ಬೆಂಗಳೂರು: ಬಿಬಿಎಂಪಿ ಆಯುಕ್ತ ಬಿ.ಹೆಚ್. ಅನಿಲ್ ಕುಮಾರ್ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ನೂತನ ಬಿಬಿಎಂಪಿ ಆಯುಕ್ತರಾಗಿ ಕಂದಾಯ ಇಲಾಖೆಯ ಮುಖ್ಯ ಕಾರ್ಯದರ್ಶಿಯಾಗಿದ್ದ, ಈ ಹಿಂದೆಯೂ ಬಿಬಿಎಂಪಿಗೆ ಆಯುಕ್ತರಾಗಿದ್ದ ಮಂಜುನಾಥ್ ಪ್ರಸಾದ್ ಅವರನ್ನು ನೇಮಿಸಲಾಗಿದೆ.

ಬಿ. ಹೆಚ್. ಅನಿಲ್ ಕುಮಾರ್ ಅವರು ಸಾರ್ವಜನಿಕ ಉದ್ಯಮಗಳ ಇಲಾಖೆಗೆ ಮತ್ತು ಸರ್ಕಾರಕ್ಕೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ವರ್ಗಾವಣೆಯಾಗಿದ್ದಾರೆ.
ಬೆಂಗಳೂರು ನಗರದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಮೂವತ್ತು ಸಾವಿರ ದಾಟುತ್ತಿದೆ. ರ‍್ಯಾಂಡಮ್ ಟೆಸ್ಟ್ ಸರಿಯಾಗಿ ನಡೆಯುತ್ತಿಲ್ಲ. ಕೋವಿಡ್ ಕೇರ್ ಸೆಂಟರ್ಗಳ ನಿರ್ವಹಣೆಯಲ್ಲೂ ಅನಿಲ್ ಕುಮಾರ್ ಎಡವಿದ್ದರು ಎಂಬ ಆರೋಪ ಇವರ ಮೇಲಿತ್ತು. ಬಿಐಇಸಿ ಕೋವಿಡ್ ಕೇರ್ ಸೆಂಟರ್ ನಿರ್ವಹಣೆ, ಬೆಡ್ ಖರೀದಿ ವಿಚಾರದಲ್ಲೂ ಆರೋಪ ಕೇಳಿಬಂದಿತ್ತು. ಕೋವಿಡ್ ತುರ್ತು ಪರಿಸ್ಥಿತಿಯನ್ನು ಬಿಬಿಎಂಪಿ ನಿಭಾಯಿಸಿದ ರೀತಿ ನೋಡಿ ಮುಖ್ಯಮಂತ್ರಿಗಳೂ ಅಸಾಮಾಧಾನಗೊಂಡಿದ್ದರು ಎನ್ನಲಾಗಿದೆ. ಹೀಗಾಗಿ ಅನಿಲ್ ಕುಮಾರ್ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಇಂದಿನಿಂದಲೇ ಜಾರಿಗೆ ಬರುವಂತೆ ಮಂಜುನಾಥ್ ಪ್ರಸಾದ್ ಅವರನ್ನು ಬಿಬಿಎಂಪಿಯ ನೂತನ ಆಯುಕ್ತರಾಗಿ ನೇಮಿಕ ಮಾಡಲಾಗಿದ್ದು, ಸರ್ಕಾರದ ಈ ಕ್ರಮ ಭಾರೀ ಕುತೂಹಲಕ್ಕೆ ಕಾರಣವಾಗಿದೆ.