ಬೆಂಗಳೂರು: ಗುತ್ತಿಗೆದಾರರನ್ನು ಮಾಧ್ಯಮದವರ ಮುಂದೆ ಯಾರು ಕಳಿಸುತ್ತಿದ್ದಾರೆ ಅಂತ ಗೊತ್ತಿದೆ. ನನಗೆ ಎಲ್ಲವೂ ಗೊತ್ತಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಟೀಕಿಸಿದ್ದಾರೆ. ಇಂದು ಸದಾಶಿವನಗರದಲ್ಲಿರುವ ನಿವಾಸದ ಬಳಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಗುತ್ತಿಗೆದಾರರು ವಿರೋಧ ಪಕ್ಷದ ನಾಯಕರ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿದರು. ಕಾನೂನು ಪ್ರಕಾರ ತನಿಖೆ ಮಾಡಬೇಕು ಅಂತ ಹೇಳಿದ್ದೇವೆ. ಕೆಂಪಣ್ಣ ದೂರು ಕೊಟ್ಟಿದ್ದಾರೆ, ಅವರಿಗೆ ನ್ಯಾಯ ಒದಗಿಸಬೇಕು. ಕೆಲಸಕ್ಕೆ ನ್ಯಾಯ ಒದಗಿಸಬೇಕು, ಜನರಿಗೂ ನ್ಯಾಯ ಸಿಗಬೇಕು ಎಂದು ತಿಳಿಸಿದರು.
ಪ್ರಚಾರಕ್ಕೆ ಯಾರು ಬೇಕಾದ್ರು ಹೋಗಲಿ. ದೆಹಲಿಗೆ ಯಾರು ಕರೆಯುತ್ತಿದ್ದಾರೆ ಅಂತ ನನಗೆ ಗೊತ್ತಿದೆ. ಬಂದು ಸ್ಟೇಟ್ಮೆಂಟ್ ಕೊಡಿ ಅಂತಾ ಕರೆಯುತ್ತಿದ್ದಾರೆ. ನಾವು ತನಿಖೆಗೆ ಆದೇಶ ಮಾಡಿದ್ದೇವೆ. ಅವರು ಮಾಡಿರುವ ಆರೋಪ ಪ್ರೂವ್ ಮಾಡಲಿ. ಯಾರೆಲ್ಲ ಪ್ರಾಮಾಣಿಕ ಕೆಲಸ ಮಾಡಿದ್ದಾರೋ, ಅವರಿಗೆಲ್ಲ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇವೆ ಎಂದು ಇದೇ ವೇಳೆ ಡಿಕೆಶಿ ತಿಳಿಸಿದರು.
ಸಚಿವ ರಾಮಲಿಂಗಾರೆಡ್ಡಿ ವಾಗ್ದಾಳಿ: ಅಂದು ಗುತ್ತಿಗೆದಾರರು ಮಾಡಿದ್ದ 40% ಆರೋಪ ಸತ್ಯ, ಸದ್ಯ ಮಾಡುತ್ತಿರುವ 15% ಆರೋಪ ಸುಳ್ಳು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ವಿಧಾನಸೌಧದಲ್ಲಿ ಬಿಲ್ ಬಾಕಿ ವಿಚಾರಕ್ಕೆ ಪ್ರತಿಕ್ರಿಯಿಸುತ್ತ, ಬಿಲ್ ಬಾಕಿ ಬಗ್ಗೆ ತನಿಖೆ ನಡೆಸಲು ನಾಲ್ಕು ತಂಡ ರಚನೆಯಾಗಿದೆ. ಅವರ ವರದಿ ಬಳಿಕ ಬಿಲ್ ಕ್ಲಿಯರ್ ಮಾಡುತ್ತೇವೆ. ವರದಿ ಕೊಡುವ ಮೊದಲೇ ಕಮಿಷನ್ ಆರೋಪ ಮಾಡುತ್ತಿದ್ದಾರೆ. ಈ ಅರೋಪಗಳು ಸತ್ಯಕ್ಕೆ ದೂರವಾಗಿವೆ. ಬಿಜೆಪಿಯ 40% ಕಮಿಷನ್ ಆಯಿತು. ಇದೀಗ ನಮ್ಮ ಸರ್ಕಾರದ ಬಗ್ಗೆ ಟೀಕೆ ಮಾಡುವ ನೈತಿಕ ಹಕ್ಕು ಕಳೆದುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಆನ್ಲೈನ್ನಲ್ಲಿ ಬಿಲ್ ಪಾವತಿಗೆ ಕ್ರಮ: ಬಿಜೆಪಿ ಅವರ ಮಾತಿಗೆ ಕಿಮ್ಮತ್ತಿಲ್ಲ. ವಿರೋಧ ಪಕ್ಷದಲ್ಲಿ ಇದ್ದು ಕೆಲಸ ಮಾಡಲಿ. ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಬೇಕಿದೆ. ಬೇಗ ಬಿಲ್ ಬಿಡುಗಡೆಯಾದರೆ ಕೆಲಸ ಮಾಡಲು ಅನುಕೂಲ ಆಗುತ್ತದೆ. ಆನ್ಲೈನ್ನಲ್ಲಿ ಬಿಲ್ ಪೇಮೆಂಟ್ ಮಾಡಲು ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು.
