ಬೆಂಗಳೂರು: ಕಂಬಳ ಕ್ರೀಡೆಗೆ ಯಾವ ರೀತಿ ಉತ್ತೇಜನ ನೀಡಬೇಕು ಎಂಬ ಬಗ್ಗೆ ತಜ್ಞರು, ಆಸಕ್ತರ ಜತೆ ಚರ್ಚಿಸಿ ಉತ್ತಮ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಸಚಿವ ನಾರಾಯಣಗೌಡ ಹೇಳಿದ್ದಾರೆ. ನಿಯಮ 330ರ ಅಡಿ ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿ, ಬಿ. ಕೆ ಹರಿಪ್ರಸಾದ್, ಡಾ. ಕೆ. ಗೋವಿಂದರಾಜು, ಭೋಜೇಗೌಡ, ಪ್ರತಾಪ್ ಸಿಂಹ ನಾಯಕ್ ಹಾಗೂ ಇತರೆ ಸದಸ್ಯರು ಅಸ್ತಿತ್ವ ಕಳೆದುಕೊಳ್ಳುತ್ತಿರುವ ಕಂಬಳ ಕ್ರೀಡೆಗೆ ಉತ್ತೇಜನ ನೀಡಬೇಕು. ಇದಕ್ಕೆ ಹೆಚ್ಚು ಪ್ರೋತ್ಸಾಹ ನೀಡಬೇಕೆಂದು ಒತ್ತಾಯಿಸಿದರು.
ಒತ್ತಾಯಕ್ಕೆ ಪೂರಕವಾಗಿ ಸ್ಪಂದಿಸಿದ ಸಚಿವರು, ಆದಷ್ಟು ಬೇಗ ರಾಜ್ಯದ ಗ್ರಾಮೀಣ ಕ್ರೀಡೆಗೆ ಒತ್ತು ಕೊಟ್ಟು ಪ್ರೋತ್ಸಾಹ ನೀಡುತ್ತೇವೆ ಎಂದರು. ಪರೀಕ್ಷಾ ಪ್ರಾಧಿಕಾರದಲ್ಲಿ ಅಕ್ರಮ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ನಡೆಯುತ್ತಿರುವ ಅಕ್ರಮಗಳ ಕುರಿತು ನಿಯಮ 330 ರ ಅಡಿ ವಿಧಾನ ಪರಿಷತ್ನಲ್ಲಿ ಬಿಜೆಪಿ ಸದಸ್ಯ ರವಿಕುಮಾರ್ ಮಾತನಾಡಿ, ವೈದ್ಯಕೀಯ ಶಿಕ್ಷಣ ಬಹಳಷ್ಟು ವ್ಯಾಪಾರೀಕರಣಗೊಂಡಿದೆ. ಸರ್ಕಾರಿ ಕಾಲೇಜಿನಲ್ಲಿ ನಿಗದಿಪಡಿಸಿದ ಶುಲ್ಕವನ್ನು ಖಾಸಗಿ ಕಾಲೇಜ್ನಲ್ಲಿ ಶೇ. 50 ರಷ್ಟು ಸೀಟು ಭರ್ತಿ ಮಾಡಿಕೊಳ್ಳಬೇಕಾಗುತ್ತದೆ. ಆದರೆ ಅಕ್ರಮಗಳು ಹೆಚ್ಚಾಗಿವೆ ಎಂದರು.
ಇಲ್ಲಿನ ಅಕ್ರಮಗಳಿಗೆ ಧನುಷ್, ಹರಿಣಿ ಎಂಬ ವಿದ್ಯಾರ್ಥಿಗಳ ವಿವರ ನೀಡಿ ಉದಾಹರಣೆ ಕೊಟ್ಟರು. ವೈದ್ಯಕೀಯ ಸೀಟು ಸಿಕ್ಕರೆ ಸ್ವರ್ಗ ಸಿಕ್ಕ ಹಾಗೆ. ಆದರೆ, ವಿದ್ಯಾರ್ಥಿ ನೀಡಿದ ದೂರಿಗೆ ಕ್ರಮ ಆಗಿಲ್ಲ. ಲೋಕಾಯುಕ್ತ ಸೇರಿದಂತೆ ಹಲವೆಡೆ ದೂರು ಸಲ್ಲಿಸಿದ್ದಾರೆ. ಆದರೆ, ನ್ಯಾಯ ಸಿಕ್ಕಿಲ್ಲ. ಇಲಾಖೆ ಈಗಲಾದರೂ ನ್ಯಾಯ ಒದಗಿಸಿ. ಬಡ್ಡಿ ಸಮೇತ ವಿದ್ಯಾರ್ಥಿ ತುಂಬಿರುವ ಆರು ಲಕ್ಷ ರೂ. ಹಣವನ್ನಾದರೂ ವಾಪಸ್ ಕೊಡಿಸಿ. 2018 ರಲ್ಲಿ ಆಗಿರುವ ಪ್ರಕರಣ ಇದು. ಇಂತಹ ನೂರಾರು ಪ್ರಕರಣಗಳು ಇವೆ. ಇಲ್ಲಿ ಹಣ ಹಾಗೂ ಸೀಟು ಕೊಡಿಸುವ ಜವಾಬ್ದಾರಿ ಸರ್ಕಾರದ್ದು ಎಂದು ಮನವಿ ಮಾಡಿದರು.
