಕೆ ನಿತ್ಯ ದೂರು ಬರುತ್ತಿದ್ದವು. ಇದಕ್ಕೆ ಪರಿಹಾರ ಕಂಡುಕೊಳ್ಳಲು ಒಂದು ತಿಂಗಳ ಕಾಲ ಕಾರ್ಮಿಕ ಅದಾಲತ್ ಮಾಡಲಾಗುವುದು. ನಾನಾ ಕಾರಣಗಳಿಗೆ ಸುಮಾರು 50 ಸಾವಿರ ಅರ್ಜಿಗಳು ಪೆಂಡಿಂಗ್ ಉಳಿದಿವೆ. ಸರಿಯಾದ ಸಮಯಕ್ಕೆ ಅರ್ಜಿ ಸಲ್ಲಿಸಿಲ್ಲ. ಈ ಎಲ್ಲಾ ಕಾರಣಗಳನ್ನು ಬದಿಗಿಟ್ಟು ಎಲ್ಲ ಅರ್ಜಿಗಳನ್ನು ಪರಿಗಣಿಸಬೇಕೆಂದು ತೀರ್ಮಾನಿಸಿದ್ದೇವೆ ಎಂದರು.
ಒಂದು ಅರ್ಜಿಯೂ ಪೆಂಡಿಂಗ್ ಇರಬಾರದು. ಎಲ್ಲ ಸಮಸ್ಯೆ ಈಗಲೇ ಪರಿಹಾರ ಆಗಬೇಕು. ಇದೇ ತಿಂಗಳು ಎಲ್ಲಾ ಕಡೆ ಆಟೋದಲ್ಲಿ ಪ್ರಚಾರ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಶೇ.99 ರಷ್ಟು ಎಲ್ಲಾ ಅರ್ಜಿಗಳು ವಿಲೇವಾರಿ ಆಗಬೇಕು. ಇದರಿಂದ ಕಾರ್ಮಿಕರಿಗೆ ನ್ಯಾಯ ಸಿಗಬೇಕು ಎಂದರು. ಕೋವಿಡ್ ಸಂದರ್ಭದಲ್ಲಿ ಕಾರ್ಮಿಕರಿಗೆ ಒಂದು ಸಾವಿರ ಕೋಟಿ ರೂ. ಪರಿಹಾರ ನೀಡಿದ್ದೆವು. ಹೈಕೋರ್ಟ್ ಸೂಚನೆ ಮೇರೆಗೆ ನೂರು ಕೋಟಿ ಡ್ರೈ ಫ್ರೂಟ್ ನೀಡಿದ್ದೇವೆ ಎಂದು ಹೇಳಿದರು.
ವ್ಯಾಕ್ಸಿನ್ ಖರೀದಿ :
ಕೋವಿಶೀಲ್ಡ್ ವ್ಯಾಕ್ಸಿನ್ ತೆಗೆದುಕೊಳ್ಳಲು ಇಲಾಖೆ ನಿರ್ಧಾರ ಮಾಡಿದೆ. ಜೊತೆಗೆ ಕಾರ್ಮಿಕರ ಸ್ಥಳದಲ್ಲಿ ವ್ಯಾಕ್ಸಿನ್ ನೀಡುವ ಕಾರ್ಯ ಆಗುತ್ತದೆ ಎಂದರು.
ಇ-ಶ್ರಮ್ ಪೋರ್ಟಲ್ ಇಂದಿನಿಂದ ಆರಂಭ :
ಅಸಂಘಟಿತ ಕಾರ್ಮಿಕ ಬಗ್ಗೆ ಕಾಳಜಿಯಿಂದ ಅಸಂಘಟಿತ ಕಾರ್ಮಿಕರ ನೋಂದಣಿಗಾಗಿ ಕೇಂದ್ರ ಸರ್ಕಾರ ಕಾರ್ಮಿಕ ಮತ್ತು ಉದ್ಯೋಗ ಮಂತ್ರಾಲಯ ಅಭಿವೃದ್ಧಿಪಡಿಸಿರುವ ಇ-ಶ್ರಮ್ ಪೋರ್ಟಲ್ ಇಂದಿನಿಂದ ಆರಂಭವಾಗುತ್ತಿದೆ. ಇದರಿಂದ ಎಲ್ಲ ವರ್ಗದ ಅಸಂಘಟಿತ ಕಾರ್ಮಿಕರಿಗೆ ಅನುಕೂಲ ಆಗುತ್ತದೆ. 15 ರೂ. ಕೊಟ್ಟು ನೊಂದಾಯಿಸಿಕೊಳ್ಳಬೇಕು. ಒಂದು ವರ್ಷಕ್ಕೆ ಪಿಎಂಎಸ್ಬಿವೈ ಲಾಭವನ್ನು ಪಡೆಯುತ್ತಾರೆ.
