ಬೆಂಗಳೂರು : ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ವೇಳಾಪಟ್ಟಿಯನ್ನು ಜೂನ್ ತಿಂಗಳ ಕೊನೆಯ ವಾರದಲ್ಲಿ ಪ್ರಕಟಿಸಲಾಗುವುದು ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ತಿಳಿಸಿದ್ದಾರೆ. ಮಲ್ಲೇಶ್ವರದ ಶಿಕ್ಷಣ ಮಂಡಳಿ ಕಚೇರಿಯಲ್ಲಿ ಮಾತನಾಡಿದ ಅವರು, ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳ ಫಲಿತಾಂಶ ಪಟ್ಟಿ ಆಧಾರದ ಮೇರೆಗೆ ಅನುತ್ತೀರ್ಣ ವಿಷಯಗಳಿಗೆ ನಿಯಮಾನುಸಾರ ಪರೀಕ್ಷಾ ಶುಲ್ಕ ಕಟ್ಟಿಸಿಕೊಳ್ಳಲಾಗುವುದು.
ಅನುತ್ತೀರ್ಣ ಎಂಸಿಎಗಳು ಕಾಲೇಜಿಗೆ ತಲುಪಿದ ಕೂಡಲೇ ಶುಲ್ಕ ಕಟ್ಟಿದ ಅಭ್ಯರ್ಥಿಗಳ ಎಂಸಿಎಗಳನ್ನು ಭರ್ತಿ ಮಾಡಿ ಉಪನಿರ್ದೇಶಕರ ಕಚೇರಿಗೆ ಸಲ್ಲಿಸುವುದು. 2021ರ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಹಾಗೂ ಅದಕ್ಕೂ ಹಿಂದಿನ ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳಿಂದ ಮೂಲ ಓಎಂಆರ್/ಅನುತ್ತೀರ್ಣ ಅರ್ಜಿ ಅಥವಾ ಹಿಂದಿನ ಎಂಸಿಎಗಳ ಆಧಾರದ ಮೇಲೆ ಪರೀಕ್ಷೆಗಳಿಗೆ ಶುಲ್ಕ ಕಟ್ಟಿಸಿಕೊಳ್ಳಲಾಗುವುದು ಎಂದು ವಿವರಿಸಿದರು.
ಮರು ಪರೀಕ್ಷೆ : ಅನುತ್ತೀರ್ಣರಾದ ವಿದ್ಯಾರ್ಥಿಗಳು ನಿಯಮಾನುಸಾರ ಫಲಿತಾಂಶ ತಿರಸ್ಕರಿಸಿ ಪರೀಕ್ಷೆ ಬರೆಯಲು ಇಚ್ಛಿಸಿದ್ದಲ್ಲಿ, ಮೂಲ ಅನುತ್ತೀರ್ಣ ಓಎಂಆರ್ಗಳನ್ನು ಪಡೆದುಕೊಂಡ ನಂತರವೇ ಕ್ರಮವಹಿಸುವುದು, ಫಲಿತಾಂಶ ತಿರಸ್ಕರಣೆ ಅರ್ಜಿಯ ಹಿಂಬದಿಯಲ್ಲಿನ ಸೂಚನೆಗಳನ್ನು ಗಮನಿಸಬೇಕು.
2021ರ ದ್ವಿತೀಯ ಪಿಯುಸಿ ವಾರ್ಷಿಕ ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದ ವಿದ್ಯಾರ್ಥಿಗಳು ಫಲಿತಾಂಶ ತಿರಸ್ಕರಿಸಿ 2022ರ ಪೂರಕ ಪರೀಕ್ಷೆ ಬರೆಯಲು ಇಚ್ಛಿಸಿದ್ದಲ್ಲಿ, ಅಂತಹ ವಿದ್ಯಾರ್ಥಿಗಳ ಮೂಲ ಅಂಕಪಟ್ಟಿಗಳ (Original Marks card) ಆಧಾರದ ಮೇಲೆ ನಿಯಮಾನುಸಾರ ಫಲಿತಾಂಶ ತಿರಸ್ಕರಣೆಗೆ ಅವಕಾಶ ನೀಡಲಾಗುವುದು. ದ್ವಿತೀಯ ಪಿಯುಸಿ ಫಲಿತಾಂಶಕ್ಕಾಗಿ ವಿದ್ಯಾರ್ಥಿಗಳು ವೆಬ್‌ಸೈಟ್ www.karresults.nic.in ಸಂಪರ್ಕಿಸಬಹುದು. ಇಲಾಖೆಯ ಸಹಾಯವಾಣಿ ದೂರವಾಣಿ ಸಂಖ್ಯೆ: 080- 23083860/23083864 ಎಂದು ವಿವರಿಸಿದರು.
