ಬೆಂಗಳೂರು: ಪ್ರತಿ 60 ಕಿಲೋಮೀಟರ್ಗೆ ಒಂದರಂತೆ ಮಾತ್ರ ಟೋಲ್ ವ್ಯವಸ್ಥೆ ಇರಲಿದೆ ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಹಾಗಾಗಿ ಎಲ್ಲೆಲ್ಲಿ ಅಗತ್ಯವಿದೆಯೋ ಅಲ್ಲಿ ಮಾತ್ರ ಟೋಲ್ ಗೇಟ್ಗಳನ್ನು ನಿರ್ಮಿಸಲಾಗುತ್ತದೆ. ಇದರಿಂದ ಟೋಲ್ ಕಿರಿಕಿರಿಯೂ ತಪ್ಪಲಿದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ತಿಳಿಸಿದ್ದಾರೆ.
ವಿಧಾನಪರಿಷತ್ನ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಚಿದಾನಂದಗೌಡ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸದ್ಯ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ 12 ಟೋಲ್ಗಳಿವೆ. ಅವುಗಳಲ್ಲಿ ನೆಲಮಂಗಲ ಟೋಲ್ ಅವಧಿ ಮುಗಿದಿದ್ದು, 474 ದಿನ ಟೋಲ್ ಸಂಗ್ರಹ ವಿಸ್ತರಣೆ ಮಾಡಲಾಗಿದೆ. ಹೆಬ್ಬಾಳ ಮತ್ತು ಚಳಗೆರೆ ಟೋಲ್ ಅವಧಿಯೂ ಮುಗಿದಿದೆ. ಹಾಗಾಗಿ ಹೊಸ ಏಜೆನ್ಸಿ ಬರುವವರೆಗೂ ಟೋಲ್ ಸಂಗ್ರಹ ವಿಸ್ತರಣೆ ಮಾಡಲಾಗಿದೆ.
ತುಮಕೂರು ಟೋಲ್ ವಿರುದ್ಧ ಕ್ರಮ: ನೆಲಮಂಗಲ ತುಮಕೂರು ತನಕ ಅಷ್ಟಪಥ, ದಶಪಥ ರಸ್ತೆ ನಿರ್ಮಾಣ ಮಾಡುವ ಪ್ರಸ್ತಾಪ ಇಲ್ಲ. ಆದರೆ ಈ ಮಾರ್ಗವನ್ನು ಆರು ಪಥದ ರಸ್ತೆಯನ್ನಾಗಿ ಉನ್ನತೀಕರಿಸಲಾಗಿದ್ದು, ಈಗಾಗಲೇ ಟೆಂಡರ್ ಮಾಡಲಾಗಿದೆ. ಆದಷ್ಟು ಬೇಗ ರಸ್ತೆ ಅಗಲೀಕರಣ ಆಗಲಿದೆ. ಅಲ್ಲದೇ ಅವಧಿ ಮುಗಿದರೂ ತುಮಕೂರು ಟೋಲ್ನಲ್ಲಿ ಶುಲ್ಕ ಪಡೆಯಲಾಗುತ್ತಿದೆ. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಲೋಕೋಪಯೋಗಿ ಸಚಿವ ಸಿ ಸಿ ಪಾಟೀಲ್ ಭರವಸೆ ನೀಡಿದ್ದಾರೆ.
ವಿಧಾನಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ವೈ.ಎ ನಾರಾಯಣಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ತುಮಕೂರು ಟೋಲ್ ಅವಧಿ 2021 ರಲ್ಲಿ ಮುಗಿದಿದೆ. ಅವಧಿ ಮುಗಿದರೂ ಟೋಲ್ ಸಂಗ್ರಹ ಮಾಡುತ್ತಿದ್ದಾರೆ. ಕೋರ್ಟ್ಗೆ ಹೋಗಿ ಆರ್ಬಿಟ್ರೇಷನ್ ಅವಧಿ ಮೇಲೆ ಟೋಲ್ ಸಂಗ್ರಹ ಮಾಡುತ್ತಿದ್ದಾರೆ. ಈ ಬಗ್ಗೆ ಕಾನೂನು ಅಡಿ ಕ್ರಮ ತೆಗೆದುಕೊಳ್ಳಲಾಗುತ್ತದೆ.
ಇದನ್ನೂ ಓದಿ: ವಿಧಾನ ಪರಿಷತ್ನಲ್ಲಿ ಕರ್ನಾಟಕ ಪ್ರದೇಶಾಭಿವೃದ್ಧಿ ಅಧಿನಿಯಮ 1966 (ತಿದ್ದುಪಡಿ)ವಿಧೇಯಕ ಅಂಗೀಕಾರ
ಏರ್ಪೋರ್ಟ್ ರಸ್ತೆ ಟೋಲ್ ದುಬಾರಿ: ಏರ್ಪೋರ್ಟ್ ರಸ್ತೆ ಟೋಲ್ ಹೆಚ್ಚು ಶುಲ್ಕ ಪಡೆಯುತ್ತಿದೆ. ಆದರೆ ಇದು ನಮ್ಮ ಅಧೀನಕ್ಕೆ ಬರುವುದಿಲ್ಲ. ಆದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಶುಲ್ಕ ಕಡಿಮೆ ಮಾಡುವಂತೆ ಮನವಿ ಮಾಡಿ ಪತ್ರ ಬರೆಯುತ್ತೇವೆ. ಏರ್ ಪೋರ್ಟ್ ರಸ್ತೆಯಲ್ಲಿ ಸರ್ವೀಸ್ ರಸ್ತೆ ಸಮಸ್ಯೆ ಇತ್ತು. ಈಗ ಆ ಸಮಸ್ಯೆ ಬಗೆಹರಿದಿದೆ ಎಂದರು.
ವಾಹಣ ದಟ್ಟಣೆಯಿಂದ 3 ನಿಮಿಷಕ್ಕೂ ಹೆಚ್ಚು ಅವಧಿ ಟೋಲ್ಗಳಲ್ಲಿ ಕಾಯುವ ಪರಿಸ್ಥಿತಿ ಉಂಟಾಗಿದೆ. ಈಗಾಗಲೇ ಅಧಿಕಾರಿಗಳ ಸಭೆ ಮಾಡಲಾಗಿದೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇವೆ. ಅದೇ ರೀತಿ ಸಿಎಸ್ಆರ್ ಫಂಡ್ ಪಡೆಯಲು ಕೆಲವೊಂದು ನಿಯಮ ಇವೆ. ಈ ನಿಯಮದ ಅನ್ವಯ ಬರುವವರಿಂದ ಸಿಎಸ್ಆರ್ ಫಂಡ್ ಪಡೆಯುವ ಬಗ್ಗೆ ಕ್ರಮವಹಿಸುತ್ತೇವೆ ಎಂದು ಸಚಿವ ಸಿ ಸಿ ಪಾಟೀಲ್ ಹೇಳಿದರು.