ಬೆಂಗಳೂರು: ಎಸ್ಡಿಪಿಐ ಸಂಘಟನೆ ಹುಟ್ಟಿದ್ದೇ ಕಾಂಗ್ರೆಸ್ಗಾಗಿ. ಈ ಸಂಘಟನೆಗೆ ಕಾಂಗ್ರೆಸ್ಸೇ ಗಾಡ್ಫಾದರ್ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಕಿಡಿಕಾರಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ವಿಷಯಾಂತರ ಮಾಡುತ್ತಿದೆ. ಕಾಂಗ್ರೆಸ್ ಗಲಭೆಕೋರರ ಪರ ವಕಾಲತ್ತು ವಹಿಸುತ್ತಿದೆ. ಕಾಂಗ್ರೆಸ್ನವರು ತಮ್ಮ ಹೇಳಿಕೆಗಳ ಮೂಲಕವೇ ಆರೋಪಿಗಳ ಪರ ಜಾಮೀನು ಅರ್ಜಿ ಹಾಕ್ತಿದಾರೆ ಎಂದು ದೂರಿದರು.
ಗಲಭೆ ಬಗ್ಗೆ ಸಮಗ್ರ ತನಿಖೆ ಆಗಲಿ. ಹಿಂದೂ ದೇವತೆಗಳ ವಿರುದ್ಧವೂ ಅಪಮಾನ ಮಾಡಿದ್ದಾರೆ. ಆಗೆಲ್ಲ ಹಿಂದೂಗಳು ಕಾನೂನು ಕೈಗೆ ತೆಗೆದುಕೊಂಡಿದ್ದರೆ ಪರಿಸ್ಥಿತಿ ಯಾವ ರೀತಿ ಇರುತ್ತಿತ್ತು. ಕಿಡಿಗೇಡಿಗಳಿಗೆ ಉತ್ತರಪ್ರದೇಶ ಸರ್ಕಾರದ ಮಾದರಿ ಕಾಯ್ದೆ ಅನುಸರಿಸಬೇಕು. ಆಗಲೇ ಇಂತಹವರಿಗೆ ಬುದ್ಧಿ ಬರುವುದು ಎಂದರು.
ನವೀನ್ ಬಿಜೆಪಿ ಕಡೆಯವನು ಎಂಬ ಡಿ.ಕೆ.ಶಿವಕುಮಾರ್ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಡಿಕೆಶಿಯದ್ದು ಭಂಡ ರಾಜಕೀಯದ ಬದುಕು. ಕಾಂಗ್ರೆಸ್ ಶಾಸಕರ ಮನೆ ಮೇಲೆ ದಾಳಿ ಮಾಡಿದವರ ಮೇಲೆ, ಆಸ್ತಿ-ಪಾಸ್ತಿ ನಷ್ಟ ಮಾಡಿದವರ ವಿರುದ್ಧ ಡಿಕೆಶಿ ಹೇಳಿಕೆ ಕೊಡುತ್ತಿಲ್ಲ. ಕೇವಲ ರಾಜಕೀಯ ಬೂಟಾಟಿಕೆಯ ಹೇಳಿಕೆಗಳನ್ನು ಕೊಡುವುದನ್ನು ನಿಲ್ಲಿಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.