ಬೆಂಗಳೂರು: ಕಳೆದ 2015-16ರಲ್ಲಿ ಅರ್ಜಿ ಸಲ್ಲಿಸದೆ, ಪರೀಕ್ಷೆ ಬರೆಯದೆ, ಅರ್ಹತೆ ಇಲ್ಲದೇ ಶಿಕ್ಷಕರಾಗಿ ನೇಮಕವಾಗಿದ್ದ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ. ಸಿ ನಾಗೇಶ್ ಅವರು ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಇಂದು ಶೂನ್ಯವೇಳೆಯಲ್ಲಿ ಶಾಸಕ ಪಿ ರಾಜೀವ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಎಸ್ಎಸ್ಎಲ್ಸಿ ಮಂಡಳಿಯ ನಿರ್ದೇಶಕರಿಂದ ತನಿಖೆ ನಡೆಸಿದಾಗ ಮೇಲ್ನೋಟಕ್ಕೆ ಅಕ್ರಮ ನಡೆದಿರುವುದು ಬೆಂಗಳೂರು ವಿಭಾಗದಲ್ಲಿ ಗೊತ್ತಾದ ನಂತರ ಸಿಐಡಿಗೆ ವಹಿಸಲಾಗಿದೆ ಎಂದರು.
ಸಿಇಟಿ ಬರೆಯದೇ, ಅರ್ಹತೆ ಪಡೆಯದೆ, ಅರ್ಜಿ ಸಲ್ಲಿಸದೆ 16 ಮಂದಿ ಶಿಕ್ಷಕರಾಗಿ ನೇಮಕವಾಗಿರುವುದು ಪತ್ತೆಯಾಗಿದ್ದು, ಅವರನ್ನು ಬಂಧಿಸಲಾಗಿದೆ. ಈ ರೀತಿ 35 ರಿಂದ 40 ಮಂದಿ ಶಿಕ್ಷಕರಾಗಿ ನೇಮಕವಾಗಿರುವ ಮಾಹಿತಿ ಇದೆ. ಬೆಂಗಳೂರು ಅಷ್ಟೇ ಅಲ್ಲ ಬೇರೆ ಬೇರೆ ವಿಭಾಗದಲ್ಲೂ ಈ ಬಗ್ಗೆ ಪರಿಶೀಲಿಸಲಾಗುತ್ತದೆ. ಸಿಐಡಿ ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಇದಕ್ಕೂ ಮುನ್ನ ಮಾತನಾಡಿದ ಪಿ. ರಾಜೀವ್, ಸಿಇಟಿ ಪರೀಕ್ಷೆ ಬರೆಯದೆ ಶಿಕ್ಷಕರಾಗಿ ಹೇಗೆ ನೇಮಕವಾದರು ಎಂಬುದರ ಬಗ್ಗೆ ತನಿಖೆಯಾಗಬೇಕು ಎಂದರು. ಇದಕ್ಕೆ ದನಿಗೂಡಿಸಿದ ಶಾಸಕ ಎ. ಎಸ್. ನಡಹಳ್ಳಿ, ಇದನ್ನು ಬಗೆದರೆ ದೊಡ್ಡ ವಿಚಾರವಿದೆ. ಇದು ದೊಡ್ಡ ಹಗರಣ. ತಪ್ಪಿತಸ್ಥರು ಯಾರು ಎಂಬುದು ಬಯಲಾಗಬೇಕು ಎಂದು ಆಗ್ರಹಿಸಿದರು. ಸಚಿವರ ಉತ್ತರದ ನಂತರವೂ ಆಗ್ರಹ ಮುಂದುವರೆದಾಗ ಕಾನೂನು ಸಚಿವ ಮಾಧುಸ್ವಾಮಿ ಮಧ್ಯಪ್ರವೇಶಿಸಿ, ದಾಖಲೆ ಇದ್ದರೆ ಕೊಡಲಿ ಅದನ್ನು ಸೇರಿಸಿ ತನಿಖೆ ಮಾಡುವುದಾಗಿ ಹೇಳಿದರು.
ಜನಸ್ನೇಹಿ ತೀರ್ಮಾನ : ಹೆಸರುಘಟ್ಟ ಹುಲ್ಲುಗಾವಲನ್ನು ವನ್ಯಜೀವಿ ವಲಯವೆಂದು ಘೋಷಣೆ ಮಾಡುವ ಪ್ರಸ್ತಾವನೆಗೆ ಸಂಬಂಧಿಸಿದಂತೆ ಕಾನೂನು ಪ್ರಕಾರ ಜನಸ್ನೇಹಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಶೂನ್ಯವೇಳೆಯಲ್ಲಿ ಶಾಸಕ ಎಸ್. ಆರ್ ವಿಶ್ವನಾಥ್ ಮಾಡಿದ ಪ್ರಸ್ತಾಪಕ್ಕೆ ಉತ್ತರಿಸಿದರು.
