ಬೆಂಗಳೂರು: ಬೆಂಗಳೂರಿನ 28 ಕ್ಷೇತ್ರಗಳ ಪೈಕಿ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರವೂ ಒಂದು. ಕ್ಷೇತ್ರ ಮರು ವಿಂಗಡಣೆಯಾದ ನಂತರ 2008 ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಬೀಗಿತ್ತು. ನೆ.ಲ.ನರೇಂದ್ರ ಬಾಬು ಅವರು ಬಿಜೆಪಿಯನ್ನು ಸೋಲಿಸಿದ್ದರು. ಅಂದಿನಿಂದಲೂ ಈ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲು ಸಾಧ್ಯವಾಗಿರಲಿಲ್ಲ.
2019ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನವಾದಾಗ ಅಚ್ಚರಿ ಹೆಸರೆಂಬಂತೆ ಕೆ.ಗೋಪಾಲಯ್ಯ ಕೂಡ ಕಾಂಗ್ರೆಸ್ನ ಅತೃಪ್ತ ಶಾಸಕರ ಜೊತೆ ಸೇರಿಕೊಂಡರು. ಬಳಿಕ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ತಮ್ಮ ಗೆಲುವಿನ ಅಂತರವನ್ನು 54 ಸಾವಿರಕ್ಕೆ ವಿಸ್ತರಿಸಿಕೊಂಡಿದ್ದರು. ಹಾಗಾಗಿ, ಬಿಜೆಪಿಗೆ 2019ರಲ್ಲಿ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರ ಅನಾಯಾಸವಾಗಿ ಸಿಕ್ಕಿತು. ಮುಂದಿನ ಚುನಾವಣೆಯಲ್ಲೂ ಕೆ.ಗೋಪಾಲಯ್ಯ ಅವರು ಬಿಜೆಪಿಯಿಂದ ಸ್ಪರ್ಧಿಸಲಿದ್ದು, ಕ್ಷೇತ್ರವನ್ನು ಕಸಿದುಕೊಳ್ಳಲು ಕಾಂಗ್ರೆಸ್ ಹಾಗೂ ಜೆಡಿಎಸ್ ಸಹ ಪಣತೊಟ್ಟಿವೆ.
ಕ್ಷೇತ್ರದ ಇತಿಹಾಸ: ಕಾಂಗ್ರೆಸ್ ಹಿಡಿತದಿಂದ ಜೆಡಿಎಸ್ ತೆಕ್ಕೆಗೆ ಹೋಗಿದ್ದ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಕೆ.ಗೋಪಾಲಯ್ಯ 2013 ಮತ್ತು 2018 ರಲ್ಲಿ ಜೆಡಿಎಸ್ನಿಂದ ಸ್ಪರ್ಧಿಸಿ ಜಯಭೇರಿ ಸಾಧಿಸಿದ್ದರು. 2008 ರ ವಿಧಾನಸಭಾ ಚುನಾವಣೆಯಲ್ಲಿ ಮಹಾಲಕ್ಷ್ಮಿ ಲೇಔಟ್ನಲ್ಲಿ ಕಾಂಗ್ರೆಸ್ ನ ನೆ.ಲ. ನರೇಂದ್ರಬಾಬು ಗೆಲುವು ಸಾಧಿಸಿದ್ದರು. ಆದರೆ, ಅವರು ಈಗ ಬಿಜೆಪಿಯಲ್ಲೇ ಇದ್ದು, ಪಕ್ಷದ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಘಟಕದ ಅಧ್ಯಕ್ಷರಾಗಿದ್ದಾರೆ. ನಂತರ 2013 ರ ಚುನಾವಣೆಯಲ್ಲಿ ಜೆಡಿಎಸ್ನಿಂದ ಸ್ಪರ್ಧಿಸಿದ್ದ ಕೆ.ಗೋಪಾಲಯ್ಯ ಗೆಲುವು ಕಂಡಿದ್ದರು. 2018 ರ ಚುನಾವಣೆಯಲ್ಲೂ ಜೆಡಿಎಸ್ಗೆ ಜಯದ ಮಾಲೆ ಸಿಕ್ಕಿತ್ತು.
