ಬೆಂಗಳೂರು: ನಾನು ಶಾಲೆಗೆ ಹೋಗುವಾಗ ಪಠ್ಯದಲ್ಲಿ ಶಿವನ ಚಿತ್ರ ಇತ್ತು, ಗಣೇಶನ ಚಿತ್ರವೂ ಇತ್ತು. ನಾವು ಪಠ್ಯದಲ್ಲಿ ಕೇಸರೀಕರಣ ಮಾಡುತ್ತಿಲ್ಲ. ಸರ್ಕಾರಗಳು ಕಾಲಕಾಲಕ್ಕೆ ಪಠ್ಯ ಪರಿಷ್ಕರಣೆ ಮಾಡೋದು ಸಹಜ. ಕೆಲವರು ನಮ್ಮ ಪಠ್ಯ ಬೇಡ ಅಂತ ಪತ್ರ ಬರೆಯುತ್ತಿದ್ದಾರೆ. ಪತ್ರ ಬರೆದವರೆಲ್ಲರ ಪಠ್ಯ ಸೇರಿಸಿಲ್ಲ, ಪ್ರಶಸ್ತಿ ವಾಪಸಿ ತರ ಪಠ್ಯ ವಾಪಸಿಗೆ ಆಗ್ರಹ ಮಾಡಲಾಗ್ತಿದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ನಗರದ ಯವನಿಕಾದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂತಹ ಗೊಂದಲಗಳು ಸೃಷ್ಟಿ ಆಗುವುದಕ್ಕೆ ಚುನಾವಣೆಗಳೂ ಕಾರಣ. ಚುನಾವಣೆ ಹತ್ತಿರ ಬಂದಾಗ ಕೆಲವೊಮ್ಮೆ ಗುಡುಗು, ಸಿಡಿಲು ಸಹಜ. ಚುನಾವಣೆ ಬಳಿಕ ಎಲ್ಲವೂ ಕೂಡ ತಂಪಾಗುತ್ತದೆ. ಕೆಲವರಿಗೆ ಕೆಲ ಘಟನೆಗಳಿಂದ ಒಂದು ಸಮುದಾಯದ ವೋಟು ತಪ್ಪಿಹೋಗುತ್ತದೆ ಎಂಬ ಭಯ. ಅದಕ್ಕೆ ಇನ್ನೂ ಕೆಲವರು ಆತಂಕದಿಂದ ವರ್ತಿಸುತ್ತಾರೆ. ನಮ್ಮ ಸರ್ಕಾರ ಆಡಳಿತ ನಡೆಸುತ್ತದಿಯೇ ಹೊರತು ಬೇರೆ ಏನೂ ಮಾಡುತ್ತಿಲ್ಲ ಎಂದರು.
ಪಠ್ಯ ಪರಿಷ್ಕರಣೆ ಮಾಮೂಲು ಪ್ರಕ್ರಿಯೆ, ಇದನ್ನು ವೈಭವೀಕರಿಸುವ ಅಗತ್ಯ ಇಲ್ಲ. ಮೂಲ ವಿಚಾರಕ್ಕೆ ಗೊಂದಲಕ್ಕೆ ಚ್ಯುತಿ ತರದಂತೆ ಪರಿಷ್ಕರಿಸಲಾಗಿದೆ ಅಂತ ಸಮಿತಿ ಅಧ್ಯಕ್ಷರೇ ಹೇಳಿದ್ದಾರೆ. ಚರ್ಚೆ ಮಾಡಲಿ ತೊಂದರೆ ಇಲ್ಲ. ಸಾಧಕ, ಬಾಧಕ ನೋಡಿ ಸಿಎಂ ನಿರ್ಧರಿಸುತ್ತಾರೆ. ನಮ್ಮಲ್ಲಿ ಗೊಂದಲ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ಸಿದ್ದರಾಮಯ್ಯ ಸ್ಪಷ್ಟನೆ ನೀಡಲಿ: ಸಚಿವ ಬಿ.ಸಿ.ನಾಗೇಶ್ ಮನೆ ಮುಂದೆ ಪ್ರತಿಭಟನೆ ವಿಚಾರವಾಗಿ ಮಾತನಾಡಿದ ಅವರು, ಅತ್ಯಂತ ಹೇಯ ಕೃತ್ಯ ಇದು. ಕಾಂಗ್ರೆಸ್ನ ವಿದ್ಯಾರ್ಥಿ ಸೆಲ್ನವರ ಕೃತ್ಯ ನಾಗರಿಕ ಸಮಾಜಕ್ಕೆ ಕಳಂಕವಾಗಿದೆ. ಇದಕ್ಕೆ ಸಿದ್ದರಾಮಯ್ಯ ಸ್ಪಷ್ಟನೆ ಕೊಡಬೇಕು ಎಂದು ಆಗ್ರಹಿಸಿದರು.
ವಿದ್ಯಾರ್ಥಿನಿಯರಿಗೆ ತರಬೇತಿ: ಓಬವ್ವ ಆತ್ಮರಕ್ಷಣೆ ಕಲೆಯನ್ನು 6ನೇ ತರಗತಿವರೆಗೆ ವಿಸ್ತರಣೆಗೆ ನಿರ್ಧರಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 50 ಸಾವಿರ ವಿದ್ಯಾರ್ಥಿನಿಯರಿಗೆ ತರಬೇತಿ ನೀಡಲಾಗುತ್ತಿದೆ. ಇದಕ್ಕೆ 5 ಕೋಟಿ ರೂ. ವೆಚ್ಚ ಆಗಲಿದೆ. 2021-22ರಲ್ಲಿ 3.62 ಲಕ್ಷ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ ಬಿಡುಗಡೆ ಮಾಡಲಾಗಿದೆ. 9.13 ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕೊಡಲಾಗಿದೆ ಎಂದರು.
ಜನಜಾಗೃತಿಗೆ ಯೋಜನೆ: ವಿನಯ ಸಾಮರಸ್ಯ ಯೋಜನೆ ಜಾರಿಗೆ ಪ್ರಕ್ರಿಯೆ ಆರಂಭವಾಗಿದೆ. ಗ್ರಾಮ ಮಟ್ಟದಲ್ಲಿ ಅಸ್ಪಶೃತೆ ವಿರುದ್ಧ ಜನಜಾಗೃತಿಗೆ ಯೋಜನೆ ರೂಪಿಸಲಾಗಿದೆ. ಈ ತಿಂಗಳಾಂತ್ಯದಲ್ಲಿ ಸಿಎಂ ಯೋಜನೆ ಉದ್ಘಾಟನೆ ಮಾಡಲಿದ್ದಾರೆ. ವಿನಯ ಸಾಮರಸ್ಯ ಯೋಜನೆಯಡಿ ಹಲವು ಗುರಿಗಳಿವೆ. ಗ್ರಾಮಗಳಲ್ಲಿ ಎಲ್ಲ ಸಮುದಾಯಗಳಿಗೂ ಒಂದೇ ಸ್ಮಶಾನ ಇರುವ ಬಗ್ಗೆ ಜನಜಾಗೃತಿ ಮೂಡಿಸ್ತೇವೆ. ಅಸ್ಪೃಶ್ಯತೆಯ ಅಗಾಧತೆ ದೊಡ್ಡದು. ಈ ತರದ ಜನಜಾಗೃತಿಗಳಿಂದ ಅದರ ನಿವಾರಣೆಗೆ ನೆರವಾಗಬಹುದು ಎಂದರು.