ಬೆಂಗಳೂರು: ಗುಡ್ಡದ ಹಳ್ಳಿ ಬಳಿಯ ರೇಖಾ ಕೆಮಿಕಲ್ಸ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ ಸಂಭವಿಸಿರುವುದರಿಂದ ಸದ್ಯ ಒಂಬತ್ತಕ್ಕೂ ಅಧಿಕ ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ.
ಅವಘಡ ಸಂಭವಿಸಿರುವ ಫ್ಯಾಕ್ಟರಿ ಸ್ಯಾನಿಟೈಸರ್ ಹಾಗೂ ಟಿನ್ನರ್ ತಯಾರಿಕಾ ಕಂಪನಿಯಾಗಿದ್ದು, ಸ್ಥಳೀಯ ಮಟ್ಟದಲ್ಲಿ ಸ್ಯಾನಿಟೈಸರ್ ಹಾಗೂ ಪೈಂಟ್ ರಿಮೂವಲ್ ಕೆಮಿಕಲ್ ತಯಾರಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಏಕಾ ಏಕಿ ಬೆಂಕಿ ಹೊತ್ತಿದ ಪರಿಣಾಮ ಬ್ಲಾಸ್ಟ್ ಸದ್ದು ಹಾಗೂ ಕಪ್ಪು ಹೊಗೆ ನೋಡಿ ಸ್ಥಳೀಯರು ಭಯಭೀತರಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಅರ್ಧ ಕಿಲೋಮೀಟರ್ ದೂರದಿಂದಲೇ ಬ್ಯಾರಿಕೇಡ್ ಹಾಕಿ ಬಂದೋ ಬಸ್ತ್ ಮಾಡಿದ್ದಾರೆ.
ಈ ವೇಳೆ, ಮಾತು ಕೇಳದೇ ಬೇಜವಾಬ್ದಾರಿ ತೋರಿರುವ ಜನರಿಗೆ ಖಾಕಿ ಆ್ಯಂಗಲ್ನಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಸದ್ಯ ಬೆಂಕಿ ಕೆಮಿಕಲ್ ಫ್ಯಾಕ್ಟರಿ ಕಾಂಪೌಂಡ್ ಬಿಟ್ಟು 40 - 60 ಮೀಟರ್ ದೂರ ವ್ಯಾಪಿಸಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ 200 ಮೀಟರ್ ದೂರದ ವರೆಗೆ ಮನೆ ಖಾಲಿ ಮಾಡಿಸಲು ಪೊಲೀಸರು ಹಾಗೂ ಅಗ್ನಿ ಶಾಮಕ ದಳದವರು ಹರಸಾಹಸ ಪಟ್ಟಿದ್ದಾರೆ.
ಅಗ್ನಿ ಅವಘಡಕ್ಕೂ ಮುಂಚಿತವಾಗಿ ಒಂದು ಸಾವಿರ ಕ್ಯಾನ್ ಗಳಲ್ಲಿ ಕೆಮಿಕಲ್ ತುಂಬಿಡಲಾಗಿತ್ತು ಎಂದು ತಿಳಿದುಬಂದಿದೆ. ಫ್ಯಾಕ್ಟರಿಯಲ್ಲಿ ಬೆಂಕಿ ಕಂಡುಬಂದ ನಂತರ ಸುಮಾರು ನಾಲ್ಕು ಜನ ಹೊರಗಡೆ ಓಡಿ ಬಂದರು ಎಂದು ಸ್ಥಳೀಯರು ತಿಳಿಸಿದ್ದಾರೆ.
ನಿರಂತರವಾಗಿ ಸಿಲಿಂಡರ್ ಸ್ಫೋಟಗೊಳ್ಳುತ್ತಿರುವುದರಿಂದ ಅಗ್ನಿ ಶಾಮಕ ಸಿಬ್ಬಂದಿ ಕಂಗಾಲಾಗಿದ್ದಾರೆ. ಇದೀಗ ಕಂಪನಿ ಮಾಲೀಕ ನಾಪತ್ತೆಯಾಗಿದ್ದು, ಪೊಲೀಸರು ಬಲೆ ಬೀಸಿದ್ದಾರೆ.
ಬೆಂಕಿ ಅವಘಡಕ್ಕೆ ಫರ್ನಿಚರ್ ಅಂಗಡಿ ನಾಶ: ಅಗ್ನಿ ಅವಘಡದಿಂದ ಪ್ಯಾಕ್ಟರಿ ಪಕ್ಕದಲ್ಲಿದ್ದ ಫರ್ನಿಚರ್ ಅಂಗಡಿ ಸುಟ್ಟುಹೋಗಿದೆ. ಈ ಕುರಿತು ಮಾಲೀಕ ಮಣಿ ಪ್ರತಿಕ್ರಿಯಿಸಿದ್ದು, ಬೆಂಕಿ ಅವಘಡ ನಡೆದ ಸಂದರ್ಭದಲ್ಲಿ ನಾನು ಮನೆಯಲ್ಲೇ ಇರಲಿಲ್ಲ. ನನ್ನ ಮಗಳ ಮದುವೆಯ ಸಂಬಂಧ ಹೊರಗಡೆ ಹೋಗಿದ್ದೆ. ದುರಂತದಿಂದ ನಮಗೆ ಸಾಕಷ್ಟು ನಷ್ಟ ಸಂಭವಿಸಿದೆ. ಸುಮಾರು 300 ಚೇರ್ ಸೇರಿದಂತೆ ಹಲವು ರೀತಿಯ ಪಿಠೋಪಕರಣ ದ್ವಂಸವಾಗಿದೆ. ನಾಳೆ ನನ್ನ ಮಗಳಿಗೆ ಇದನ್ನು ಹೇಗೆ ಹೇಳೋದು ಅಂತಾ ಬೇಸರ ವ್ಯಕ್ತಪಡಿಸಿದ್ದಾರೆ. ನಗರ ಪಶ್ಚಿಮ ವಿಭಾಗದ ಹೆಚ್ಚುವರಿ ಆಯುಕ್ತ ಸೌಮೇಂದ್ರ ಮುಖರ್ಜಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.