ಬೆಂಗಳೂರು: ಕೆಂಗೇರಿ ಮೆಟ್ರೋ ಮಾರ್ಗ ನಿರ್ಮಾಣ ಅಂತಿಮ ಹಂತ ತಲುಪಿದ ಹಿನ್ನೆಲೆ ಇನ್ನೇನು ಕೆಲವೇ ದಿನಗಳಲ್ಲಿ ಈ ಮಾರ್ಗವನ್ನ ಕೇಂದ್ರ ರೈಲ್ವೆ ಸುರಕ್ಷತಾ ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ. ಜುಲೈ ತಿಂಗಳಲ್ಲಿ ಕೆಂಗೇರಿ ಮೆಟ್ರೋ ಮಾರ್ಗಕ್ಕೆ ಗ್ರೀನ್ ಸಿಗ್ನಲ್ ಸಿಗುವ ಸಾಧ್ಯತೆಯಿದೆ. ಹೀಗಾಗಿ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಸಿಂಗ್ ಕೊನೆಯ ಹಂತದ ಸಿದ್ಧತೆಯನ್ನು ಪರಿಶೀಲನೆ ನಡೆಸಿದರು.
ಕಮರ್ಷಿಯಲ್ ಸ್ಪೇಸ್ ನಿರ್ಮಾಣ:
ವಿಶೇಷವೆಂದರೆ ಈ ನಿಲ್ದಾಣಗಳಲ್ಲಿ ಇನ್ಮುಂದೆ ಕಮರ್ಷಿಯಲ್ ಸ್ಪೇಸ್ ಸೃಷ್ಟಿ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಮೊದಲು ನಿಲ್ದಾಣಗಳಲ್ಲಿ ಹೋಟೆಲ್, ಬುಕ್ ಶಾಪ್‌ಗಳು ಇರಿಸಲಾಗುತ್ತಿತ್ತು. ಆದರೆ ಈಗ ನಿಗಮಕ್ಕೆ ನಾನ್ ಫೇರ್ ರೆವೆನ್ಯೂ ಹೆಚ್ಚಳ ಮಾಡಲು ಕಾಫಿ-ಟೀ ಶಾಪ್, ಹಾಲಿನ ಬೂತ್ ಇರಿಸಲು ಯೋಜಿಸಿದ್ದು, ಬಾಡಿಗೆ ನೀಡುವಂತೆ ಸೂಚನೆ ನೀಡಲಾಗಿದೆ. ನಿಲ್ದಾಣಗಳಲ್ಲಿರುವ ಖಾಲಿ ಜಾಗಗಳನ್ನ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಈ ಯೋಜನೆ ಮಾಡಲಾಗಿದೆ.
ಸದ್ಯಕ್ಕೆ ಈಗ ಸಿದ್ಧವಾಗುತ್ತಿರುವ ಕೆಂಗೇರಿ ನಿಲ್ದಾಣದಲ್ಲಿ ಇರುವ ಖಾಲಿ ಜಾಗವನ್ನ ಸರಿಯಾಗಿ ಬಳಸಿಕೊಳ್ಳುವಂತೆ ಅಧಿಕಾರಿಗಳಿಗೆ ರಾಕೇಶ್ ಸಿಂಗ್ ಸೂಚನೆ ನೀಡಿದ್ದಾರೆ. ಜತೆಗೆ ಇನ್ನುಳಿದ ಮೆಟ್ರೋ ನಿಲ್ದಾಣಗಳಲ್ಲಿರುವ ಖಾಲಿ ಜಾಗಗಳಲ್ಲಿ ಕಮರ್ಷಿಯಲ್ ಸ್ಪೇಸ್ ನಿರ್ಮಿಸಲು ಯೋಜನೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.