ಜಾತಿ ಮತ್ತು ವರ್ಗವಾರು ಫಲಿತಾಂಶವನ್ನು ಗಮನಿಸಿದಾಗ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳು ಶೇ.49.76, ಪರಿಶಿಷ್ಟ ಪಂಗಡ-ಶೇ.51.82, ಸಿ-1 ಶೇ.61.07, 2ಎ- ಶೇ.67.47, 2ಬಿ- ಶೇ.57.44, 3ಎ- ಶೇ.70.43, 3ಬಿ-ಶೇ.68.55 ಹಾಗೂ ಸಾಮಾನ್ಯ ವರ್ಗ-ಶೇ.65.82 ಪರೀಕ್ಷೆಗೆ ಹಾಜರಾದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಶೇ-51.38ರಷ್ಟು ಮಂದಿ ಉತ್ತೀರ್ಣರಾಗಿದ್ದಾರೆ. ಇಂಗ್ಲಿಷ್ ಮಾಧ್ಯಮದಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಶೇ.69.99ರಷ್ಟು ಮಂದಿ ತೇರ್ಗಡೆ ಹೊಂದಿದ್ದಾರೆ.
ನೂರಕ್ಕೆ ನೂರು : ವಿಷಯವಾರು ನೂರಕ್ಕೆ ನೂರು ಅಂಕಗಳಿಸಿರುವ ವಿದ್ಯಾರ್ಥಿಗಳ ವಿವರ ನೀಡಿದ ಸಚಿವರು, ಕನ್ನಡದಲ್ಲಿ 563, ಇಂಗ್ಲಿಷ್ನಲ್ಲಿ ಇಬ್ಬರು, ಹಿಂದಿಯಲ್ಲಿ 124, ಮಲಯಾಳಂ ಹಾಗೂ ಉರ್ದುನಲ್ಲಿ ತಲಾ 4, ಸಂಸ್ಕೃತದಲ್ಲಿ 1919, ಫ್ರೆಂಚ್ ಭಾಷೆಯಲ್ಲಿ 32, ಐಚ್ಛಿಕ ಕನ್ನಡದಲ್ಲಿ 18, ಇತಿಹಾಸದಲ್ಲಿ 166, ಅರ್ಥಶಾಸ್ತ್ರದಲ್ಲಿ 1,472, ತರ್ಕಶಾಸ್ತ್ರದಲ್ಲಿ 26, ಭೂಗೋಳಶಾಸ್ತ್ರದಲ್ಲಿ 587, ಹಿಂದುಸ್ತಾನಿ ಸಂಗೀತದಲ್ಲಿ 3, ವ್ಯವಹಾರ ಅಧ್ಯಯನದಲ್ಲಿ 2,837, ಸಮಾಜಶಾಸ್ತ್ರದಲ್ಲಿ 85, ಲೆಕ್ಕಶಾಸ್ತ್ರದಲ್ಲಿ 3,460, ಭೂಗರ್ಭಶಾಸ್ತ್ರದಲ್ಲಿ 5, ಸಂಖ್ಯಾಶಾಸ್ತ್ರದಲ್ಲಿ 2,266, ಮನಶಾಸ್ತ್ರದಲ್ಲಿ 81, ಭೌತಶಾಸ್ತ್ರದಲ್ಲಿ 36, ರಸಾಯನಶಾಸ್ತ್ರದಲ್ಲಿ 2,917, ಗಣಿತಶಾಸ್ತ್ರದಲ್ಲಿ 14,210, ಜೀವಶಾಸ್ತ್ರದಲ್ಲಿ 2,106, ಎಲೆಕ್ಟ್ರಾನಿಕ್ಸ್ ನಲ್ಲಿ 236, ಗಣಕವಿಜ್ಞಾನ 4,868, ಶಿಕ್ಷಣದಲ್ಲಿ 658, ಬೇಸಿಕ್ ಗಣಿತದಲ್ಲಿ 401, ಮಾಹಿತಿ ತಂತ್ರಜ್ಞಾನದಲ್ಲಿ 17, ಆಟೋಮೊಬೈಲ್ನಲ್ಲಿ 20 ಹಾಗೂ ಗೃಹವಿಜ್ಞಾನದಲ್ಲಿ 12 ಮಂದಿ 100ಕ್ಕೆ 100 ಅಂಕ ಗಳಿಸಿದ್ದಾರೆಂದು ಮಾಹಿತಿ ನೀಡಿದರು.