ಆಕಸ್ಮಿಕ ಸಾವು ಪೂರ್ಣ ಅಂಗವೈಕಲ್ಯಕ್ಕೆ 2 ಲಕ್ಷ ರೂ., ಬಾಗಶಃ ಅಂಗವೈಕಲ್ಯಕ್ಕೆ 1 ಲಕ್ಷ ರೂ. ಸೌಲಭ್ಯ ಸಿಗುತ್ತದೆ. ಇದಕ್ಕೆ ಸಂಬಂಧಿಸಿದಂತೆ 16 ಲಕ್ಷ ಈಗಾಗಲೇ ರಿಜಿಸ್ಟರ್ ಮಾಡಿಕೊಂಡಿದ್ದಾರೆ. ಎಲ್ಲ ವರ್ಗದ ಸಂಘಟಿತ ಕಾರ್ಮಿಕರು ಇದರಲ್ಲಿ ಬರುತ್ತಾರೆ. ಕರ್ನಾಟಕದಲ್ಲಿ ಶೇ. 33 ರಷ್ಟು ಅಸಂಘಟಿತ ಕಾರ್ಮಿಕರಿಗೆ ಅನುಕೂಲ ಆಗುತ್ತದೆ ಎಂದು ವಿವರಿಸಿದರು.
ನೇಮಕಾತಿಗೆ ನಿರ್ಧಾರ:
ಗ್ರೂಪ್ ಡಿ ನೌಕರರ ಸಮಸ್ಯೆ ಇದೆ ಎಂದು ನಮ್ಮ ಅಧಿಕಾರಿಗಳು ಹೇಳಿದ್ದಾರೆ. ಕೆಪಿಎಸ್ಸಿ ಅಥವಾ ನೇರ ನೇಮಕಾತಿ ಮಾಡಿಕೊಳ್ಳುವ ಬಗ್ಗೆ ತೀರ್ಮಾನ ಮಾಡಿದ್ದೇವೆ. ಇದರ ಬಗ್ಗೆ ಮುಖ್ಯಮಂತ್ರಿಗಳ ಬಳಿ ಮಾತನಾಡುತ್ತೇನೆ ಎಂದು ಹೇಳಿದರು.
ಮೊಬೈಲ್ ಕ್ಲಿನಿಕ್ :
ಕಿತ್ತೂರು ರಾಣಿ ಚೆನ್ನಮ್ಮ ಹೆಸರಿನಲ್ಲಿ ಶಿಶು ಪಾಲನಾ ಕೇಂದ್ರ ತೆರೆಯುತ್ತೇವೆ. ಕಾರ್ಮಿಕರಿಗೆ ಮೊಬೈಲ್ ಕ್ಲಿನಿಕ್, ಹೊರಗಡೆ ಕಾರ್ಮಿಕರಿಗೆ ಉಳಿದುಕೊಳ್ಳಲು ಟ್ರಾನ್ಸಿಟ್ ನಿರ್ಮಾಣ ಮಾಡುತ್ತೇವೆ. ಅನೇಕ ಕಾರ್ಮಿಕರ ಹಿತ ರಕ್ಷಣೆಯನ್ನು ಕಾಪಾಡುವವರ ಜೊತೆಗೆ ಚರ್ಚೆ ಮಾಡಿದ್ದೇವೆ. ಕಟ್ಟಡ ಕಾರ್ಮಿಕರ ಮಕ್ಕಳಿಗೆ ಟ್ಯಾಬ್ ಕೊಡಲು ನಿರ್ಧಾರ ಮಾಡಿದ್ದೇವೆ. 140 ಕೋಟಿ ರೂ. ಪ್ರತಿವರ್ಷ ಶಿಕ್ಷಣಕ್ಕೆ ನೀಡುತ್ತಿದ್ದೆವು. ಎಲ್ಲಾ ಕಾರ್ಮಿಕ ಮಕ್ಕಳು ಐಐಎಂ, ಐಐಟಿ, ಕೆಎಎಸ್, ಐಎಎಸ್ ಓದಲು ನಮ್ಮ ಇಲಾಖೆಯಲ್ಲಿ ಹಣವನ್ನು ಬರಿಸಲಾಗುತ್ತದೆ ಎಂದು ಹೇಳಿದರು.
