ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಟ್ವೀಟ್ ಮಾಡಿರುವ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗಳಿಗೆ ಸಚಿವ ಡಾ.ಕೆ. ಸುಧಾಕರ್ ಪ್ರತಿಕ್ರಿಯೆ ನೀಡಿದ್ದಾರೆ.
ಖಾಸಗಿ ಆಸ್ಪತ್ರೆಯಲ್ಲಿ ಒಡಂಬಡಿಕೆ ಮಾಡಿಕೊಂಡು ಲಸಿಕೆ ತರಿಸಿಕೊಳ್ಳಲಿ. ಶಾಮನೂರು ಶಿವಶಂಕರಪ್ಪನವರು ತರಿಸಿಕೊಂಡು ಕೊಡುತ್ತಿದ್ದಾರೆ. ವಿರೋಧ ಪಕ್ಷದ ನಾಯಕರು ಹಾಗೂ ಅಧ್ಯಕ್ಷರು ಆ ಕೆಲಸ ಮಾಡಲಿ. ನಾವೇನು ಹೇಳುವುದಿಲ್ಲ. ಆದಷ್ಟು ಬೇಗ ಜನರಿಗೆ ಲಸಿಕೆ ಸಿಗಬೇಕು ಎನ್ನುವುದು ಅಷ್ಟೇ ಮುಖ್ಯ ಎಂದರು.
ಅನ್‌ಲಾಕ್ ಬಗ್ಗೆ ಪ್ರಾಸ್ತಾವಿಕ ಚರ್ಚೆ:
ಸದಾಶಿವನಗರದ ತಮ್ಮ ನಿವಾಸದೆದುರು ಮಾಧ್ಯಮಗಳ ಜೊತೆ ಮಾತನಾಡಿ ಅನ್‌ಲಾಕ್ ಬಗ್ಗೆ ಪ್ರಾಸ್ತಾವಿಕವಾಗಿ ಚರ್ಚೆ ಮಾಡಬಹುದು. ಆದರೆ ಅಂತಿಮವಾಗಿ ನಿರ್ಧಾರವನ್ನು ಮುಖ್ಯಮಂತ್ರಿಗಳು ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದರು.
ಈ ವರ್ಷದ ಅಂತ್ಯಕ್ಕೆ ಎಲ್ಲಾ ನಾಗರಿಕರಿಗೂ ಲಸಿಕೆ:
ಕೋವಿಡ್ ವಿಚಾರವಾಗಿ ಮಾಹಿತಿ ನೀಡಿದ ಸಚಿವ ಡಾ.ಕೆ.ಸುಧಾಕರ್, ಈ ತಿಂಗಳಲ್ಲಿ ಖಾಸಗಿಯವರು 24,46,000 ಡೋಸ್ ವ್ಯಾಕ್ಸಿನ್ಗೆ ಬೇಡಿಕೆ ಇಟ್ಟಿದ್ದಾರೆ. 15,80,520 ಡೋಸ್ ವ್ಯಾಕ್ಸಿನ್ ಈಗಾಗಲೇ ಬಂದಿದೆ. ಈ ತಿಂಗಳಲ್ಲಿ 75 ರಿಂದ 80 ಲಕ್ಷ ಲಸಿಕೆ ನೀಡುತ್ತೇವೆ. ಇದುವರೆಗೂ 1.55 ಕೋಟಿ ಲಸಿಕೆ ನೀಡಲಾಗಿದೆ. ಈ ತಿಂಗಳು ಕನಿಷ್ಠ 80 ಲಕ್ಷ ಲಸಿಕೆ ನೀಡಿ ಈ ವರ್ಷದ ಅಂತ್ಯದೊಳಗೆ ಪ್ರತಿ ವ್ಯಕ್ತಿಗೆ ಎರಡು ಡೋಸ್ ಲಸಿಕೆ ಹಾಕಿಸಲಾಗುವುದು ಎಂದು ಭರವಸೆ ನೀಡಿದರು.
ಮೂರನೇ ಅಲೆಯ ಕುರಿತು ಚರ್ಚೆ:
ಎರಡೂವರೆಗೆ ಟಾಸ್ಕ್ ಫೋರ್ಸ್ ಸಭೆ ಇದೆ. ಮೂರನೇ ಅಲೆಯ ಕುರಿತು ಚರ್ಚೆ ಆಗಲಿದೆ. ದೇವಿ ಪ್ರಸಾದ್ ಶೆಟ್ಟಿಯವರ ವರದಿ ಸಿದ್ಧವಿದ್ದರೆ ಚರ್ಚೆ ನಡೆಸುತ್ತೇವೆ ಎಂದು ಸಚಿವರು ತಿಳಿಸಿದರು.
ಇದನ್ನೂ ಓದಿ: ಸಿಎಂ ಬದಲಾವಣೆ ವಿಚಾರವಾಗಿ ಯಾವುದೇ ಸಹಿ ಸಂಗ್ರಹ ನಡೆಯುತ್ತಿಲ್ಲ: ಪ್ರಹ್ಲಾದ್ ಜೋಶಿ