ಬೆಂಗಳೂರು: ಗಣಿ ಗುತ್ತಿಗೆ ಮತ್ತು ಕ್ರಷರ್ ಲೈಸೆನ್ಸ್ಗೆ ಸಲ್ಲಿಸುವ ಅರ್ಜಿಗಳ ವಿಲೇವಾರಿ ಹಾಗೂ ಕುಂದುಕೊರತೆ ಪರಿಹಾರಕ್ಕಾಗಿ ಮೊದಲ ಬಾರಿಗೆ ಗಣಿ ಅದಾಲತ್ ಆರಂಭಿಸಲಾಗುತ್ತಿದೆ. ಮಾನವ-ವನ್ಯಜೀವಿ ಸಂಘರ್ಷ ನಿಯಂತ್ರಣಕ್ಕೆಆಗಿ ನೀತಿ ರೂಪಿಸಲು ರಾಜ್ಯ ಸರ್ಕಾರ ಬಜೆಟ್ನಲ್ಲಿ ಯೋಜನೆ ಘೋಷಿಸಿದೆ.
- ಗಣಿ/ಕಲ್ಲು ಗಣಿ ಗುತ್ತಿಗೆ ಮತ್ತು ಕ್ರಷರ್ ಲೈಸೆನ್ಸ್ಗೆ ಸಲ್ಲಿಸುವ ಅರ್ಜಿಗಳನ್ನು ನಿಗದಿತ ಸಮಯದೊಳಗೆ ವಿಲೇವಾರಿ ಮಾಡಲು ಏಕಗವಾಕ್ಷಿ ವ್ಯವಸ್ಥೆ ಜಾರಿ ಮಾಡಲು ಹಾಗೂ ಲೈಸೆನ್ಸ್ಗೆ ಸಂಬಂಧಿತ ಕುಂದುಕೊರತೆ ಶೀಘ್ರವಾಗಿ ಪರಿಹರಿಸಲು ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ಗಣಿ ಅದಾಲತ್ ಘೋಷಿಸಲಾಗಿದೆ.
- ಮಾನವ-ವನ್ಯಜೀವಿ ಸಂಘರ್ಷ ನಿಯಂತ್ರಿಸಲು, ವನ್ಯಜೀವಿಗಳ ಸುಗಮ ಮತ್ತು ಅಬಾಧಿತ ಚಲನವಲನಕ್ಕೆ ಅವಶ್ಯವಿರುವ ಎರಡು ಅರಣ್ಯ ಪ್ರದೇಶಗಳ ಮಧ್ಯದ ಕಾರಿಡಾರ್ ಪ್ರದೇಶವನ್ನು ಸರ್ಕಾರ ಖರೀದಿಸಲು ವಿವರವಾದ ಮಾರ್ಗಸೂಚಿ ಒಳಗೊಂಡ ನೀತಿ ರೂಪಿಸುವುದು.
- ಕಾಡಂಚಿನ ಪ್ರದೇಶಗಳಲ್ಲಿ ವನ್ಯಜೀವಿಗಳ ಹಾವಳಿಯಿಂದ ಹೆಚ್ಚುತ್ತಿರುವ ಬೆಳೆ ನಷ್ಟ ಪ್ರಕರಣಗಳಲ್ಲಿ ತ್ವರಿತವಾಗಿ ಪರಿಹಾರ ನೀಡಲು ಅರಣ್ಯ ಇ-ಪರಿಹಾರ ಯೋಜನೆ ಅನುಷ್ಠಾನಗೊಳಿಸುವುದು.
- ರಾಜ್ಯದಲ್ಲಿರುವ ಅರಣ್ಯಗಳ ವಿಧ ಮತ್ತು ಸಾಂದ್ರತೆ ವಿವರಗಳನ್ನು ಆಧರಿಸಿ ಸ್ಯಾಟ್ಲೈಟ್ ಆಧರಿತ ನಕ್ಷೆಗಳನ್ನು ರೂಪಿಸುವುದು.
- ಮಹದಾಯಿ ನ್ಯಾಯಾಧೀಕರಣ ತೀರ್ಪಿನ ಅನ್ವಯ ರಾಜ್ಯದ ಕಳಸಾ-ಬಂಡೂರಿ ನಾಲಾ ತಿರುವು ಯೋಜನೆಗಳಿಗೆ ಹಂಚಿಕೆಯಾದ 1677 ಕೋಟಿ. ರೂ. ಮೊತ್ತದ ಯೋಜನಾ ವರದಿಗಳಿಗೆ ಬಜೆಟ್ನಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
- ಆಡಳಿತ ವ್ಯವಸ್ಥೆಯಲ್ಲಿ ದಕ್ಷತೆ ತರಲು ಎರಡನೇ ಆಡಳಿತ ಸುಧಾರಣಾ ಆಯೋಗ ರಚನೆ.
- ರಾಜ್ಯ ದತ್ತಾಂಶ ಕೇಂದ್ರ ಸೈಬರ್ ಸುರಕ್ಷತೆ ಬಲಪಡಿಸಲು ಎರಡು ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಭದ್ರತಾ ಕಾರ್ಯಾಚರಣೆ ಕೇಂದ್ರ ಸ್ಥಾಪನೆ.
- ವಿಪತ್ತು ಸಂದರ್ಭಗಳಲ್ಲಿ ಸರ್ಕಾರದ ದತ್ತಾಂಶ ಸಂರಕ್ಷಿಸಿ ಲಭ್ಯವಾಗುವಂತೆ ಮಾಡಲು 35 ಕೋಟಿ ರೂ. ವೆಚ್ಚದಲ್ಲಿ ರಾಜ್ಯ ದತ್ತಾಂಶ ಕೇಂದ್ರದ ವಿಪತ್ತು ಚೇತರಿಕೆ ಮತ್ತು ವ್ಯವಹಾರ ಮುಂದುವರಿಕೆ ತಾಣ ನಿರ್ಮಾಣ.