ಬೆಂಗಳೂರಿಗೆ: ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಸ್ಥಾನಗಳ ಮೀಸಲಾತಿ ಕೆಟಗರಿಯನ್ನು ಪ್ರಕಟಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಅದರಂತೆ ಬೆಂಗಳೂರು ಸೇರಿ 11 ನಗರ ಪಾಲಿಕೆಗಳ ಮೇಯರ್ ಹಾಗೂ ಉಪಮೇಯರ್ ಸ್ಥಾನಗಳ ಮೀಸಲಾತಿ ಕೆಟಗರಿಯನ್ನು ಪ್ರಕಟಿಸಿದೆ.
ಮೇಯರ್, ಉಪಮೇಯರ್ ಮೀಸಲಾತಿ:
ಬಳ್ಳಾರಿ ನಗರ ಪಾಲಿಕೆಯ ಮೇಯರ್ ಸ್ಥಾನ ಎಸ್ ಸಿ ವರ್ಗಕ್ಕೆ ಮೀಸಲಿರಿಸಲಾಗಿದ್ದರೆ, ಉಪಮೇಯರ್ ಸ್ಥಾನ ಎಸ್ ಟಿ ಮಹಿಳೆಗೆ ಮೀಸಲು ಮಾಡಲಾಗಿದೆ. ಬೆಳಗಾವಿ ನಗರ ಪಾಲಿಕೆಯ ಮೇಯರ್ ಸ್ಥಾನವನ್ನು ಎಸ್ ಸಿ ಮಹಿಳೆಗೆ ಮೀಸಲಿಟ್ಟರೆ, ಉಪಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ನಿಗದಿ ಮಾಡಲಾಗಿದೆ.
ಇತ್ತ ಬೆಂಗಳೂರ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಹುದ್ದೆಯನ್ನು ಸಾಮಾನ್ಯ ವರ್ಗಕ್ಕೆ ಮೀಸಲಿಡಲಾಗಿದೆ.
ಇನ್ನು ದಾವಣಗೆರೆ ನಗರ ಪಾಲಿಕೆಯ ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾದರೆ, ಉಪಮೇಯರ್ ಸ್ಥಾನ ಎಸ್ ಸಿ ಮಹಿಳೆಗೆ ಮೀಸಲಿಡಲಾಗಿದೆ. ಹುಬ್ಬಳ್ಳಿ-ಧಾರವಾಡ ನಗರ ಪಾಲಿಕೆಯ ಮೇಯರ್ ಸ್ಥಾನವನ್ನು ಸಾಮಾನ್ಯ ವರ್ಗದ ಮಹಿಳೆಗೆ ಮೀಸಲಿಟ್ಟರೆ, ಉಪಮೇಯರ್ ಸ್ಥಾನವನ್ನು ಸಾಮಾನ್ಯ ವರ್ಗಕ್ಕೆ ಕಾಯ್ದಿರಿಸಲಾಗಿದೆ.
ಕಲಬುರ್ಗಿ ನಗರ ಪಾಲಿಕೆಯ ಮೇಯರ್ ಸ್ಥಾನ ಎಸ್ ಟಿ, ಉಪಮೇಯರ್ ಸ್ಥಾನ ಹಿಂದುಳಿದ ವರ್ಗದ ಎ ಕ್ಲಾಸ್ ಗೆ ಮೀಸಲಿಡಲಾಗಿದೆ. ಮಂಗಳೂರು ನಗರ ಪಾಲಿಕೆಯ ಮೇಯರ್ ಸ್ಥಾನ ಸಾಮಾನ್ಯ ವರ್ಗ ಹಾಗೂ ಉಪಮೇಯರ್ ಸ್ಥಾನ ಸಾಮಾನ್ಯ ವರ್ಗ ಮಹಿಳೆಗೆ ಮೀಸಲಿಡಲಾಗಿದೆ.
ಮೈಸೂರು ನಗರ ಪಾಲಿಕೆಯ ಮೇಯರ್ ಸ್ಥಾನ ಹಿಂದುಳಿದ ವರ್ಗ ಎ ಪ್ರವರ್ಗದ ಮಹಿಳೆ ಮತ್ತು ಉಪಮೇಯರ್ ಸ್ಥಾನ ಎಸ್ ಸಿಗೆ ಮೀಸಲಿಡಲಾಗಿದೆ. ಶಿವಮೊಗ್ಗ ನಗರ ಪಾಲಿಕೆಯ ಮೇಯರ್ ಹಿಂದುಳಿದ ವರ್ಗ ಬಿ ಪ್ರವರ್ಗ ಮಹಿಳೆಗೆ ಮತ್ತು ಉಪಮೇಯರ್ ಸ್ಥಾನ ಸಾಮಾನ್ಯ ವರ್ಗದ ಮಹಿಳೆಗೆ ನಿಗದಿ ಮಾಡಲಾಗಿದೆ.
ತುಮಕೂರು ನಗರ ಪಾಲಿಕೆ ಮೇಯರ್ ಸ್ಥಾನ ಸಾಮಾನ್ಯ ವರ್ಗದ ಮಹಿಳೆ ಹಾಗೂ ಉಪಮೇಯರ್ ಸ್ಥಾನ ಹಿಂದುಳಿದ ವರ್ಗದ ಎ ಪ್ರವರ್ಗದ ಮಹಿಳೆಗೆ ಮೀಸಲಿಡಲಾಗಿದೆ. ಇನ್ನು ವಿಜಯಪುರ ನಗರ ಪಾಲಿಕೆಯ ಮೇಯರ್ ಸ್ಥಾನ ಹಿಂದುಳಿದ ವರ್ಗದ ಎ ಪ್ರವರ್ಗ ಮತ್ತು ಉಪಮೇಯರ್ ಸ್ಥಾನ ಸಾಮಾನ್ಯ ವರ್ಗದ ಮಹಿಳೆಗೆ ಕಾಯ್ದಿರಿಸಲಾಗಿದೆ.