ಬೆಂಗಳೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿರುವ 1,242 ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ನೇಮಕಾತಿಗೆ ಇದೇ 12ರಿಂದ 16ರವರೆಗೆ ಪರೀಕ್ಷೆ ನಡೆಯಲಿರುವ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥ್ ನಾರಾಯಣ ಅವರು ಪರೀಕ್ಷಾ ಕೇಂದ್ರಗಳಿರುವ 7 ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತಿತರ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದರು.
ಈ ಸಭೆಯಲ್ಲಿ ಮಾತನಾಡಿದ ಸಚಿವರು, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ನಕಲು ಮಾಡುವುದು ಸೇರಿದಂತೆ ಯಾವುದೇ ಅಕ್ರಮಕ್ಕೆ ಕಿಂಚಿತ್ತೂ ಅವಕಾಶ ಮಾಡಿಕೊಡಬಾರದು. ಏನಾದರೂ ಸಮಸ್ಯೆಗಳು ಕಂಡುಬಂದಲ್ಲಿ ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕು. ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ಮತ್ತು ಪಾರದರ್ಶಕವಾಗಿ ನಡೆಸಬೇಕು. ಯಾರಿಗೂ ಪರೀಕ್ಷಾ ವ್ಯವಸ್ಥೆ ಹಾಳುಗೆಡುವಲು ಅಥವಾ ಈ ನೇಮಕಾತಿ ಪ್ರಕ್ರಿಯೆಗೆ ಕಳಂಕ ತರಲು ಆಸ್ಪದ ಕೊಡಬಾರದು. ಹಾಗೇನಾದರೂ ಆದರೆ, ಪರೀಕ್ಷಾಧಿಕಾರಿಗಳಾಗಿರುವ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠರನ್ನೇ ಹೊಣೆಗಾರರಾಗಿ ಮಾಡಲಾಗುವುದು ಎಂದು ಹೇಳಿದರು.
33 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಪರೀಕ್ಷೆ: 33 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಈ ಪರೀಕ್ಷೆ ಬರೆಯುತ್ತಿದ್ದಾರೆ. ಪರೀಕ್ಷೆಗಳು ಬೆಂಗಳೂರು ನಗರ, ಮೈಸೂರು, ಮಂಗಳೂರು, ಶಿವಮೊಗ್ಗ, ಧಾರವಾಡ, ಬೆಳಗಾವಿ ಮತ್ತು ಕಲಬುರಗಿಯಲ್ಲಿ ನಡೆಯಲಿವೆ. ಇದಕ್ಕಾಗಿ 1,409 ಕೊಠಡಿ ಮೇಲ್ವಿಚಾರಕರು, 82 ವೀಕ್ಷಕರು, 82 ಕಸ್ಟೋಡಿಯನ್ಸ್ ಮತ್ತು 164 ಮಂದಿಯ ವಿಶೇಷ ಜಾಗೃತ ದಳವನ್ನು ರಚಿಸಲಾಗಿದೆ ಎಂದು ತಿಳಿಸಿದರು.
ಅಕ್ರಮಗಳ ತಡೆಗೆ ಸಹಾಯವಾಣಿ: 12 ಮತ್ತು 13ರಂದು 82 ಪರೀಕ್ಷಾ ಕೇಂದ್ರಗಳಲ್ಲಿ, 14ರಂದು 22, 15ರಂದು 24 ಮತ್ತು 16ರಂದು 8 ಕೇಂದ್ರಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯಲಿವೆ. ಇದಕ್ಕಾಗಿ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಅಭ್ಯರ್ಥಿಗಳು ಸೂಚಿತ ವಸ್ತ್ರಸಂಹಿತೆಯನ್ನು ಪಾಲಿಸಬೇಕು. ಜೊತೆಗೆ, ಅಕ್ರಮಗಳ ತಡೆಗೆ ಸಹಾಯವಾಣಿಯನ್ನೂ (ಮೊಬೈಲ್ ಸಂಖ್ಯೆ 9901581708) ರಚಿಸಲಾಗಿದೆ. ಅಲ್ಲದೆ, ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಲು ಸೂಚಿಸಲಾಗಿದೆ ಎಂದು ಸಚಿವ ಅಶ್ವತ್ಥ್ ನಾರಾಯಣ ಹೇಳಿದರು.
ವಿಡಿಯೋ ಸಂವಾದದಲ್ಲಿ ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರ್ ನಾಯಕ್, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕಿ ರಮ್ಯಾ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಇದ್ದರು.
ಇದನ್ನೂ ಓದಿ: ಬಿಜೆಪಿ ಭದ್ರಕೋಟೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮತಗಳಿಂದ ಯೋಗಿ ಆದಿತ್ಯನಾಥ್‌ಗೆ ಗೆಲುವು