ಬೆಂಗಳೂರು : ತಮ್ಮ ಪ್ರೀತಿಯನ್ನು ಮನೆಯವರು ವಿರೋಧಿಸಿ ತಮ್ಮನ್ನು ಕೂಡಿಹಾಕಿ ಹಲ್ಲೆ ನಡೆಸಿದ್ದಲ್ಲದೇ ಪ್ರಿಯಕರನ ಆತ್ಮಹತ್ಯೆಗೆ ಪ್ರಚೋದಿಸಿರುವುದಾಗಿ ಆರೋಪಿಸಿ ಯುವತಿ ನೀಡಿದ ದೂರಿನ ಮೇರೆಗೆ ನಗರದ ಎಚ್ಎಸ್ಆರ್ ಲೇಔಟ್ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಯುವತಿ ಐಶ್ವರ್ಯ ಎಂಬಾಕೆ ನೀಡಿದ ದೂರಿನಂತೆ ಕುಟುಂಬಸ್ಥರಾದ ಹೇಮಂತ್, ದೀಕ್ಷಿತ್ ಹಾಗೂ ರವಿಕುಮಾರ್ ಎಂಬವರನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿರುವ ಇನ್ನಿಬ್ಬರು ಆರೋಪಿತೆಯರಾದ ಯಶೋಧ ಹಾಗೂ ಅಂಜಲಿ ಬಂಧನಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ.
ಆನೇಕಲ್ ಮೂಲದ ಯುವತಿ ಎಚ್ಎಸ್ಐಆರ್ ಪೊಲೀಸ್ ಠಾಣಾ ವ್ಯಾಪ್ತಿಯ ಅಪಾರ್ಟ್ಮೆಂಟ್ವೊಂದರಲ್ಲಿ ವಾಸವಾಗಿದ್ದರು. ಚಿಕ್ಕ ವಯಸ್ಸಿನಲ್ಲಿ ತಾಯಿ ನಿಧನವಾಗಿದ್ದರಿಂದ ತಂದೆ ಬೇರೆ ಮದುವೆ ಮಾಡಿಕೊಂಡಿದ್ದರು. ಅಜ್ಜಿಯ ಆಶ್ರಯದಲ್ಲಿ ಬೆಳೆದಿದ್ದ ಈಕೆ ಎಚ್ಎಸ್ಐಆರ್ ಲೇಔಟ್ ಖಾಸಗಿ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದರು.
ಇದೇ ಕಾಲೇಜಿನಲ್ಲಿ ಓದುತ್ತಿದ್ದ ಆಂಧ್ರದ ಮೂಲದ ತೋಟಶ್ರೀ ಮಣಿಕಂಠ ಎಂಬವರ ಪರಿಚಯವಾಗಿದೆ. ಕ್ರಮೇಣ ಈ ಪರಿಚಯ ಪ್ರೀತಿಗೆ ತಿರುಗಿತ್ತು. ಮನೆಯವರ ವಿರೋಧದ ನಡುವೆಯೂ ಯುವತಿ ಮಣಿಕಂಠನನ್ನು ಪ್ರೀತಿಸುತ್ತಿದ್ದರು. ಇವರ ಪ್ರೀತಿಯನ್ನು ಯುವತಿ ಮನೆಯವರು ವಿರೋಧಿಸಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಯುವತಿ ನಗರದಲ್ಲಿ ಮಣಿಕಂಠನ ಜೊತೆಗೂಡಿ ಬಾಡಿಗೆ ಮನೆಯಲ್ಲಿ ಲಿವಿಂಗ್ ಟುಗೆದರ್ ಸಂಬಂಧದಲ್ಲಿದ್ದರು.
ಈ ವಿಚಾರ ಯುವತಿ ಮನೆಯವರಿಗೆ ಗೊತ್ತಾಗುತ್ತಿದ್ದಂತೆ ಜುಲೈ 11ರಂದು ಮನೆಗೆ ಬಂದು ಇಬ್ಬರನ್ನೂ ಕೂಡಿ ಹಾಕಿ ಮಣಿಕಂಠನ ಮೇಲೆ ಹಲ್ಲೆ ಮಾಡಿದ್ದರು. ಹುಡುಗಿಯ ತಂಟೆಗೆ ಬಂದರೆ ಸಾಯಿಸುವುದಾಗಿ ಹೆದರಿಸಿ ಯುವತಿಯನ್ನು ಮನೆಗೆ ಕರೆದೊಯ್ದಿದ್ದರು. ಇದರಿಂದ ಮನನೊಂದಿದ್ದ ಯುವಕ ಯುವತಿಗೆ ಕರೆ ಮಾಡಿ ತಮ್ಮ ಪ್ರೀತಿಯ ಗುರುತಾಗಿರುವ ಬೆಕ್ಕಿನ ಮರಿಯನ್ನು ಚೆನ್ನಾಗಿ ನೋಡಿಕೋ ಎಂದು ಹೇಳಿದ್ದಾನೆ. ನಂತರ ತಾಯಿಗೆ ವಾಯ್ಸ್ ಮೆಸೇಜ್ ಕಳುಹಿಸಿ ಕ್ಷಮಿಸು ಎಂದು ಹೇಳಿ ತಮಿಳುನಾಡಿನ ಜೋಲಾರಪೇಟೆ ರೈಲ್ವೇ ಠಾಣಾ ವ್ಯಾಪ್ತಿಯಲ್ಲಿ ಜುಲೈ 13 ರಂದು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಈ ಘಟನೆ ಸಂಬಂಧ ಜೋಲಾರಪೇಟೆ ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಹುಡುಗಿಯ ವಿಚಾರವಾಗಿ ಮೃತನ ಮೇಲೆ ಹಲ್ಲೆ ಮಾಡಿರುವುದು ಗೊತ್ತಾಗಿದೆ. ಕೃತ್ಯ ನಡೆದ ಸ್ಥಳದ ಆಧಾರದ ಮೇರೆಗೆ ಸೆ.21 ರಂದು ಎಚ್ಎಸ್ಆರ್ ಲೇಔಟ್ ಪೊಲೀಸರಿಂದ ಪ್ರಕರಣವನ್ನು ನಗರ ಪೊಲೀಸರಿಗೆ ವರ್ಗಾಯಿಸಲಾಗಿತ್ತು. ಪ್ರಕರಣ ದಾಖಲಾಗುತ್ತಿದ್ದಂತೆ ತನಿಖೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಇಷ್ಟಾದರೂ ಕುಟುಂಬಸ್ಥರನ್ನು ಬಿಟ್ಟು ಪ್ರತ್ಯೇಕವಾಗಿ ವಾಸಿಸುತ್ತಿರುವ ಯುವತಿ ಪ್ರಿಯತಮನನ್ನು ನೆನೆದು ಪ್ರತಿನಿತ್ಯ ಕಣ್ಣೀರು ಹಾಕುತ್ತಿದ್ದಾರೆ. ಮಣಿಕಂಠನ ಸಾವಿನ ನ್ಯಾಯಕ್ಕಾಗಿ ಕಾನೂನಿನ ಹೋರಾಟ ಮಾಡುತ್ತಿದ್ದಾರೆ.
ಇದನ್ನೂ ಓದಿ: ಕಾಲೇಜಿಗೆ ಟಾಪರ್ ಆಗಿದ್ದ ಆ ಯುವತಿ ಪ್ರಿಯತಮ ಔಟಿಂಗ್ ಕರೆದುಕೊಂಡು ಹೋಗದಿದ್ದಕ್ಕೆ ಆತ್ಮಹತ್ಯೆ