ಪರೀಕ್ಷೆಗೆ ಹಾಜರು : ಸರ್ಕಾರಿ ಪದವಿ ಪೂರ್ವ ಕಾಲೇಜು-ಶೇ.52.84, ಅನುದಾನಿತ ಪದವಿ ಪೂರ್ವ ಕಾಲೇಜು-ಶೇ.62.05, ಅನುದಾನರಹಿತ ಪದವಿಪೂರ್ವ ಕಾಲೇಜು-ಶೇ.76.50, ಕಾರ್ಪೊರೇಷನ್ ಪದವಿಪೂರ್ವ ಕಾಲೇಜು-ಶೇ.55.72 ಹಾಗೂ ವಿಭಜಿತ ಪದವಿ ಪೂರ್ವ ಕಾಲೇಜು- ಶೇ.72.96ರಷ್ಟು ಫಲಿತಾಂಶ ಪಡೆದಿದೆ. ಒಟ್ಟಾರೆ ಶೇ.67.13ರಷ್ಟು ಉತ್ತೀರ್ಣತೆ ದಾಖಲಾಗಿದೆ.
ಶೇ.100 ಫಲಿತಾಂಶ : 4 ಸರ್ಕಾರಿ ಪದವಿಪೂರ್ವ ಕಾಲೇಜುಗಳು, 2 ಅನುದಾನಿತ ಪದವಿಪೂರ್ವ ಕಾಲೇಜು, 50 ಅನುದಾನರಹಿತ ಪದವಿಪೂರ್ವ ಕಾಲೇಜು ಸೇರಿ ಒಟ್ಟು 56 ಕಾಲೇಜುಗಳು ಶೇ.100 ಫಲಿತಾಂಶ ಸಾಧಿಸಿವೆ. ಶೂನ್ಯ ಫಲಿತಾಂಶ ಯಾವ ಕಾಲೇಜಿನಲ್ಲಿಯೂ ಆಗಿಲ್ಲ. ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪಟ್ಟಿಯನ್ನು ರಾಜ್ಯದ ಎಲ್ಲಾ ಪದವಿಪೂರ್ವ ಕಾಲೇಜುಗಳಿಗೆ ಸ್ಯಾಟ್ಸ್ ತಂತ್ರಾಂಶದ ಮುಖಾಂತರ ಕಳುಹಿಸಿಕೊಡಲಾಗುವುದು.
ಉತ್ತರ ಪತ್ರಿಕೆಯ ಸ್ಕ್ಯಾನಿಂಗ್ ಪ್ರತಿಗಾಗಿ ಅರ್ಜಿ ಸಲ್ಲಿಸಲು ಜುಲೈ 18 ಆರಂಭಿಕ ದಿನವಾಗಿದೆ. ಜುಲೈ 30ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಇನ್ನು ಉತ್ತರ ಪತ್ರಿಕೆಯ ಸ್ಕ್ಯಾನಿಂಗ್ ಪ್ರತಿ ಡೌನ್ಲೋಡ್ ಮಾಡಿಕೊಳ್ಳಲು ಪ್ರಾರಂಭ ಮತ್ತು ಕಡೆಯ ದಿನಾಂಕ ಜುಲೈ 6ರಿಂದ ಜುಲೈ10 ಆಗಿದೆ. ಮರು ಮೌಲ್ಯಮಾಪನಕ್ಕಾಗಿ ಹಾಗೂ ಮರು ಎಣಿಕೆಗೆ ಅರ್ಜಿ ಸಲ್ಲಿಸಲು ( ಸ್ಕ್ಯಾನಿಂಗ್ ಪ್ರತಿ ತೆಗೆದುಕೊಂಡವರಿಗೆ ಮಾತ್ರ ಅವಕಾಶ ಇರುತ್ತದೆ) ಜುಲೈ 7ರಿಂದ ಜುಲೈ 13ರವರೆಗೆ ಕಾಲಾವಕಾಶ ನೀಡಲಾಗಿದೆ.
