ಬೆಂಗಳೂರು : ಬೆಳ್ಳಂದೂರು ಕೆರೆ ಹೂಳು ತೆಗೆಯುವುದು ಹೇಗೆ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ ಎಂದು ಕಾನೂನು ಮತ್ತು ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಸಣ್ಣ ನೀರಾವರಿ ಇಲಾಖೆ, ಪರಿಸರವಾದಿಗಳ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೂಳು ತೆಗೆಯಲು ಎರಡು ವರ್ಷ ಬೇಕಾಗುತ್ತದೆ. ಈಗಾಗಲೇ ಬೆಳ್ಳಂದೂರು ಕೆರೆ ಹೂಳು ತೆಗೆಯಲು 300 ಕೋಟಿ ರೂ. ಹಣ ಇರಿಸಲಾಗಿದೆ. ಆದರೂ ಹೂಳು ತೆಗೆಯಲು ಸಾಧ್ಯವಾಗುತ್ತಿಲ್ಲ. ಕೆರೆಯಲ್ಲಿ ತೆಗೆದ ಹೂಳು ಹೊರಗೆ ಸಾಗಿಸಲು ಸಾಧ್ಯವಾಗುವುದಿಲ್ಲ. ಕಾರಣ, ನಿತ್ಯ ಮೂನ್ನೂರಕ್ಕೂ ಹೆಚ್ಚು ಲಾರಿಗಳನ್ನು ಓಡಿಸಬೇಕು. ಇದಕ್ಜೆ ಜನ ಬಿಡುತ್ತಾರಾ? ಎಂಬ ಪ್ರಶ್ನೆಯೂ ಉದ್ಭವಿಸಿದೆ ಎಂದರು.
ರಾಷ್ಟ್ರೀಯ ಹಸಿರು ಪೀಠ ಸೂಚನೆ ನೀಡಿರುವುದರಿಂದ ಹೂಳು ತೆಗೆಯಲೇ ಬೇಕಿದೆ. ಆದರೆ, ನಮಗೆ ನಗರದ ಟ್ರಾಫಿಕ್ ದೊಡ್ಡ ಸಮಸ್ಯೆ ಆಗಲಿದೆ. ಇದಕ್ಕೆ ಜನರ ಸಹಕಾರ ಅಗತ್ಯ ಇದೆ ಎಂದು ಹೇಳಿದರು. ದಿಢೀರ್ ಆಗಿ ನಡೆದ ರಾಜಕೀಯ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ ಮಾಧುಸ್ವಾಮಿ, ಹಾಸನ ಉಸ್ತುವಾರಿ ಕೈತಪ್ಪಿದ್ದಕ್ಕೆ ಯಾವುದೇ ಬೇಜಾರಿಲ್ಲ. ಇನ್ನೂ ಸಂತೋಷವಾಗಿದೆ. ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಿರುವುದಕ್ಕೆ ಖುಷಿ ಇದೆ ಎಂದರು.
ನಾನು ಹಾಸನದ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಯಾವುದೇ ಕಾಟ ಕೊಟ್ಟಿಲ್ಲ. ಅವರು ನನಗೇಕೆ ಕಾಟ ಕೊಡುತ್ತಾರೆ. ಒಂದು ದಿನವೂ ಅವರಿಂದ ಯಾವುದೇ ರೀತಿಯ ಸಮಸ್ಯೆ ಆಗಿಲ್ಲ. ಈಗ ಗೋಪಾಲಯ್ಯ ಅವರಿಗೆ ಹಾಸನ ಜಿಲ್ಲಾ ಉಸ್ತುವಾರಿ ನೀಡಿದ್ದನ್ನು ನಾನು ಸ್ವಾಗತಿಸುತ್ತೇನೆ ಎಂದು ಹೇಳಿದರು. ಹಿರಿಯ ಶಾಸಕರಾದ ಉಮೇಶ್ ಕತ್ತಿ ಹಾಗೂ ಬಸನಗೌಡ ಪಾಟೀಲ ಯತ್ನಾಳ ವಿಚಾರದ ಬಗ್ಗೆ ಯಾವುದೇ ಪ್ರತಿಕ್ರಿಯೆ ಕೊಡುವುದಿಲ್ಲ ಎಂದರು.