ಈ ಇಎಸ್ಐ ಆಸ್ಪತ್ರೆ ಎಲ್ಲ ಜಿಲ್ಲೆಯಲ್ಲಿ ನಿರ್ಮಾಣ ಮಾಡಲಾಗುತ್ತದೆ. ನಮ್ಮ ಕಾರ್ಮಿಕರು ಕಟ್ಟುವ ಕಟ್ಟಡದಲ್ಲಿ ನಮ್ಮ ಕಾರ್ಮಿಕರಿಗೆ ಆರೋಗ್ಯ ಸೌಲಭ್ಯ ಸಿಗುತ್ತಿಲ್ಲ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಜೊತೆಗೆ ಮಾತನಾಡುತ್ತೇನೆ. ಈಗಾಗಲೇ ಮಂತ್ರಿಗಳ ಜೊತೆಗೆ ಮಾತನಾಡಿದ್ದೇನೆ. ಇಎಸ್ಐ ಆಸ್ಪತ್ರೆಗೆ ಸಂಬಂಧಿಸಿದಂತೆ ಎಲ್ಲ ಆಮೂಲಾಗ್ರ ಬದಲಾವಣೆ ತರುವುದಾಗಿ ತಿಳಿಸಿದರು.
ಎಂಎಂ ಇಂಡಸ್ಟ್ರೀಸ್ನಲ್ಲಿ 4 ಮಂದಿ ಕಾರ್ಮಿಕರು ಮೃತ ಪಟ್ಟಿದ್ದರು. ಆ ನಾಲ್ಕು ಕುಟುಂಬಕ್ಕೆ ಮೂರು ಲಕ್ಷ ಪರಿಹಾರ ಕೊಡಲು ನಮ್ಮ ಇಲಾಖೆ ನಿರ್ಧಾರ ಮಾಡಿದೆ. ಕಲ್ಯಾಣ ಮಂಡಳಿ ಮೂಲಕ ಇದನ್ನು ನಿರ್ಧಾರ ಮಾಡಲಾಗಿದೆ
ರಾಜೀನಾಮೆ ಕೇಳುವುದು ವಿರೋಧ ಪಕ್ಷಗಳ ಕೆಲಸ :
ಮೈಸೂರಿನಲ್ಲಿ ನಡೆದ ಘಟನೆ ಅಘಾತಕಾರಿ. ಯಾವುದೇ ಸರ್ಕಾರ ಇದ್ದಾಗಲೂ ಇಂತಹ ಘಟನೆಗಳು ನಡೆದಿವೆ. ಕಾಂಗ್ರೆಸ್ ಸರ್ಕಾರ ಇದ್ದಾಗಲೂ ನಡೆದಿವೆ. ರಾಜೀನಾಮೆ ಕೇಳೋದು ವಿರೋಧ ಪಕ್ಷಗಳ ಕೆಲಸ.ಅಪರಾಧಿಗಳನ್ನು ಬಿಡುವ ಮಾತೆ ಇಲ್ಲ. ಯಾರು ಎಷ್ಟೇ ದೊಡ್ಡವರಾದರೂ ಅವರಿಗೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಓದಿ: Mysuru Gangrape Case: ಮೂವರು ಆರೋಪಿಗಳ ಬಂಧನ?..ಪೊಲೀಸ್ ತನಿಖೆ ಇನ್ನಷ್ಟು ಚುರುಕು!!