ಬೆಂಗಳೂರು: ರಾಜ್ಯ ಸರ್ಕಾರದ ಇಲಾಖೆಗಳಲ್ಲಿ ಮತ್ತು ಅಂಗಸಂಸ್ಥೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಮಹಿಳಾ ನೌಕರರಿಗೆ ಮಾತೃತ್ವ (ಹೆರಿಗೆ) ರಜೆ ಸೌಲಭ್ಯವನ್ನು ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿದೆ. ಇದುವರೆಗೆ ಸರ್ಕಾರಿ ನೌಕರಿಯಿದ್ದ ಮಹಿಳೆಯರಿಗೆ ಮಾತ್ರ ಹೆರಿಗೆ ರಜೆಯ ಸೌಲಭ್ಯವನ್ನು ನೀಡಲಾಗುತಿತ್ತು.
ಏಪ್ರಿಲ್ನಿಂದ ಜಾರಿ: ಏಪ್ರಿಲ್ ತಿಂಗಳಿನಿಂದ ಜಾರಿಗೆ ಬರುವಂತೆ ಆದೇಶಿಸಲಾಗಿದೆ. ಮಾತೃತ್ವ ರಜೆಯನ್ನು ರಜೆಯ ಪ್ರಾರಂಭದ ದಿನಾಂಕದಿಂದ ಗರಿಷ್ಠ 180 ದಿನಗಳವರೆಗೆ ಮಂಜೂರು ಮಾಡಬಹುದಾಗಿದೆ. ಗರ್ಭಸ್ರಾವ ಅಥವಾ ಗರ್ಭಪಾತದಿಂದ ಗರ್ಭಧಾರಣೆಯ ಪರ್ಯಾವಸಾನಗೊಂಡ ಸಂದರ್ಭದಲ್ಲಿ ಮಾತೃತ್ವ ರಜೆಯು ಆರು ವಾರಗಳನ್ನು ಮೀರಬಾರದು. ಇಂತಹ ರಜೆಗಾಗಿ ಸಲ್ಲಿಸಿದ ಅರ್ಜಿಯು ನೋಂದಾಯಿತ ವೃತ್ತಿನಿರತ ವೈದ್ಯರಿಂದ ಪಡೆದ ಪ್ರಮಾಣ ಪತ್ರದಿಂದ ದೃಢೀಕರಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಆದೇಶದ ವಿವರ: ಮಾತೃತ್ವ ರಜೆಯ ಮೇಲೆ ತೆರಳುವ ನೌಕರರು ರಜೆಯ ನಿಕಟಪೂರ್ವದಲ್ಲಿ ಪಡೆಯುತ್ತಿದ್ದ ವೇತನಕ್ಕೆ ಸಮನಾದ ವೇತನವನ್ನು ರಜೆಯ ಅವಧಿಯಲ್ಲಿ ಪಡೆಯಲು ಅರ್ಹರಿರುತ್ತಾರೆ. ಎರಡು ಅಥವಾ ಹೆಚ್ಚು ಮಕ್ಕಳನ್ನು ಹೊಂದಿರುವ ಮಹಿಳಾ ಗುತ್ತಿಗೆ ನೌಕರರಿಗೆ ಈ ಮಾತೃತ್ವ ರಜೆಯನ್ನು ಮಂಜೂರು ಮಾಡತಕ್ಕದ್ದಲ್ಲ. ಮಾತೃತ್ವ ರಜೆಗಾಗಿ ಸಲ್ಲಿಸುವ ಅರ್ಜಿಯೊಂದಿಗೆ ಸಂಬಂಧಿತ ಗುತ್ತಿಗೆ ಮಹಿಳಾ ನೌಕರರು ಈ ಕುರಿತು ಸ್ವಯಂ-ಘೋಷಣೆಯನ್ನು ಮಾತೃತ್ವ ರಜೆಯನ್ನು ಮಂಜೂರು ಮಾಡುವ ಅಧಿಕಾರಿಗೆ ಸಲ್ಲಿಸಬೇಕು.
ಇದನ್ನೂ ಓದಿ: ರಾಜ್ಯದಲ್ಲಿ ಮುಂದುವರೆದ ಸಂಪುಟ ಸರ್ಕಸ್: ಸಚಿವ ಸಂಪುಟ ವಿಸ್ತರಣೆಗೆ ಕೂಡಿ ಬರದ ಮುಹೂರ್ತ
ಗುತ್ತಿಗೆ ಅವಧಿಯ ವೇಳೆ ಮಾತೃತ್ವ ರಜೆಯ ಮೇಲೆ ತೆರಳಿದಾಗ ಅವರ ಗುತ್ತಿಗೆ ಅವಧಿ ಮುಕ್ತಾಯವಾದರೆ ಅಲ್ಲಿಯವರೆ ಮಾತ್ರ ರಜೆ ಸೀಮಿತಗೊಂಡಿರುತ್ತದೆ. ಒಂದು ವೇಳೆ ಗುತ್ತಿಗೆ ಅವಧಿ ವಿಸ್ತರಿಸದರೆ ಆಗ ಗರಿಷ್ಠ 180 ದಿನಗಳ ಮಾತೃತ್ವ ರಜೆಯನ್ನು ಪಡೆಯಲು ಅರ್ಹರಿರುತ್ತಾರೆ.