ಬೆಂಗಳೂರು: ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಅನುಮಾನದ ಹಿನ್ನೆಲೆಯಲ್ಲಿ ಸಿಸಿಬಿಯ ರೌಡಿ ನಿಗ್ರಹದಳದ ಅಧಿಕಾರಿಗಳ ಸೂಚನೆಯ ಮೇರೆಗೆ ಆರೋಪಿಯನ್ನು ಹಿಡಿಯಲು ಹೋಗಿದ್ದ ಪೊಲೀಸ್ ಹೆಡ್ಕಾನ್ಸ್ಟೆಬಲ್ಗೆ ಆರೋಪಿ ಚಾಕುವಿನಿಂದ ಇರಿದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸೈಯ್ಯದ್ ಸಮೀವುಲ್ಲಾ ಖಾನ್ ಎಂಬವರು ಹಲ್ಲೆಗೊಳಗಾದ ಸದಾಶಿವನಗರ ಪೊಲೀಸ್ ಠಾಣೆಯ ಹೆಡ್ಕಾನ್ಸ್ಟೆಬಲ್. ಸೈಯ್ಯದ್ ಸಮೀವುಲ್ಲಾ ನೀಡಿದ ದೂರಿನ ಮೇರೆಗೆ ಆರೋಪಿ ಹಸನ್ ಖಾನ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಜೈಲಿಗಟ್ಟಲಾಗಿದೆ.
ಭಾರತೀನಗರ, ಡಿ.ಜೆ.ಹಳ್ಳಿ ಸೇರಿ ವಿವಿಧ ಪೊಲೀಸ್ ಠಾಣೆಗಳಲ್ಲಿ ಡಕಾಯಿತಿ, ಕೊಲೆಯತ್ನ ಸೇರಿ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿ, ಜೈಲಿಗೆ ಹೋಗಿದ್ದ. ಜಾಮೀನು ಪಡೆದು ಹೊರಬಂದು ಸ್ಥಳೀಯ ಭೂ ವ್ಯಾಜ್ಯಗಳಲ್ಲಿ ಭಾಗಿಯಾಗುತ್ತಿದ್ದ. ಇದೇ ತಿಂಗಳು 12ರಂದು ಸಿಸಿಬಿಯ ರೌಡಿ ನಿಗ್ರಹದಳದ (ಪೂರ್ವ) ಎಸಿಪಿ ಪುಟ್ಟಸ್ವಾಮಿಗೌಡ ನೇತೃತ್ವದ ತಂಡ ಪ್ರಕರಣವೊಂದರಲ್ಲಿ ಹಸನ್ ಎಂಬಾತ ಬೇಕಾಗಿದ್ದು, ಈತ ಶಿವಾಜಿನಗರ ಬಳಿ ಇರುವ ಮಾಹಿತಿ ತಿಳಿದಿತ್ತು.
ಸ್ಥಳೀಯ ನಿವಾಸಿಯಾಗಿದ್ದ ಸದಾಶಿವನಗರ ಪೊಲೀಸ್ ಠಾಣೆಯ ಹೆಡ್ಕಾನ್ಸ್ಟೆಬಲ್ ಸಮೀವುಲ್ಲಾ ಎಂಬವರಿಗೆ ಕರೆ ಮಾಡಿದ ಸಿಸಿಬಿ ಅಧಿಕಾರಿಗಳು ಹಸನ್ ಎಂಬಾತ ಪ್ರಕರಣವೊಂದರ ಆರೋಪಿಯಾಗಿದ್ದು, ಆತ ಶಿವಾಜಿನಗರ ಬಳಿ ಅವಿತಿದ್ದಾನೆ. ನಾವು ಸ್ಥಳಕ್ಕೆ ಬರುವುದು ತಡವಾಗಲಿದ್ದು, ಆರೋಪಿಯನ್ನು ಹಿಡಿಯುವಂತೆ ಸೂಚಿಸಿದ್ದರು. ಇದರಂತೆ ಹೆಡ್ಕಾನ್ಸ್ಟೆಬಲ್ ಸ್ಥಳಕ್ಕೆ ಹೋಗಿ ಆರೋಪಿಯನ್ನು ಪ್ರಶ್ನಿಸಿದ್ದರು. ಮಾತನಾಡುತ್ತಿರುವಾಗಲೇ ಆರೋಪಿ ಏಕಾಏಕಿ ತನ್ನ ಬಳಿಯಿದ್ದ ಚಾಕುವಿನಿಂದ ಹೆಡ್ಕಾನ್ಸ್ಟೆಬಲ್ ಕೈಗೆ ಇರಿದಿದ್ದಾನೆ. ನಂತರ ಆರೋಪಿಯನ್ನು ಸ್ಥಳೀಯರ ಸಹಾಯದಿಂದ ಹಿಡಿದು ಸಿಸಿಬಿಗೆ ಒಪ್ಪಿಸಲಾಗಿತ್ತು.