ಶೀಘ್ರ ಬಿಲ್ ಪಾವತಿಗೆ ಕ್ರಮ: ಗುತ್ತಿಗೆದಾರರೂ ಸಹ ಕಷ್ಟದಲ್ಲಿದ್ದಾರೆ. ಆದಷ್ಟು ಬೇಗ ಬಾಕಿ ಬಿಲ್ ಪಾವತಿ ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇನೆ. ಬಿಲ್ ಹಣ ಪಾವತಿಸಿದರೆ ಅವರಿಗೆ ಮುಂದಿನ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದರು.
ಬಿಜೆಪಿಯವರು ಹತಾಶರಾಗಿದ್ದಾರೆ-ಪ್ರಿಯಾಂಕ್ ಖರ್ಗೆ: ಬಿಜೆಪಿಯವರು ಹತಾಶರಾಗಿದ್ದಾರೆ. ಅವರು ಎಲ್ಲಿ ಹೋಗಿ ದ್ವನಿ ಏರಿಸಬೇಕಿತ್ತೋ ಅಲ್ಲಿ ಏರಿಸುತ್ತಿಲ್ಲ. ಬಿಜೆಪಿ ಹೈಕಮಾಂಡ್ಗೆ ಹೋಗಿ ವಿಪಕ್ಷ ನಾಯಕನ ಸ್ಥಾನ ಕೊಡಿ ಅಂತಾ ಹೇಳಿ. ಅಲ್ಲಿ ಧ್ವನಿ ಎತ್ತಿ, ಆಗ ಬಿಜೆಪಿಗೆ ಗೌರವ ಬರುತ್ತದೆ. ಸರ್ಕಾರ ಅಧಿಕಾರಕ್ಕೆ ಬಂದು ಎರಡು ತಿಂಗಳಾಗಿವೆ. ಐದು ಗ್ಯಾರೆಂಟಿಗಳಲ್ಲಿ ಈಗಾಗಲೇ 4 ಗ್ಯಾರೆಂಟಿ ಜಾರಿಗೆ ತಂದಿದ್ದೇವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಈ ವಿಚಾರದಲ್ಲಿ ಕಾಂಟ್ರಾಕ್ಟ್ ಅಸೋಸಿಯೇಷನ್ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ನಾವು ಭ್ರಷ್ಟಾಚಾರದ ಆರೋಪ ಮಾಡ್ತಿಲ್ಲ. ಬಿಲ್ ವಿಳಂಬ ಆಗ್ತಿದೆ ಅಂತಾ ಹೇಳಿದ್ದಾರೆ. ಈಗಾಗಲೇ ಡಿಸಿಎಂ, ಸಚಿವರು ಸ್ಪಷ್ಟವಾಗಿ ಹೇಳಿದ್ದಾರೆ. ಕಾಮಗಾರಿ ಪರಿಶೀಲನೆ ಮಾಡಿ ಹಣ ಬಿಡುಗಡೆ ಮಾಡುತ್ತೇವೆ ಅಂತಾ ಭರವಸೆ ನೀಡಿದ್ದಾರೆ. ಇದಕ್ಕೆ ಗುತ್ತಿಗೆದಾರರು ಒಪ್ಪಿಕೊಂಡಿದ್ದಾರೆ. ಕೆಲಸ ಮಾಡಿದ್ರೆ ಬಿಲ್ ಪಾವತಿ ಮಾಡಿ ಅಂತಾ ಸೂಚಿಸಲಾಗಿದೆ. ಬಿಜೆಪಿಗೆ ಯಾಕೆ ಇಂಟ್ರೆಸ್ಟ್? ಎಂದು ಖರ್ಗೆ ಪ್ರಶ್ನಿಸಿದರು.
ನೀವು ಆಗಲೇ ಇದಕ್ಕೆ ಕಮಿಷನ್ ತಗೊಂಡಿದ್ದೀರಾ?. ಇವರು ಯಾಕೆ ಅವರ ಪರ ಬ್ಯಾಟಿಂಗ್ ಮಾಡ್ತಿದ್ದಾರೆ?. 40% ಸರ್ಕಾರ ಅಂತಾ ಖ್ಯಾತಿ ಪಡೆದಿದ್ದು ನೀವು, ನಾವಲ್ಲ. ಕಾಮಗಾರಿ ಆಗಿದ್ರೆ ಖಂಡಿತವಾಗಿ ಬಿಲ್ ಪಾವತಿ ಆಗುತ್ತೆ ಎಂದು ಸಿಎಂ ಹೇಳಿದ್ದಾರೆ. ಬಿಜೆಪಿಯವರಿಗೆ ನನ್ನ ಸಲಹೆ ಏನಂದ್ರೆ, ದಯವಿಟ್ಟು ಕಾಂಗ್ರೆಸ್ ಬಗ್ಗೆ ಮಾತಾಡೋದು ಬಿಟ್ಟು. ನೀವು ನಿಮ್ಮ ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಮಾಡಿ. ಅದಾದ ಮೇಲೆ ಪ್ರಶ್ನೆ ಮಾಡಿ ಎಂದು ಕಿಡಿಕಾರಿದರು.
ಇದನ್ನೂ ಓದಿ: Coffee Price: ಟೊಮೆಟೊ ಆಯ್ತು ಇದೀಗ ಕಾಫಿ ಬೆಳೆಗಾರರಲ್ಲಿ ಸಂತಸ; ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾಫಿ ಬೆಲೆ ಏರಿಕೆ