ಬೆಂಗಳೂರು: ಕಾಂಗ್ರೆಸ್ ಪಕ್ಷದೊಂದಿಗೆ ಸುದೀರ್ಘ ಬಾಂಧವ್ಯ ಹೊಂದಿರುವ ಮಾಜಿ ಸಚಿವ ಎ.ಬಿ. ಮಾಲಕರೆಡ್ಡಿ ಮರಳಿ ಗೂಡಿನತ್ತ ಮುಖ ಮಾಡಿದ್ದಾರೆ. ಕಲಬುರುಗಿ ಜಿಲ್ಲೆಯಲ್ಲಿ ಸುದೀರ್ಘ ಅವಧಿ ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದ ಮಾಲಕರೆಡ್ಡಿ ಜಿಲ್ಲೆಯ ದೊಡ್ಡ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅತ್ಯಂತ ನಿಷ್ಠರಾಗಿ ಬೆಳೆದುಬಂದಿದ್ದರು. ಆದರೆ, ಕಳೆದ ಲೋಕಸಭೆ ಚುನಾವಣೆ ವೇಳೆ ಇವರು ಮಾಲೀಕಯ್ಯ ಗುತ್ತೇದಾರ್, ಬಾಬುರಾವ್ ಚಿಂಚನ್ಸೂರ್ ಜತೆ ಕೈಜೋಡಿಸಿ ಬಿಜೆಪಿಗೆ ಬಂದಿದ್ದರು. ಇದರಿಂದ ಮಲ್ಲಿಕಾರ್ಜುನ ಖರ್ಗೆ ಲೋಕಸಭಾ ಚುನಾವಣೆಯಲ್ಲಿ ಸೋಲನುಭವಿಸಿದ್ದರು.
ಈಗಾಗಲೇ ಬಾಬುರಾವ್ ಚಿಂಚನ್ಸೂರ್ ಕಾಂಗ್ರೆಸ್ ಸೇರಿ ಆಗಿದೆ. ಇದೀಗ ಮಾಲಕರೆಡ್ಡಿ ಸಹ ಬಿಜೆಪಿ ಬಿಟ್ಟು ಕಾಂಗ್ರೆಸ್ ಪಕ್ಷದತ್ತ ಒಲವು ತೋರುತ್ತಿದ್ದಾರೆ. ಈಗಾಗಲೇ ಈ ಸಂಬಂಧ ನಿನ್ನೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ರನ್ನು ಅವರು ಭೇಟಿಯಾಗಿ ಸಮಾಲೋಚಿಸಿದ್ದಾರೆ. ಆದ್ರೆ ಬೆಂಗಳೂರಲ್ಲಿದ್ದರೂ ಮಲ್ಲಿಕಾರ್ಜುನ್ ಖರ್ಗೆಯವರನ್ನು ಭೇಟಿಯಾಗಿಲ್ಲ. ಒಟ್ಟಾರೆ ಸಾಕಷ್ಟು ದೊಡ್ಡ ಮಟ್ಟದ ಬೆಳವಣಿಗೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಆಗುತ್ತಿದೆ.
