ದೇವನಹಳ್ಳಿ(ಬೆಂಗಳೂರು ಗ್ರಾ.): ಜರ್ಮನಿ ದೇಶದ ವಿಮಾನಯಾನ ಸಂಸ್ಥೆ ಲುಫ್ತಾನ್ಸ ಬೆಂಗಳೂರಿನಿಂದ ಜರ್ಮನಿಯ ಮ್ಯೂನಿಚ್ ನಗರಕ್ಕೆ ತಡೆರಹಿತ ವಿಮಾನ ಸೇವೆ ಶುರು ಮಾಡಿದೆ. ವಾರದಲ್ಲಿ 3 ಬಾರಿ ಈ ಎರಡು ನಗರಗಳ ನಡುವೆ ಸೇವೆ ಲಭ್ಯವಿರುವುದಾಗಿ ಸಂಸ್ಥೆ ಮಾಹಿತಿ ನೀಡಿದೆ.
ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೊದಲ ಮ್ಯೂನಿಚ್ ಮತ್ತು ಬೆಂಗಳೂರು ನಡುವಿನ ವಿಮಾನ ಸೇವೆಗೆ ಶನಿವಾರ ಚಾಲನೆ ನೀಡಲಾಯಿತು. ಸಾಂಪ್ರದಾಯಿಕವಾಗಿ ದೀಪ ಬೆಳಗಿಸಿ ಕೇಕ್ ಕತ್ತರಿಸುವ ಮೂಲಕ ಸಂಸ್ಥೆಯ ಅಧಿಕಾರಿಗಳು ಚಾಲನೆ ನೀಡಿದರು. ಪ್ರಯಾಣಿಕರಿಗೆ ಭಾರತೀಯ ಸಿಹಿ ತಿಂಡಿ ಮತ್ತು ಜರ್ಮನ್ ಪ್ರಿಟ್ಜೆಲ್ ವಿತರಿಸಲಾಯಿತು.
ಲುಫ್ತಾನ್ಸ 1959ರಿಂದ ಭಾರತಕ್ಕೆ ವಿಮಾನಯಾನ ಸೇವೆ ನೀಡುತ್ತಿದೆ. ಮೊದಲು ವಾರಕ್ಕೆ ಎರಡು ವಿಮಾನ ಸೇವೆ ಆರಂಭಿಸಿತ್ತು. ಇದೀಗ ಸುದೀರ್ಘ 64 ವರ್ಷಗಳ ಸೇವೆಯಲ್ಲಿ ಭಾರತಕ್ಕೆ ವಾರಕ್ಕೆ 42 ವಿಮಾನ ಸೇವೆಗಳನ್ನು ನೀಡುವ ಮಟ್ಟಿಗೆ ಬೆಳೆದಿದೆ.
ಮಂಗಳೂರು ಏರ್ಪೋರ್ಟ್- ಶೇ.26ರಷ್ಟು ವಿಮಾನ ಹಾರಾಟ ಹೆಚ್ಚಳ: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚಳಿಗಾಲದ ಋತುವಿನಲ್ಲಿ ಶೇ. 26ರಷ್ಟು ವಿಮಾನ ಹಾರಾಟದಲ್ಲಿ ಹೆಚ್ಚಳವಾಗಲಿದೆ ಎಂದು ಮಂಗಳೂರು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದರು. ಅಕ್ಟೋಬರ್ 29 ರಿಂದ ನವೆಂಬರ್ 15ರ ನಡುವೆ ಮಂಗಳೂರು ನಿಲ್ದಾಣದಲ್ಲಿ ಶೇ 26ರಷ್ಟು ವಿಮಾನ ಹಾರಾಟ ಹೆಚ್ಚಾಗಲಿದೆ. ಈ ಅವಧಿಯಲ್ಲಿ ವಿಮಾನಯಾನ ಸಂಸ್ಥೆಗಳು ತಮ್ಮ ಕಾರ್ಯಾಚರಣೆಯನ್ನು ಹಂತಹಂತವಾಗಿ ಹೆಚ್ಚಿಸಲಿದೆ ಎಂದು ಹೇಳಿದ್ದರು.
ಸದ್ಯ ನಿಲ್ದಾಣದಲ್ಲಿ ವಾರಕ್ಕೆ 136 ವಿಮಾನಗಳು ಕಾರ್ಯನಿರ್ವಹಿಸುತ್ತಿವೆ. ದೇಶೀಯ ಮತ್ತು ಅಂತರರಾಷ್ಟ್ರೀಯ ವಲಯದಲ್ಲಿ ಅಕ್ಟೋಬರ್ 29ಕ್ಕೆ 138 ವಿಮಾನಗಳು, ನವೆಂಬರ್ 3ರಂದು 145 ವಿಮಾನಗಳು ಕಾರ್ಯಾಚರಣೆ ನಡೆಸಿವೆ. ನವೆಂಬರ್ 6ರಿಂದ 158 ವಿಮಾನಗಳು (16%) ಮತ್ತು ನವೆಂಬರ್ 15 ರಿಂದ 172 ವಿಮಾನಗಳು (25%) ಸಂಚಾರ ನಡೆಸಲಿದೆ ಎಂದು ತಿಳಿಸಿದೆ.
ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆ ನವೆಂಬರ್ 6 ರಿಂದ ಬೆಂಗಳೂರಿಗೆ 78 ಆಸನಗಳ ವಿಮಾನವನ್ನು ಬಳಸಿಕೊಂಡು 2 ದೈನಂದಿನ ವಿಮಾನಗಳನ್ನು ಪರಿಚಯಿಸಲಿದೆ. ಇಂಡಿಗೊ ನವೆಂಬರ್ 3 ರಿಂದ ಮುಂಬೈಗೆ 4 ನೇ ದೈನಂದಿನ ವಿಮಾನವನ್ನು ಆರಂಭಿಸಿದ್ದು, ಪ್ರತಿ ಎರಡನೇ ಮತ್ತು ನಾಲ್ಕನೇ ಶನಿವಾರ ಅದನ್ನು ಐದು ವಿಮಾನಗಳಿಗೆ ಹೆಚ್ಚಿಸಿದೆ. ಬೆಂಗಳೂರು (5 ದೈನಂದಿನ ವಿಮಾನಗಳು), ಹೈದರಾಬಾದ್ (2 ದೈನಂದಿನ ವಿಮಾನಗಳು) ಮತ್ತು ದೆಹಲಿಗೆ (1 ದೈನಂದಿನ ವಿಮಾನ) ಕಾರ್ಯಾಚರಣೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ವಿಮಾನ ನಿಲ್ದಾಣದ ಪ್ರಕಟಣೆ ತಿಳಿಸಿತ್ತು.
ಇದನ್ನೂ ಓದಿ: ಕೊಚ್ಚಿ ಮತ್ತು ದೋಹಾ ನಡುವೆ ಅ.23 ರಿಂದ ಏರ್ ಇಂಡಿಯಾ ನೇರ ವಿಮಾನಯಾನ ಆರಂಭ