ಸ್ಕ್ಯಾನಿಂಗ್ ಪ್ರತಿ ಪಡೆಯಲು ಪ್ರತಿ ವಿಷಯಕ್ಕೆ 530 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ. ಇನ್ನು ಮರುಮೌಲ್ಯಮಾಪನದ ಶುಲ್ಕ ಪ್ರತಿ ವಿಷಯಕ್ಕೆ 1,670 ರೂ. ಆಗಿದೆ. ಅನುತ್ತೀರ್ಣ ಅಭ್ಯರ್ಥಿಗಳು ಮುಂದಿನ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಮರುಮೌಲ್ಯಮಾಪನ ಫಲಿತಾಂಶಕ್ಕಾಗಿ ಕಾಯದೇ ಬೇಗನೆ ಅರ್ಜಿ ಸಲ್ಲಿಸಬೇಕು. ಮರುಮೌಲ್ಯಮಾಪನದ ನಿಗದಿಪಡಿಸಿರುವ ಅಂಕಗಳಿಗಿಂತ ಹೆಚ್ಚಿನ ಅಂಕಗಳು ಅಥವಾ ಕಡಿಮೆ ಅಂಕಗಳು ಬಂದ ಅಂಕದೊಂದಿಗೆ ಫಲಿತಾಂಶವನ್ನು ಪರಿಷ್ಕರಿಸಿ ಪ್ರಕಟಿಸಲಾಗುವುದು.
ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕ ಪಾವತಿಸಲು, ಪುನರಾವರ್ತಿತ ಮತ್ತು ಫಲಿತಾಂಶ ತಿರಸ್ಕರಿಸಿದ ವಿದ್ಯಾರ್ಥಿಗಳ ಮಾಹಿತಿಯನ್ನು ಪ್ರಾಂಶುಪಾಲರು ಸ್ಯಾಟ್ಸ್ ತಂತ್ರಾಂಶದಲ್ಲಿ ನಮೂದಿಸಲು ದಂಡ ರಹಿತವಾಗಿ ಜೂನ್ 24 ಹಾಗೂ ಜುಲೈ 4 ದಂಡ ಸಹಿತ ಪಾವತಿಗೆ ಕಡೆಯ ದಿನವಾಗಿದೆ. ಪ್ರಾಂಶುಪಾಲರು ಪರೀಕ್ಷಾ ಶುಲ್ಕವನ್ನು ಒಂದೇ ಕಂತಿನಲ್ಲಿ ಖಜಾನೆಗೆ ಸಂದಾಯ ಮಾಡಬೇಕಾದ ದಿನಾಂಕ (ದಂಡ ರಹಿತ) ಜೂನ್ 27 ಹಾಗೂ (ದಂಡ ಸಹಿತ) ಜುಲೈ 5 ಕಡೆಯ ದಿನವಾಗಿದೆ.
ಪರೀಕ್ಷಾ ಅರ್ಜಿಯನ್ನು ಪ್ರಾಂಶುಪಾಲರ ಮೂಲಕ ಜಿಲ್ಲಾ ನಿರ್ದೇಶಕರ ಕಚೇರಿಗೆ ಕಡ್ಡಾಯವಾಗಿ ಸಲ್ಲಿಸಬೇಕಾದರೆ ದಂಡ ರಹಿತವಾಗಿ ಜೂನ್ 28 ಹಾಗೂ ದಂಡ ಸಹಿತವಾಗಿ ಜುಲೈ 6 ಕಡೆಯ ದಿನವಾಗಿದೆ. ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗ ಹಾಗೂ ಪ್ರವರ್ಗ-1ರ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಉಳಿದಂತೆ ಪೂರಕ ಪರೀಕ್ಷೆಗೆ ಅನುತ್ತೀರ್ಣ ವಿದ್ಯಾರ್ಥಿಗಳು ಪಾವತಿಸಬೇಕಾದ ಶುಲ್ಕದ ವಿವರ ಈ ರೀತಿ ಇದೆ.