ಆದರೆ, ಬದಲಾದ ರಾಜಕಾರಣಿಂದ ಒಂದೇ ವರ್ಷದಲ್ಲಿ ಗೋಪಾಲಯ್ಯ ಪಕ್ಷ ಬದಲಿಸಿ ಬಿಜೆಪಿಗೆ ಸೇರಿದ್ದರು. 2019 ರ ಆಗಸ್ಟ್ನಲ್ಲಿ ನಡೆದ ಉಪಚುನಾವಣೆಯಲ್ಲಿ ಭಾರಿ ಅಂತರದೊಂದಿಗೆ ಗೆಲವು ಸಾಧಿಸಿದ್ದರು. ಹಾಗಾಗಿ, ಕ್ಷೇತ್ರದಲ್ಲಿ ಬಿಜೆಪಿ ಪ್ರಬಲ ಹಿಡಿತ ಸಾಧಿಸಿದೆ. ಈ ಲೆಕ್ಕಾಚಾರವನ್ನು ಗಮನಿಸಿದರೆ ಗೋಪಾಲಯ್ಯ ಅವರು ಕ್ಷೇತ್ರವನ್ನು ಗಟ್ಟಿಗೊಳಿಸಿದ್ದು, ಇದೇ ಕಾರಣಕ್ಕೆ ಕಾಂಗ್ರೆಸ್ ನಾಯಕರು ಗೋಪಾಲಯ್ಯ ಅವರನ್ನು ಸೆಳೆಯಲು ಕಸರತ್ತು ನಡೆಸಿದರಾದರೂ ಪ್ರಯೋಜನವಾಗಲಿಲ್ಲ. ಗೋಪಾಲಯ್ಯ ಬಿಜೆಪಿಯಿಂದಲೇ ಕಣಕ್ಕಿಳಿಯುವುದು ನಿಶ್ಚಿತ ಎಂಬ ಮಾತುಗಳು ಕೇಳಿಬರುತ್ತಿವೆ.
ಇನ್ನು ಈ ಬಾರಿ ಕಾಂಗ್ರೆಸ್ನಲ್ಲಿ ಆಕಾಂಕ್ಷಿಗಳ ಕೊರತೆ ಇದೆ. 2019ರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎಂ. ಶಿವರಾಜು ಸ್ಪರ್ಧಿಸುವ ಲಕ್ಷಣ ಕಾಣುತ್ತಿಲ್ಲ. ಇನ್ನು ಜೆಡಿಎಸ್ ಅಭ್ಯರ್ಥಿಯಾಗಿದ್ದ ಡಾ.ಗಿರೀಶ್ ಕೆ.ನಾಶಿ ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಹಾಗಾಗಿ, ಹಿಂದೆ ಇದ್ದಷ್ಟು ಪೈಪೋಟಿ ಈಗ ಇಲ್ಲ. ಒಕ್ಕಲಿಗರ ಸಂಘದ ನಿರ್ದೇಶಕರೂ ಆಗಿರುವ ಡಾ.ನಾರಾಯಣಸ್ವಾಮಿ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಜೆಡಿಎಸ್ನಿಂದ ಮುಖಂಡ ಸಿ.ರಾಜಣ್ಣ ಮತ್ತು ಬಿಬಿಎಂಪಿ ಮಾಜಿ ಉಪ ಮೇಯರ್ ಭದ್ರೇಗೌಡ ಆಕಾಂಕ್ಷಿಗಳಾಗಿದ್ದಾರೆ.
