ಬೆಂಗಳೂರು : ನಮ್ಮ ರಾಜ್ಯದಲ್ಲೂ ಸಮುದಾಯವಾರು ಡಿಸಿಎಂಗಳನ್ನು ಮಾಡಿದರೆ ನಮ್ಮಲ್ಲಿ ಲೋಕಸಭಾ ಫಲಿತಾಂಶ ಉತ್ತಮವಾಗಿ ಬರುತ್ತದೆ ಎಂದು ಸಚಿವ ಕೆ ಎನ್ ರಾಜಣ್ಣ ಪುನರುಚ್ಚರಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಡಿಸಿಎಂ ಡಿಕೆಶಿ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, 28ರಲ್ಲಿ 20 ಸ್ಥಾನ ಗೆಲ್ಲದಿದ್ದರೆ ನಮಗೆ ಯಾವ ನೈತಿಕತೆ ಇರುತ್ತೆ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಕಾರಜೋಳ, ಅಶ್ವತ್ಥ ನಾರಾಯಣ, ಲಕ್ಷ್ಮಣ ಸವದಿ ಸೇರಿ ಮೂವರು ಡಿಸಿಎಂಗಳಿದ್ದರು. ಈಗ ಹೊಸದಾಗಿ 3 ರಾಜ್ಯಗಳಲ್ಲಿ ಸರ್ಕಾರ ಬಂದಿದ್ದು, ಅಲ್ಲೆಲ್ಲ ಬೇರೆ ಸಮುದಾಯಗಳಿಗೆ ನ್ಯಾಯ ದೊರಕಿಸಬೇಕು ಅಂತ ಸಮುದಾಯವಾರು ಡಿಸಿಎಂಗಳನ್ನು ನೇಮಕ ಮಾಡಲಾಗಿದೆ. ಸಮುದಾಯವಾರು ಡಿಸಿಎಂ ಕೊಟ್ರೆ 28ಕ್ಕೆ 28 ಗೆಲ್ತೀವಿ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.
ಹೊಸ ಡಿಸಿಎಂ ಹುದ್ದೆಗೆ ಡಿಕೆಶಿ ವಿರೋಧ ಇಲ್ಲ: ಡಿಸಿಎಂ ಸೇರಿ ಲೋಕಸಭಾ ಚುನಾವಣೆ ವಿಚಾರ ಮತ್ತೊಂದು ಮಗದೊಂದು ಸೇರಿದಂತೆ ಎಲ್ಲವನ್ನೂ ಚರ್ಚೆ ಮಾಡಿದ್ದೇವೆ. ಡಿಸಿಎಂ ಮಾಡಬಾರದು ಅನ್ನೋದಕ್ಕೆ ಡಿ ಕೆ ಶಿವಕುಮಾರ್ ವಿರೋಧ ಇದ್ದಾರೆ ಅಂತ ಯಾರು ತಿಳಿದುಕೊಳ್ಳಬೇಡಿ. ಯಾರೋ ಹೇಳಿಕೊಟ್ಟು ನನ್ನ ಬಾಯಲ್ಲಿ ಹೇಳಿಸ್ತಿದ್ದಾರೆ ಅನ್ನೋ ಊಹಾಪೋಹಗಳು ಬೇಡ. ಅವೆಲ್ಲಾ ಸತ್ಯಕ್ಕೆ ದೂರವಾದವು. ನಮಗ್ಯಾರು ಹೇಳಿಕೊಟ್ಟು ಹೇಳಿಸ್ತಿಲ್ಲ. ಹೆಚ್ಚುವರಿ ಡಿಸಿಎಂ ಮಾಡೋದಕ್ಕೆ ಶಿವಕುಮಾರ್ ಅವರ ವಿರೋಧ ಇಲ್ಲ. ನಾನು ಹೇಳಿರುವ ಹೇಳಿಕೆಗೆ ಈಗಲೂ ಬದ್ಧ ಎಂದು ಸ್ಪಷ್ಟಪಡಿಸಿದರು.
ಖರ್ಗೆ ಅವರ ಗಮನಕ್ಕೆ ಈ ವಿಚಾರ ತೆಗೆದುಕೊಂಡು ಹೋಗಿಲ್ಲ: ಡಿಸಿಎಂ ಮಾಡಲ್ಲ ಎಂಬ ಖರ್ಗೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಇನ್ನು ಪ್ರಸ್ತಾಪ ನಮ್ಮ ಗಮನಕ್ಕೆ ಬಂದಿಲ್ಲ ಎಂದು ಹೇಳಿರೋದು, ಮಾಡಲ್ಲ ಅಂತ ಹೇಳಿಲ್ಲ. ಡಿಸಿಎಂ ಮಾಡೋದಿಲ್ಲ ಅಂತ ಖರ್ಗೆ ಅವರು ತಳ್ಳಿ ಹಾಕಿಲ್ಲ. ಈ ಸಮಯದಲ್ಲಿ ಗೊಂದಲ ಮಾಡೋದು ಬೇಡ ಅಂದಿರೋದು. ನಾವಿನ್ನು ಖರ್ಗೆ ಅವರ ಗಮನಕ್ಕೆ ಈ ವಿಚಾರ ತಗೊಂಡೋಗಿಲ್ಲ ಎಂದರು.
ಡಿಸಿಎಂ ಪ್ರಸ್ತಾಪ ಇಲ್ಲ ಎಂಬ ಸುರ್ಜೆವಾಲ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಅವರು ಹೇಳಿದ್ದು ಸರಿ ಇದೆ ಅಂತ ಹೇಳೋಕಾಗಲ್ಲ. ಸರಿ ಇಲ್ಲ ಅಂತಲೂ ಹೇಳೋಕಾಗಲ್ಲ ಎಂದು ತಿಳಿಸಿದರು. ಡಿಸಿಎಂ ಮಾಡದಿದ್ದರೆ ಲೋಕಸಭಾ ಫಲಿತಾಂಶದಲ್ಲಿ ಹಿನ್ನಡೆಯಾಗುತ್ತಾ ಎಂಬ ವಿಚಾರವಾಗಿ, ಹಿನ್ನಡೆಯಾಗುತ್ತಾ ಇಲ್ವಾ ಅನ್ನೋದನ್ನ ಹೇಳೋಕೆ ಸಮಯ ಇದೆ. ಮುಂದೆ ಹೇಳ್ತೀನಿ ಎಂದು ತಿಳಿಸಿದರು.
ಇದನ್ನೂ ಓದಿ: ಡಿಸಿಎಂ ಹುದ್ದೆ ಬೇಡಾ ಅಂತಾ ಯಾರಾದ್ರೂ ಸಚಿವರು ಹೇಳಿದ್ದಾರಾ?; ನಮ್ಮ ಬೇಡಿಕೆ ನಿರಂತರ ಎಂದ ಸಚಿವ ರಾಜಣ್ಣ