ಬೆಂಗಳೂರು: ವಿಧಾನಪರಿಷತ್ನಲ್ಲಿ ಇಂದು ಬೆಳಗಿನ ಅರ್ಧ ಅವಧಿ ಪ್ರಶ್ನೋತ್ತರ ಅವಧಿಗೆ ಸೀಮಿತವಾಯಿತು. ಜೆಡಿಎಸ್ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರು ವಿವಿಧ ವಿಚಾರಗಳ ಮೇಲೆ, ತುರ್ತು ಮತ್ತು ಅತ್ಯಂತ ಅವಶ್ಯ ಸಂಗತಿಗಳ ಮೇಲೆ ಪ್ರಶ್ನೆಗಳನ್ನು ಕೇಳಿದ್ದರಿಂದ, ಸುದೀರ್ಘ ಚರ್ಚೆ ನಡೆಯಿತು.
ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ, ಜಗದೀಶ್ ಶೆಟ್ಟರ್, ಬೈರತಿ ಬಸವರಾಜ್, ಎಂಟಿಬಿ ನಾಗರಾಜ್, ಉಮೇಶ್ ಕತ್ತಿ, ಎಸ್.ಟಿ.ಸೋಮಶೇಖರ್ ಸೇರಿದಂತೆ ಹಲವು ಸಚಿವರು ಪರಿಷತ್ನಲ್ಲಿ ಉಪಸ್ಥಿತರಿದ್ದು, ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದರು.
ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್ ಸದಸ್ಯ ರಮೇಶ್ ಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಿಜವಾದ ಸಮಸ್ಯೆ ಅರಿವಿದೆ. ಸರ್ಕಾರ 100 ಕೋಟಿ ಮೀಸಲಿಟ್ಟಿದೆ. ಕೊರೊನಾ ತರ ಸಮಸ್ಯೆ ಎದುರಾಗಿರುವುದು ಅರಿವಿದೆ, ಪರಿಹರಿಸುತ್ತೇವೆ ಎಂದರು.
ಬಜೆಟ್ ಅನುದಾನ ಶೇ.75 ರಷ್ಟಾದರೂ ಬಳಕೆ ಆಗಬೇಕು ಎಂದು ಕೋರುತ್ತೇನೆ. ಕಳೆದ ಸಾರಿ ಬಜೆಟ್ ನಲ್ಲಿ ನೀಡಿದ ಅನುದಾನ ಬಳಕೆ ಆಗಿಲ್ಲ. ಈ ಬಾರಿಯಾದರೂ ನೀಡಿಕೆ ಆಗಲಿ ಎಂದು ರಮೇಶ್ ತಿಳಿಸಿದರು. ಇದಕ್ಕೆ ಸಚಿವರು ಸಮ್ಮತಿ ನೀಡಿದರು.
ಕಾಂಗ್ರೆಸ್ ಸದಸ್ಯ ಪಿ.ಆರ್. ರಮೇಶ್ ಅವರು ಆಹಾರ ಸಚಿವ ಉಮೇಶ್ ಕತ್ತಿ ಅವರಿಗೆ ಪಡಿತರ ಚೀಟಿ ಸಂಬಂಧಿಸಿದ ಪ್ರಶ್ನೆಗೆ ಸೂಕ್ತ ಉತ್ತರ ನೀಡಿದ್ದಾಗಿ ತಿಳಿಸಿದರು. ಸದಸ್ಯ ರಮೇಶ್ ತಮಗೆ ಉತ್ತರ ಸಮಾಧಾನ ತಂದಿಲ್ಲ ಎಂದರು. ಇಲಾಖೆಯಲ್ಲಿ ಸಾಕಷ್ಟು ಸುಧಾರಣೆ ತರುವ ಯತ್ನ ಮಾಡುತ್ತಿದ್ದೇವೆ. ಎಲ್ಲರ ಸಲಹೆ ಸ್ವೀಕರಿಸಿ ಬದಲಾವಣೆ ತರುತ್ತೇವೆ. ನಾನು ಸಚಿವನಾದ ಮೇಲೆ ಮೂರ್ನಾಲ್ಕು ಸಭೆ ಮಾಡಿದ್ದೇನೆ. ಆಹಾರ ಖಾತ್ರಿ ಯೋಜನೆಯಡಿ ಕೈಗೊಳ್ಳಬಹುದಾದ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ಇತ್ತರು.
ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ಗೆ ಸದಸ್ಯ ಅಪ್ಪಾಜಿಗೌಡರು ಕೇಳಿದ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959 ರ ಅಡಿ ನೀಡಿದ ಉತ್ತರ ವಿಸ್ತ್ರತವಾದ ಉತ್ತರದ ಮೇಲೆ ಅರ್ಧ ಗಂಟೆ ಚರ್ಚೆಗೆ ಅವಕಾಶ ನೀಡುವಂತೆ ಸದಸ್ಯರು ಮನವಿ ಮಾಡಿದರು. ಸಚಿವ ಸೋಮಶೇಖರ್ ಮಾತನಾಡಿ, ಒಬ್ಬ ಸದಸ್ಯರ ಬಗ್ಗೆ ಮಾಹಿತಿ ಕೇಳಿದ್ದರು. ನಾವು ಅದಕ್ಕೆ ಸುದೀರ್ಘ ಉತ್ತರ ನೀಡಿದ್ದೇವೆ. ರಂಗನಾಥ್ ಎಂಬುವರ ಮಾಹಿತಿ ಒದಗಿಸಿದ್ದು, ಅರ್ಧ ಗಂಟೆ ಚರ್ಚೆ ಆಗುವ ಅಗತ್ಯವಿಲ್ಲ ಎಂದರು. ಆದರೆ, ಇದು ಗಂಭೀರ ವಿಚಾರವಾಗಿರುವ ಹಿನ್ನೆಲೆ ನಿವೇಶನ ವಿಚಾರವಾಗಿ ರಂಗನಾಥ್ ನಿರಾಶರಾಗಿ ಖಿನ್ನತೆಗೆ ಒಳಗಾಗಿದ್ದಾರೆ. ಇದಕ್ಕೆ ಸಚಿವರು ಕ್ರಮ ಕೈಗೊಳ್ಳಬೇಕು ಎಂದರು. ರಂಗನಾಥ್ಗೆ ಮಂಜೂರಾಗಿದ್ದ ನಿವೇಶನ ಸಿದ್ದಾರೆಡ್ಡಿಗೆ ನೀಡಲಾಗಿದೆ. ಇದರ ಮಧ್ಯೆ ಹೈಕೋರ್ಟ್ ಮಧ್ಯಪ್ರವೇಶ ಮಾಡಿದ್ದರಿಂದ ವಿಳಂಬವಾಗಿದೆ. ಹೈಕೋರ್ಟ್ ತಡೆಯಾಜ್ಞೆ ತೆರವುಗೊಳಿಸಿ ರಂಗನಾಥ್ಗೆ ನಿವೇಶನ ಕೊಡಿಸುತ್ತೇವೆ ಎಂದು ಭರವಸೆ ನೀಡಿದರು.
ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆ ಕಳಪೆ ಗುಣಮಟ್ಟದ್ದಾಗಿದೆ ಎಂಬ ಚರ್ಚೆ ಪರಿಷತ್ನಲ್ಲಿ ನಡೆಯಿತು. ಬಿಜೆಪಿ ಸದಸ್ಯ ಮಹಾಂತೇಶ್ ಕವಟಗಿಮಠ ವಿಷಯ ಪ್ರಸ್ತಾಪಿಸಿ, ಇಲ್ಲಿನ ಕಾಮಗಾರಿ ಕಳಪೆ ಆಗಿರುವ ವಿಷಯ ಪ್ರಸ್ತಾಪವಾಗಿದೆ. ಅವರ ಜತೆ ಸಮಾಲೋಚಿಸಿ ಕಾಮಗಾರಿ ಗುಣಮಟ್ಟ ಹೆಚ್ಚಿಸುತ್ತೇವೆ. ಕಮಾಂಡ್ ಸೆಂಟರ್ ಇದುವರೆಗೂ ಉತ್ತಮವಾಗಿತ್ತು. ಈಗೇನಾಗಿದೆ ಗಮನಿಸುತ್ತೇನೆ ಎಂದು ಸಚಿವ ಬೈರತಿ ಬಸವರಾಜ್ ಭರವಸೆ ನೀಡಿದರು.