ಒಕ್ಕಲಿಗರೇ ನಿರ್ಣಾಯಕರು: ಈ ಕ್ಷೇತ್ರದಲ್ಲಿ ಒಕ್ಕಲಿಗರೇ ನಿರ್ಣಾಯಕರು. ಜಾತಿ ಲೆಕ್ಕಾಚಾರ ಚುನಾವಣಾ ಫಲಿತಾಂಶದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಇವರೊಂದಿಗೆ ಒಕ್ಕಲಿಗ ಸಮುದಾಯ, ಎಸ್ಸಿ-ಎಸ್ಟಿ, ಬ್ರಾಹ್ಮಣ, ವೀರಶೈವ ಲಿಂಗಾಯತರು, ದೇವಾಂಗ, ಮುಸ್ಲಿಂ ಹಾಗೂ ಇತರೆ ಹಿಂದುಳಿದ ವರ್ಗದವರು ಇದ್ದಾರೆ ಎಂದು ಅಂದಾಜಿಸಲಾಗಿದೆ. ಇದೇ ಕಾರಣಕ್ಕೆ ಜೆಡಿಎಸ್ ಮತ್ತೆ ಕ್ಷೇತ್ರವನ್ನು ತನ್ನ ತಕ್ಕೆಗೆ ತೆಗೆದುಕೊಳ್ಳಲು ಲೆಕ್ಕಾಚಾರ ಹಾಕುತ್ತಿದೆ.
ಕುರುಬರಹಳ್ಳಿ, ಶಂಕರಮಠ, ಜೆ.ಸಿ.ನಗರ, ಗಣಪತಿನಗರ, ನಂದಿನಿಲೇಔಟ್, ನಾಗಪುರ, ಮಾರಪ್ಪನಪಾಳ್ಯ, ವೃಷಭಾವತಿ ನಗರ ವಾರ್ಡ್ ಈ ಕ್ಷೇತ್ರದ ವ್ಯಾಪ್ತಿಗೆ ಬರುತ್ತಿದ್ದು, ಇಲ್ಲಿ ಉತ್ತರ ಕರ್ನಾಟಕ, ತುಮಕೂರು ಭಾಗದವರು ನೆಲೆಸಿದ್ದಾರೆ. ಈ ಕ್ಷೇತ್ರದಲ್ಲಿ ಅತಿ ಹೆಚ್ಚು ಮಧ್ಯಮ ವರ್ಗದವರಿದ್ದಾರೆ. ಈ ಕ್ಷೇತ್ರದಲ್ಲಿ ಸಮಸ್ಯೆಗಳಿಗೇನು ಕಡಿಮೆ ಇಲ್ಲ.
ಕಳೆದ ವರ್ಷ ಅತಿಯಾಗಿ ಮಳೆಬಿದ್ದ ವೇಳೆ ಶಂಕರಮಠ ವಾರ್ಡ್, ಜೆಸಿ ನಗರ ಬಳಿ ರಾಜಕಾಲುವೆ ತುಂಬಿ ಹಲವು ಮನೆಗಳಿಗೆ ನೀರು ನುಗ್ಗಿ ಸಮಸ್ಯೆ ಉಂಟಾಗಿತ್ತು. ಅದೇ ರೀತಿ ಹಲವು ಸಮಸ್ಯೆಗಳು ಈ ಕ್ಷೇತ್ರದಲ್ಲಿವೆ. ಅದರಲ್ಲಿ ಸಂಚಾರ ದಟ್ಟಣೆಯೂ ಒಂದು. ಆದರೂ, ಕ್ಷೇತ್ರವೆಲ್ಲಾ ಸುತ್ತಾಡಿರುವ ಗೋಪಾಲಯ್ಯ, ಯಾವುದೇ ಸಮಸ್ಯೆ ಬಂದರೂ ತಕ್ಷಣ ಸ್ಪರ್ಧಿಸುತ್ತಾರೆ. ಅಭಿವೃದ್ಧಿಗೆ ಹೆಚ್ಚು ಹೊತ್ತು ನೀಡುತ್ತಿರುವುದು ಅವರಿಗೆ ವರದಾನವಾಗಲಿದೆ ಎಂಬುದು ಕ್ಷೇತ್ರದ ಜನರ ಅಭಿಪ್ರಾಯ.