ಖರ್ಗೆ ಭೇಟಿ ಮಾಡಿದ ಡಿಕೆಶಿ: ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಈ ಹಿಂದೆ ಖರ್ಗೆ ಅವರ ಆಪ್ತರಾಗಿ, ಬಳಿಕ ಬಿಜೆಪಿ ಸೇರಿದ್ದ ಬಾಬುರಾವ್ ಚಿಂಚನ್ಸೂರ್ ಹಾಗೂ ಎ.ಬಿ. ಮಾಲಕರೆಡ್ಡಿ ಮರು ಪಕ್ಷ ಸೇರ್ಪಡೆ ವಿಚಾರವನ್ನೂ ಪ್ರಸ್ತಾಪಿಸಿದ್ದಾರೆ. ಮುಂಬರುವ ದಿನಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪಕ್ಷವನ್ನು ಇನ್ನಷ್ಟು ಬಲಪಡಿಸಲು ಹಿರಿಯರ ವಾಪಸಾತಿ ಅತ್ಯಂತ ಅನಿವಾರ್ಯ. ಈ ನಿಟ್ಟಿನಲ್ಲಿ ನಾವು ನಿರ್ಧಾರ ಕೈಗೊಂಡಿದ್ದು, ತಾವು ಸಮ್ಮತಿಸಬೇಕೆಂದು ಡಿಕೆಶಿ ಮನವಿ ಮಾಡಿದ್ದಾರೆ. ರಾಷ್ಟ್ರೀಯ ಅಧ್ಯಕ್ಷರಾಗಿರುವ ಹಿನ್ನೆಲೆ ಈ ಭಾಗದಲ್ಲಿ ಪಕ್ಷ ಇನ್ನಷ್ಟು ಬಲಗೊಂಡಿದೆ ಎಂಬುದಕ್ಕೆ ಇವರ ಆಗಮನ ಅತ್ಯವಶ್ಯ. ತಾವು ಸಹ ಇದಕ್ಕೆ ಸಮ್ಮತಿ ನೀಡಬೇಕೆಂದು ಕೋರಿದ್ದಾರೆ.
ಮಗಳಿಗೆ ಟಿಕೆಟ್ ಬಯಸಿದ ಮಾಲಕರೆಡ್ಡಿ: ತಮ್ಮ ಪುತ್ರಿಯನ್ನು ಕಾಂಗ್ರೆಸ್ನಿಂದ ಸ್ಪರ್ಧೆಗಿಳಿಸಲು ಮುಂದಾಗಿರುವ ಮಾಲಕರೆಡ್ಡಿ, ಇದೇ ವಿಚಾರವಾಗಿ ಚರ್ಚಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ನಿನ್ನೆ ಭೇಟಿ ಆಗಿದ್ದರು ಎಂದು ತಿಳಿದುಬಂದಿದೆ. ಕಾಂಗ್ರೆಸ್ನಿಂದ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಮಾಲಕರೆಡ್ಡಿ ಅವರು ತಮ್ಮ ಸೇರ್ಪಡೆಗೆ ಮಲ್ಲಿಕಾರ್ಜುನ ಖರ್ಗೆ ಅವರ ಸಮ್ಮತಿ ಸಹ ಪಡೆದಿದ್ದಾರೆ. ಪುತ್ರಿ ಅನುರಾಗಗೆ ಯಾದಗಿರಿ ಮತಕ್ಷೇತ್ರದ ಟಿಕೆಟ್ಗಾಗಿ ಅರ್ಜಿ ಸಲ್ಲಿಸಿದ್ದರು. ಅನುರಾಗ ಮಾಲಕರೆಡ್ಡಿ ಹೆಸರಲ್ಲಿ ಟಿಕೆಟ್ ಬಯಸಿ ಅರ್ಜಿ ಹಾಕಿದ್ರು. ಟಿಕೆಟ್ ಸಿಗುವ ಸಾಧ್ಯತೆ ಹಿನ್ನೆಲೆ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ ಎಂಬ ಮಾಹಿತಿ ಇದೆ. ಒಟ್ಟಾರೆ ಕಾಂಗ್ರೆಸ್ ಪಕ್ಷದಿಂದ ದೂರವಾಗಿದ್ದ ಹಿರಿಯರು ಬೇರೆ ಪಕ್ಷದಲ್ಲಿ ಹೆಚ್ಚು ಸಮಯ ಉಳಿಯಲಾಗದೇ ಗೂಡಿಗೆ ಮರಳುತ್ತಿದ್ದಾರೆ. ಇವರನ್ನು ಪಕ್ಷ ಸಹ ಬರಮಾಡಿಕೊಳ್ಳುತ್ತಿದೆ.
ಇದನ್ನೂ ಓದಿ: ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಕಸರತ್ತು: ಒಟ್ಟು 20 ಜಿಲ್ಲೆಗಳ ಕೋರ್ ಕಮಿಟಿ ಸದಸ್ಯರ ಅಭಿಪ್ರಾಯ ಸಂಗ್ರಹ