ಅನ್ನ ಭಾಗ್ಯ ಯೋಜನೆ ಅಕ್ರಮ ವಿಚಾರ ಪ್ರಸ್ತಾಪಿಸಿದ ಕಾಂಗ್ರೆಸ್ ಸದಸ್ಯ ಬಿ.ಕೆ.ಹರಿಪ್ರಸಾದ್ ಪ್ರಶ್ನೆಗೆ ಸಚಿವರು ಉತ್ತರ ನೀಡಿದ್ದು ಅದು ಅರ್ಧ ಮಾತ್ರ ಸತ್ಯ ಇದೆ ಎಂದು ಹರಿಪ್ರಸಾದ್ ಅಭಿಪ್ರಾಯ ಪಟ್ಟರು. ಈಗಾಗಲೇ ಅಕ್ಕಿ ನೀಡಿಕೆ ಪ್ರಮಾಣ ಕಡಿಮೆ ಆಗಿದೆ. ಈ ಮಧ್ಯೆ ಅಕ್ರಮವಾಗಿದೆ. ಬಡವರು ಬದುಕುವುದು ಹೇಗೆ? ಸಚಿವರು ಉತ್ತರ ನೀಡಬೇಕು ಎಂದರು.
ಉತ್ತರ ನೀಡಿದ ಸಚಿವ ಉಮೇಶ್ ಕತ್ತಿ, ಸರ್ಕಾರಿ ನೌಕರರು ಬಿಪಿಎಲ್ ಕಾರ್ಡ್ ಪಡೆದಿದ್ದರು. ಇದನ್ನು ರದ್ದುಪಡಿಸಿದ್ದೇವೆ. ಅರ್ಹರಿಗೆ ಸಮಸ್ಯೆ ಆಗಲ್ಲ. ಇನ್ನಷ್ಟು ಪಡಿತರ ವಿತರಿಸಲು ಸಿದ್ಧ. ಅನರ್ಹರು ಪಡೆದಿದ್ದರೆ ಇನ್ನಷ್ಟು ಕಡಿತ ಮಾಡುತ್ತೇವೆ ಎಂದು ತಿಳಿಸಿದರು.
ಕೊರೊನಾ ಸಮಯದಲ್ಲಿ ಅಕ್ಕಿ ಕಡಿತ ಮಾಡಿದ ತುಘಲಕ್ ಸರ್ಕಾರ ಇದು. ಇಲ್ಲಿ ದೊಡ್ಡ ಮಟ್ಟದ ಅಕ್ರಮವಾಗಿದೆ. ಇದರಕೂಲಂಕಷ ತನಿಖೆ ಆಗಬೇಕು ಎಂದು ಒತ್ತಾಯಿಸಿದರು. 63 ಲಕ್ಷ ಕ್ವಿಂಟಾಲ್ ದಾಸ್ತಾನು ವಶಪಡಿಸಿಕೊಂಡಿದ್ದೇವೆ. ಅಧಿಕಾರಿಗಳು, ತಪ್ಪಿತಸ್ತರಿಗೆ ಶಿಕ್ಷೆ ಆಗಬೇಕು. ಅರ್ಧ ಗಂಟೆ ಚರ್ಚೆಗೆ ಅವಕಾಶ ಕೊಡಿ ಎಂದು ಕೋರಿದರು. ಬರೆದುಕೊಡುವಂತೆ ಸಭಾಪತಿ ಸೂಚಿಸಿದರು.ಸದಸ್ಯರಾದ ಮರಿತಿಬ್ಬೇಗೌಡ, ಎಸ್.ವಿ.ಸಂಕನೂರು, ಸುನೀಲ್ ಕುಮಾರ್, ಶ್ರೀಕಂಠೇಗೌಡ, ಪ್ರಕಾಶ್ ರಾಥೋಡ್, ಮತ್ತಿತರರು ಕೇಳಿದ ಪ್ರಶ್ನೆಗೆ ಸದನದಲ್ಲಿ ಸಚಿವರು ಉತ್ತರ ನೀಡಿದರು.