ಆರೋಪಿಯನ್ನು ವಶಕ್ಕೆ ಪಡೆದ ಸಿಸಿಬಿ ಅಧಿಕಾರಿಗಳು ವಿಚಾರಣೆ ನಡೆಸಿದಾಗ ತಾವು ಹುಡುಕುತ್ತಿರುವ ಆರೋಪಿ ಈತನಲ್ಲ ಎಂಬುದು ಗೊತ್ತಾಗಿದೆ. ಹೆಡ್ ಕಾನ್‌ಸ್ಟೆಬಲ್ ಮೇಲೆ ಹಲ್ಲೆ ಮಾಡಿದ ಹಿನ್ನೆಲೆಯಲ್ಲಿ ಆರೋಪಿಯನ್ನು ಶಿವಾಜಿನಗರ ಪೊಲೀಸರ ವಶಕ್ಕೆ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಇದನ್ನೂ ಓದಿ: ಕರ್ತವ್ಯನಿರತ ಮಹಿಳಾ ಪಿಎಸ್ಐ ಮೇಲೆ ದರ್ಪ ತೋರಿದ ಆರೋಪಿ ಬಂಧನ
ಈ ಹಿಂದಿನ ಘಟನೆ (ಮಂಡ್ಯ): ಬ್ಯಾಂಕ್ ದರೋಡೆ ಬಂದಿದ್ದ ಗುಂಪನ್ನು ತಡೆಯಲು ಯತ್ನಿಸಿದ್ದ ಸೆಕ್ಯೂರಿಟಿ ಗಾರ್ಡ್ಗೆ ಚಾಕುವಿನಿಂದ ಇರಿದು ದರೋಡೆಕೋರರು ಪರಾರಿಯಾಗಿದ್ದ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಹರಿಹರಪುರ ಗ್ರಾಮದಲ್ಲಿ ಕಳೆದ ಭಾನುವಾರ ನಡೆದಿತ್ತು. ಸೆಕ್ಯೂರಿಟಿ ಗಾರ್ಡ್ ಮನು ಗಾಯಗೊಂಡಿದ್ದರು. ಇವರು ಡಿಸಿಸಿ ಬ್ಯಾಂಕ್ ಹಾಗೂ ವಿ.ಎಸ್.ಎಸ್.ಎನ್ ನೌಕರ ಎಂದು ತಿಳಿದು ಬಂದಿತ್ತು. ಹರಿಹರಪುರ ಗ್ರಾಮದಲ್ಲಿರುವ ಡಿಸಿಸಿ ಬ್ಯಾಂಕ್ ಶಾಖೆಗೆ ಮುಸುಕುದಾರಿಗಳಾಗಿದ್ದ ಮೂವರು ದರೋಡೆಕೋರರು ನುಗ್ಗಲು ಯತ್ನಿಸಿದ್ದರು. ಕರ್ತವ್ಯನಿರತನಾಗಿದ್ದ ಸೆಕ್ಯೂರಿಟಿ ಗಾರ್ಡ್ ದರೋಡೆಕೋರರನ್ನು ತಡೆದು ಕಿರುಚಿದ್ದರು. ಇದರಿಂದ ವಿಚಲಿತರಾದ ದರೋಡೆಕೋರರು ಬ್ಯಾಂಕ್ ಬೀಗ ಒಡೆಯಲು ಸಾಧ್ಯವಾಗದೇ ಇದ್ದಾಗ ಮನು ಹೊಟ್ಟೆಯ ಭಾಗಕ್ಕೆ ಇರಿದು ಕೊಲೆಗೆ ಯತ್ನಿಸಿದ್ದರು. ಬಳಿಕ ಸಾರ್ವಜನಿಕರು ಜಮಾಯಿಸುತ್ತಿರುವುದನ್ನು ಅರಿತು ಸ್ಥಳದಿಂದ ಪರಾರಿಯಾಗಿದ್ದರು.