ಒಂದು ವಿಷಯಕ್ಕೆ 140 ರೂ. ಎರಡು ವಿಷಯಕ್ಕೆ 270 ರೂ. ಮೂರು ಅಥವಾ ಹೆಚ್ಚಿನ ವಿಷಯಕ್ಕೆ 400 ರೂ. ವಿಧಿಸಲಾಗುತ್ತದೆ. ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗ ಹಾಗೂ ಪ್ರವರ್ಗ-1ರ ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಂದ ಕಡ್ಡಾಯವಾಗಿ ಸಲ್ಲಿಸಬೇಕಾದ ಅಂಕಪಟ್ಟಿ ಶುಲ್ಕ 50 ರೂ. ಆಗಿದೆ. ಇನ್ನು ಫಲಿತಾಂಶ ತಿರಸ್ಕರಿಸಿದವರಿಗೆ ಶುಲ್ಕ ಪ್ರಥಮ ಬಾರಿಗೆ ಒಂದು ವಿಷಯಕ್ಕೆ-175 ರೂ. ದ್ವಿತೀಯ ಹಾಗೂ ಅಂತಿಮ ಬಾರಿಗೆ ಒಂದು ವಿಷಯಕ್ಕೆ 350 ರೂ. ಆಗಲಿದೆ ಎಂಬ ವಿವರ ನೀಡಿದರು.
ಇದನ್ನೂ ಓದಿ: ಪಿಯು ಫಲಿತಾಂಶ ಪ್ರಕಟ: ಗಣಿತದಲ್ಲಿ14 ಸಾವಿರ ವಿದ್ಯಾರ್ಥಿಗಳಿಂದ ಶತಕ ಸಾಧನೆ, ಈ ಬಾರಿ ಶೂನ್ಯ ಫಲಿತಾಂಶಕ್ಕೆ ಬ್ರೇಕ್
ವಿದ್ಯಾರ್ಥಿಗಳೊಂದಿಗೆ ಮಾತುಕತೆ : ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಜೊತೆ ಸುದ್ದಿಗೋಷ್ಠಿ ಬಳಿಕ ದೂರವಾಣಿ ಮೂಲಕ ಮಾತನಾಡಿದ ಸಚಿವ ಬಿ.ಸಿ ನಾಗೇಶ್, ಮುಂದಿನ ವಿದ್ಯಾಭ್ಯಾಸ, ಆಸಕ್ತಿ ನಿರೀಕ್ಷೆ ಹಾಗೂ ಅವರ ಅನುಭವವನ್ನು ಕೇಳಿ ಮಾಹಿತಿ ಪಡೆದರು. ಭವಿಷ್ಯದಲ್ಲಿ ಏನಾಗಬೇಕೆಂದು ಬಯಸಿದ್ದೀರಿ? ವಿದ್ಯಾಭ್ಯಾಸವನ್ನು ಎಲ್ಲಿ ಮುಂದುವರಿಸುತ್ತೀರಿ? ಪಾಲಕರ ಪ್ರತಿಕ್ರಿಯೆ ಹೇಗಿದೆ? ಹೆಚ್ಚು ಅಂಕ ಪಡೆಯಲು ಯಾವ ರೀತಿ ವಿದ್ಯಾಭ್ಯಾಸ ಮಾಡಿದ್ರಿ ಎಂಬಿತ್ಯಾದಿ ಮಾಹಿತಿಯನ್ನು ಕೇಳಿ ತಿಳಿದುಕೊಂಡರು. ಮುಂಬರುವ ದಿನಗಳಲ್ಲಿ ನಿಮ್ಮ ಭವಿಷ್ಯ ಉಜ್ವಲವಾಗಿರಲಿ ಎಂದು ಶುಭ ಹಾರೈಸಿದರು.