ಬೆಂಗಳೂರು: ಲಂಚ ಪ್ರಕರಣದಲ್ಲಿ ಆರೋಪಿಯಾಗಿರುವ ಚನ್ನಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಲೋಕಾಯುಕ್ತ ಪೊಲೀಸರು ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಇಂದು ಮಧ್ಯಾಹ್ನ ಮಾಡಾಳ್ ಅವರನ್ನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಲೋಕಾ ಪೊಲೀಸರು ಹಾಜರುಪಡಿಸಿದರು.
ಲೋಕಾಯುಕ್ತ ಪೊಲೀಸರ ಪರ ಸಂತೋಷ್ ನಗರಾಳೆ, ಆರೋಪಿತ ಸ್ಥಾನದಲ್ಲಿರುವ ಮಾಡಾಳ್ ಅವರನ್ನು ಹೆಚ್ಚಿನ ವಿಚಾರಣೆಗೊಳಪಡಿಸಬೇಕು. ಹೀಗಾಗಿ 10 ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡುವಂತೆ ಮನವಿ ಮಾಡಿಕೊಂಡರು. ಇದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ ಅರ್ಜಿದಾರ ಪರ ವಕೀಲ ಸ್ವಾಮಿನಿ ಗಣೇಶ್ 'ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಆರೋಗ್ಯ ಸಮಸ್ಯೆಯಿದ್ದು ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸೂಕ್ತ ಚಿಕಿತ್ಸೆ ಅವಶ್ಯಕತೆವಿದೆ ಎಂದಾಗ ಮಧ್ಯಪ್ರವೇಶಿಸಿದ ಲೋಕಾ ಪರ ವಕೀಲರು ಆರೋಪಿಗೆ ಅಗತ್ಯವಾದ ಚಿಕಿತ್ಸೆ ನೀಡಲಾಗುವುದು ಎಂದು ಸ್ಪಷ್ಟನೆ ನೀಡಿದರು. ವಾದ ಮುಂದುವರಿದ ಮಾಡಾಳ್ ಪರ ವಕೀಲರು ಜೊತೆಗೆ ಕುಟುಂಬದ ಸದಸ್ಯರನ್ನು ಭೇಟಿ ಮಾಡೋಕೆ ಅವಕಾಶ ನೀಡಿ ಎಂದರು.
ಅರ್ಜಿದಾರರು ಜನಗಳ ಮಧ್ಯೆ ಇದ್ದವರು, ಈಗ ಏಕಾಏಕಿ ಒಂದು ಕಡೆ ಕೂರಿಸಿದರೆ ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ. ಅದಕ್ಕೆ ಎರಡು ದಿನಕ್ಕೊಮ್ಮೆ ಭೇಟಿಗೆ ಅವಕಾಶ ನೀಡಿ ಎಂದು ಮನವಿ ಮಾಡಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಜಯಂತ ಕುಮಾರ್ ಅವರು ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದರು. ಕುಟುಂಬ ಸದಸ್ಯರ ಭೇಟಿ ಕುರಿತು ನಾಳೆ ಆದೇಶ ನೀಡುವುದಾಗಿ ವಿಚಾರಣೆ ಮುಂದೂಡಿದರು.
ಜಾಮೀನು ಅರ್ಜಿ ವಜಾ ಬೆನ್ನಲ್ಲೇ ಲೋಕಾಯುಕ್ತ ಪೊಲೀಸರು ಸೋಮವಾರ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ತುಮಕೂರಿನ ಕ್ಯಾತಸಂದ್ರ ಟೋಲ್ ಬಳಿ ಬಂಧಿಸಿದ್ದರು. ಚಿತ್ರದುರ್ಗದಿಂದ ಬೆಂಗಳೂರಿಗೆ ಬರುವ ಮಾರ್ಗ ಮಧ್ಯೆಯಾದ ಕ್ಯಾತಸಂದ್ರ ಟೋಲ್ನಲ್ಲಿ ಬಿಳಿ ಬಣ್ಣದ ಇನೋವಾ ಕಾರಿನಲ್ಲಿ ಬರುವಾಗ ಲೋಕಾಯುಕ್ತ ಪೊಲೀಸರು ಅಡ್ಡಗಟ್ಟಿ ವಶಕ್ಕೆ ಪಡೆದುಕೊಂಡು ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಕರೆ ತಂದಿದ್ದರು.
ಸಾಬೂನು ಹಾಗೂ ಮಾರ್ಜಕ ನಿಗಮದ ಅಧ್ಯಕ್ಷರಾಗಿದ್ದ ವಿರೂಪಾಕ್ಷಪ್ಪ ಮಾಡಾಳ್ ಪರವಾಗಿ ಜಲಮಂಡಳಿಯ ಲೆಕ್ಕಾಧಿಕಾರಿ ಪ್ರಶಾಂತ್ ಮಾಡಾಳ್ ಅವರ ಖಾಸಗಿ ಕಚೇರಿಯಲ್ಲಿ ಗುತ್ತಿಗೆದಾರನಿಂದ 40 ಲಕ್ಷ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಈ ಸಂಬಂಧ ಸರ್ಚ್ ವಾರೆಂಟ್ ಪಡೆದು ಚನ್ನಗಿರಿಯಲ್ಲಿರುವ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮನೆ ಮೇಲೆ ದಾಳಿ ನಡೆಸಿದಾಗ ಸುಮಾರು 8 ಕೋಟಿ ಕಂತೆ-ಕಂತೆ ಹಣ ಪತ್ತೆಯಾಗಿತ್ತು. ಬಳಿಕ ಮಾಡಾಳ್ ಅವರನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು.
ಈ ಮಧ್ಯೆ ಹೈಕೋರ್ಟ್ ಗೆ ಮೊರೆ ಹೋಗಿದ್ದ ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ದೊರೆತಿದ್ದರಿಂದ ತನಿಖೆಗೆ ಹಿನ್ನಡೆಯಾಗಿತ್ತು. ಜಾಮೀನು ಪ್ರಶ್ನಿಸಿ ಲೋಕಾ ಪೊಲೀಸರು ಸುಪ್ರೀಂ ಕೋರ್ಟ್ಗೆ ಹೋಗಿದ್ದರು. ಸೋಮವಾರ ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿದ್ದ ಸುಪ್ರೀಂ ಕೋರ್ಟ್ ಲೋಕಾಯುಕ್ತ ಪ್ರಶ್ನಿಸಿದ್ದ ಜಾಮೀನು ಆಕ್ಷೇಪದ ಬಗ್ಗೆ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿತ್ತು. ಈ ಬೆಳವಣಿಗೆ ಮಧ್ಯೆ ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ ಮಧ್ಯಂತರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು.
ಇದನ್ನು ಓದಿ: ಏಪ್ರಿಲ್ 5ರಂದು ಕರ್ನಾಟಕಕ್ಕೆ ಬರಲಿದ್ದಾರೆ ರಾಹುಲ್ ಗಾಂಧಿ