ಬೆಂಗಳೂರು: ನಾಲ್ಕೈದು ದಿನಗಳಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಕೈಗಾರಿಕೆಗಳಿಗೆ ವಿಧಿಸುವ ಸಮ್ಮತಿ ಶುಲ್ಕ ಪರಿಷ್ಕರಣೆಯ ಬಗ್ಗೆ ಅಂತಿಮ ತೀರ್ಮಾನ ಪ್ರಕಟಿಸುವುದಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು.
ಇಂದು ವಿಧಾನಸೌಧದಲ್ಲಿ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಕೈಗಾರಿಕೆಗಳಿಗೆ ವಿಧಿಸುತ್ತಿರುವ ಸಮ್ಮತಿ ಶುಲ್ಕದ ಪರಿಷ್ಕರಣೆ ಕುರಿತಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರ ಅಧ್ಯಕ್ಷತೆಯಲ್ಲಿ ಹಾಗೂ ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ಸಿ.ಪಿ. ಯೋಗೇಶ್ವರ್ ಉಪಸ್ಥಿತಿಯಲ್ಲಿ ಎರಡನೇ ಸಭೆಯನ್ನು ನಡೆಸಲಾಯಿತು.
ಕೋವಿಡ್ನಂತಹ ಸಮಯದಲ್ಲೂ ರಾಜ್ಯಕ್ಕೆ ಕೈಗಾರಿಕೆಗಳು ಬಂಡವಾಳ ಹೂಡಲು ಮುಂದಾಗುತ್ತಿವೆ. ಆದರೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ವತಿಯಿಂದ ಪರಿಷ್ಕರಣೆ ನಡೆಸಲು ಮುಂದಾಗಿರುವ ಸಮ್ಮತಿ ಶುಲ್ಕದ ಪ್ರಮಾಣ ಬಹಳ ಹೆಚ್ಚಾಗಿದೆ. ಇದನ್ನು ಕಡಿಮೆ ಮಾಡುವಂತೆ ಕೈಗಾರಿಕಾ ಪ್ರತಿನಿಧಿಗಳು ಮನವಿ ಮಾಡಿಕೊಂಡಿದ್ದರಿಂದ ಇಂದು ಎರಡನೇ ಸಭೆಯನ್ನು ನಡೆಸಲಾಗಿದೆ. ಕೈಗಾರಿಕಾ ಇಲಾಖೆಯ ಅಧಿಕಾರಿಗಳು, ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಹಾಗೂ ಕೈಗಾರಿಕಾ ಸಂಘಟನೆಗಳ ಪದಾಧಿಕಾರಿಗಳೊಂದಿಗೆ ಸಭೆಯನ್ನು ನಡೆಸಿ ಅಂತಿಮ ತೀರ್ಮಾನಕ್ಕೆ ಬರಲು ಅಧಿಕಾರಿಗಳಿಗೆ ಸೂಚಿಸಲಾಯಿತು.
ನಾಲ್ಕೈದು ದಿನಗಳಲ್ಲಿ ಈ ಬಗ್ಗೆ ಅಂತಿಮ ತೀರ್ಮಾನ ಪ್ರಕಟಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ ಸಚಿವರು, ಕೈಗಾರಿಕೆಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ದರವನ್ನು ಹೆಚ್ಚಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.