ಹೆಸರುಘಟ್ಟ ಹುಲ್ಲುಗಾವಲನ್ನು ವನ್ಯಜೀವಿ ವಲಯವೆಂದು ಘೋಷಿಸುವ ಪ್ರಸ್ತಾವನೆ ಬಗ್ಗೆ ವಿಚಾರಣೆ ಮಾಡಲಾಗುವುದು. ಕಾನೂನು ಪ್ರಕಾರ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿದ ಶಾಸಕ ವಿಶ್ವನಾಥ್ ಗ್ರೇಟರ್ ಹೆಸರುಘಟ್ಟ ಹುಲ್ಲುಗಾವಲಿಗೆ ಪಶುಸಂಗೋಪನಾ ಇಲಾಖೆಗೆ ಸಂಬಂಧಿಸಿದ್ದು, 2000 ಎಕರೆ ಪ್ರದೇಶವಿದ್ದು, ಬೇಲಿಯೂ ಹಾಕಲಾಗಿದೆ. ಇದನ್ನು ಸಂರಕ್ಷಿತ ಪ್ರದೇಶವೆಂದು ಘೋಷಣೆ ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ಇದಕ್ಕೆ ಅರಣ್ಯ ಇಲಾಖೆಗೆ ಸೇರಿಲ್ಲ. ವನ್ಯಜೀವಿ ಮಂಡಳಿಗೆ ಪತ್ರ ಬರೆದು ಪಶುಸಂಗೋಪನೆ ಇಲಾಖೆ ಹಗ್ಗ ಕೊಟ್ಟು ಕೈ ಕಟ್ಟಿಸಿಕೊಳ್ಳುತ್ತಿದೆ ಎಂದರು.
356 ಎಕರೆ ಜಾಗದಲ್ಲಿ ಹುಲ್ಲು ಬೆಳೆಯಲಾಗುತ್ತಿದೆ. ಪರಿಸರ ವಾದಿಗಳು ವನ್ಯಜೀವಿ ಸಂರಕ್ಷಿತ ಪ್ರದೇಶವೆಂದು ಘೋಷಿಸುವ ಬಗ್ಗೆ ಒತ್ತಾಯಿಸುತ್ತಿದ್ದಾರೆ. ಇದು ವನ್ಯಜೀವಿ ಸಂರಕ್ಷಿತ ಪ್ರದೇಶವಲ್ಲ. ಪಶುಸಂಗೋಪನಾ ಇಲಾಖೆಗೆ ಸೇರಿದ್ದು ಎಂದು ಹೇಳಿದರು.
ಮಧ್ಯಪ್ರವೇಶಿಸಿದ ಶಾಸಕ ಕೆ. ಜಿ. ಬೋಪಯ್ಯ, ಅರಣ್ಯೇತರ ಭೂಮಿಯನ್ನು ವನ್ಯಜೀವಿ ವಲಯ ಎಂದು ಘೋಷಿಸಿಲು ಪ್ರಾಥಮಿಕ ಅಧಿಸೂಚನೆ ಹೊರಡಿಸಬೇಕು. ಗ್ರಾಮಸಭೆ ನಡೆಸಬೇಕು. ಆನಂತರ ಜಿಲ್ಲಾಧಿಕಾರಿ ಅಂತಿಮ ಅಧಿಸೂಚನೆ ಹೊರಡಿಸಬೇಕು. ಕೇವಲ ಪತ್ರದ ವ್ಯವಹಾರದ ಮೇಲೆ ನಿರ್ಧರಿಸಲು ಆಗುವುದಿಲ್ಲ ಎಂದರು.
ಪೌರಕಾರ್ಮಿಕರು ಸರ್ಕಾರಿ ನೌಕರರಾಗಿ ಪರಿಗಣನೆ : ರಾಜ್ಯದ 11,133 ಪೌರಕಾರ್ಮಿಕರನ್ನು ಸರ್ಕಾರಿ ನೌಕರರೆಂದು ಪರಿಗಣಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಇದಕ್ಕಾಗಿ ಸಂಪುಟದ ಸದಸ್ಯರು ಹಾಗೂ ಮುಖ್ಯಮಂತ್ರಿಗಳಿಗೆ ಅಭಿನಂದಿಸುವುದಾಗಿ ಸಚಿವ ಗೋವಿಂದ ಕಾರಜೋಳ ತಿಳಿಸಿದರು.
ಈ ಸಂಬಂಧ ಸದನದಲ್ಲಿ ಹೇಳಿಕೆ ನೀಡಿದ ಅವರು, ಪೌರಕಾರ್ಮಿಕರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಲು ಹೋರಾಟ ನಡೆಸಲಾಗುತ್ತಿತ್ತು. ಈ ಹೋರಾಟ ಬೆಂಗಳೂರಿಗೆ ಸೀಮಿತವಾಗಬಾರದು. ಇಡೀ ರಾಜ್ಯಕ್ಕೆ ಅನ್ವಯವಾಗಬೇಕೆಂದು ಸಂಪುಟ ಒಪ್ಪಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ 3673, ಇತರ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 1927, ನಗರಸಭೆ, ಪುರಸಭೆ, ಪಟ್ಟಣಪಂಚಾಯ್ತಿ ವ್ಯಾಪ್ತಿಯಲ್ಲಿ 5533 ಪೌರಕಾರ್ಮಿಕರನ್ನು ಸರ್ಕಾರಿ ನೌಕರರೆಂದು ಘೋಷಿಸಲು ತೀರ್ಮಾನ ಮಾಡಲಾಗಿದೆ ಎಂದು ಹೇಳಿದರು.
ಓದಿ: ರಾಜ್ಯದಲ್ಲಿ 47 ಸಾವಿರ ಶಿಕ್ಷಕರ ಹುದ್ದೆ ಖಾಲಿ, 15 ಸಾವಿರ ಶಿಕ್ಷಕರ ನೇಮಕ: ಸಚಿವ ನಾಗೇಶ್