ಮತದಾರರ ಸಂಖ್ಯೆ ಎಷ್ಟು? ಒಟ್ಟು 2,77,043 ಮತದಾರರಿದ್ದು, ಇದರಲ್ಲಿ ಪುರುಷರು 1,42,462 ಮತದಾರರು, 1,34,543 ಮಹಿಳಾ ಮತದಾರರು ಇದ್ದಾರೆ. ತೃತೀಯ ಲಿಂಗಿಗಳು 38 ಇದ್ದಾರೆ.
ಮತಗಳ ವಿವರ: 2008 ರಲ್ಲಿ ಬಿಜೆಪಿ 39,413 ಮತಗಳು ಬಂದಿದ್ದವು. ಕಾಂಗ್ರೆಸ್ಗೆ 42,652 ಮತಗಳು ಹಾಗೂ ಜೆಡಿಎಸ್ಗೆ 28,095 ಮತಗಳು ಬಂದಿದ್ದವು. 2013 ರಲ್ಲಿ ಬಿಜೆಪಿಗೆ 23,545 ಮತಗಳು ಬಿದ್ದಿದ್ದರೆ, ಕಾಂಗ್ರೆಸ್ಗೆ 50,757 ಮತಗಳು ಬಂದಿದ್ದವು. ಜೆಡಿಎಸ್ಗೆ 66,127 ಮತಗಳು ಬಂದಿದ್ದವು. 2018 ರಲ್ಲಿ ಬಿಜೆಪಿಗೆ 47,118 ಮತಗಳು ಬಿದ್ದದ್ದರೆ, ಕಾಂಗ್ರೆಸ್ಗೆ 20,496 ಮತಗಳು ಬಂದಿದ್ದವು. ಇನ್ನು ಜೆಡಿಎಸ್ಗೆ 88,218 ಮತಗಳು ಬಂದಿದ್ದವು.
ಇನ್ನು 2019 ರಲ್ಲಿ ನಡೆದ ಉಪಚುನಾವಣೆಯಲ್ಲಿ ಕೆ.ಗೋಪಾಲಯ್ಯ ಅವರು ಬಿಜೆಪಿಯಿಂದ ಸ್ಪರ್ಧಿಸಿ 85,889 ಮತಗಳನ್ನು ಪಡೆದು ಗೆಲವು ಸಾಧಿಸಿದ್ದರು. ಎಂ.ಶಿವರಾಜು ಅವರು ಕಾಂಗ್ರೆಸ್ನಿಂದ ಸ್ಪರ್ಧಿಸಿ 31,503 ಮತಗಳನ್ನು ಪಡೆದಿದ್ದರು. ಜೆಡಿಎಸ್ನಿಂದ ಡಾ.ಗಿರೀಶ್ ಕೆ.ನಾಶಿ ಅವರು ಕಣಕ್ಕಿಳಿದು 23,516 ಮತಗಳಿಗೆ ಸೀಮಿತವಾದರು. ಬಿಜೆಪಿಗಿಂತಲೂ ಗೋಪಾಲಯ್ಯನವರ ಭದ್ರಕೋಟೆ ಎಂದೇ ಬಿಂಬಿತವಾಗಿರುವ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರವನ್ನು ಜೆಡಿಎಸ್ ಅಥವಾ ಕಾಂಗ್ರೆಸ್ ತನ್ನ ತೆಕ್ಕೆಗೆ ತೆಗೆದುಕೊಳ್ಳುವುದೇ ಎಂಬುದನ್ನು ಕಾದುನೋಡಬೇಕು.
ಇದನ್ನೂ ಓದಿ: 209 ಹಾಲಿ ಶಾಸಕರು ಕೋಟ್ಯಾಧೀಶರು: ಪಕ್ಷವಾರು ನಾಯಕರ ಸರಾಸರಿ ಸಂಪತ್ತು ಗೊತ್ತಾ?