ಯು. ಬಿ ವೆಂಕಟೇಶ್ ಮಾತನಾಡಿ, 65-68 ಕಾಲೇಜುಗಳಿವೆ. ಇವರೇ ಒಂದು ವಿಭಾಗ ಮಾಡಿಕೊಳ್ಳಲಿ. ಪರೀಕ್ಷಾ ಕೇಂದ್ರ ಮಾಡಲಿ. ಡಿಡಿ ಕೊಟ್ಟು ಕಳುಹಿಸುವ ಅಗತ್ಯವೇನಿದೆ?. ಲೋಕಾಯುಕ್ತರು ಹೇಳಿದ ನಂತರವೂ ಪೊಲೀಸರು ಇಂದಿಗೂ ದೂರು ದಾಖಲಿಸಿಲ್ಲ. ನಾಲ್ಕು ವರ್ಷದಿಂದ ಹಣವೂ ಇಲ್ಲ. ಸೀಟೂ ಸಿಕ್ಕಿಲ್ಲ. ನ್ಯಾಯವಾಗಿ ಸಿಗಬೇಕಿದ್ದ ಸೀಟು ಒಬ್ಬ ವಿದ್ಯಾರ್ಥಿಗೆ ಸಿಕ್ಕಿಲ್ಲ ಅಂದರೆ ಹೇಗೆ? ಮಕ್ಕಳಿಗಾಗಿ ಇಲಾಖೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಸದಸ್ಯ ಡಿ. ಎಸ್ ಅರುಣ್ ಮಾತನಾಡಿ, 5-6 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುವಲ್ಲಿ ಕಾಯಂ ಸಿಬ್ಬಂದಿ ಇಲ್ಲ. ತಂತ್ರಜ್ಞಾನ ಸಮಸ್ಯೆ ಹೆಚ್ಚಾಗಿದೆ. ಅನಗತ್ಯ ಸಮಯ ಹರಣ ಆಗುತ್ತಿದೆ ಎಂದರು. ಮೋಹನ್ ಕೊಂಡಜ್ಜಿ ಮಾತನಾಡಿ, ಸೀಟ್ ಬ್ಲಾಕಿಂಗ್ ದಂಧೆ ಎಲ್ಲಾ ಸರ್ಕಾರಗಳಲ್ಲೂ ನಡೆದಿದೆ. ಇದಕ್ಕೆ ಪರಿಹಾರ ಸಿಗಲೇಬೇಕು ಎಂದು ಹೇಳಿದರು.
ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ್ ನಾರಾಯಣ ಮಾತನಾಡಿ, ಪರೀಕ್ಷಾ ಪ್ರಾಧಿಕಾರದಲ್ಲಿ ಯಾವುದೇ ಅಕ್ರಮ ನಡೆಸಲು ಸಾಧ್ಯವಿಲ್ಲ. ಉತ್ತಮ ಬದ್ಧತೆ ಕಾಯ್ದುಕೊಂಡು ಬಂದಿದೆ. ಮೂರನೇ ವ್ಯಕ್ತಿಗಳ ಪ್ರವೇಶ ಇಲ್ಲವಾಗುತ್ತಿದೆ. ಇದು ಸಮಸ್ಯೆ ತಂದಿದೆ. ಇಲ್ಲಿ ಎಲ್ಲವೂ ಡಿಜಿಟಲೀಕರಣಕ್ಕೆ ವ್ಯವಸ್ಥೆ ಒಳಪಟ್ಟಿದೆ. ಅನ್ಯಾಯ ಆಗಲ್ಲ. ಎಲ್ಲವೂ ಸ್ಪಷ್ಟವಾಗಿ ನೀಡಬೇಕಾಗುತ್ತದೆ. ಸ್ಪಷ್ಟ, ನಿಖರತೆ ಇಲ್ಲಿರುತ್ತದೆ ಎಂದು ಹೇಳಿದರು.
ಪರಿಷತ್ನಲ್ಲಿ ಪ್ರಸ್ತಾಪವಾದ ವಿದ್ಯಾರ್ಥಿಗೆ ಸೀಟು ಸಿಕ್ಕಿಲ್ಲ. ಅಲ್ಲಿ ವಿದ್ಯಾರ್ಥಿ ಜತೆ ಬಂದಿದ್ದ ಗಾರ್ಡಿಯನ್, ತನ್ನ ಮಗಳಿಗೆ ಈ ಡಿಡಿಯನ್ನು ವರ್ಗಾಯಿಸಿಕೊಂಡಿದ್ದಾರೆ. ಇದು ಲೋಕಾಯುಕ್ತ ತನಿಖೆ ನಡೆದಿದ್ದು, ಕೇಸನ್ನು ವಜಾಗೊಳಿಸಿದೆ. ಇಲ್ಲಿ ಅಕ್ರಮ ಆಗಿಲ್ಲ. ನಮ್ಮ ನೈತಿಕತೆಯನ್ನು ಉಳಿಸಿಕೊಳ್ಳುತ್ತೇವೆ. ಆನ್ಲೈನ್ ಮೂಲಕ ಇನ್ನಷ್ಟು ಅನುಕೂಲ ಒದಗಿಸಲು ತೀರ್ಮಾನಿಸಿದ್ದೇವೆ ಎಂದರು.