ಬೆಂಗಳೂರು: ಕೊರೊನಾದಿಂದಾಗಿ ಖಾಸಗಿ ಶಾಲೆಗಳ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿ ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರ ಭವಿಷ್ಯವೇ ಅತಂತ್ರವಾಗಿದೆ. ಅವರ ಪಾಡು ಯಾರಿಗೂ ಬೇಡದಾಗಿದ್ದು, ಹಲವು ಖಾಸಗಿ ಶಾಲೆಗಳು ಮಾರ್ಚ್- ಏಪ್ರಿಲ್ ತಿಂಗಳ ವೇತನವನ್ನ ನೀಡಿಲ್ಲ. ಇನ್ನು, ಕೆಲ ಶಾಲೆಗಳು ಮಾರ್ಚ್ ತಿಂಗಳ ಅರ್ಧ ವೇತನವನ್ನು ನೀಡಿದ್ದು, ಏಪ್ರಿಲ್ ತಿಂಗಳ ವೇತನ ಕೊಟ್ಟಿಲ್ಲ. ಮೇ ತಿಂಗಳಲ್ಲಿ ಒಂದು ವೇಳೆ ಶಾಲೆಗಳು ಆರಂಭವಾದರೆ ಸಂಬಳ ನೀಡುವುದಾಗಿ ಹೇಳುತ್ತಿದ್ದರಂತೆ, ಆದರೆ ಶೈಕ್ಷಣಿಕ ವರ್ಷ ಶುರುವಾಗದ ಕಾರಣ ಹಲವು ಖಾಸಗಿ ಶಾಲೆಗಳು ಕೂಡ ಸಂಕಷ್ಟ ಎದುರಿಸುತ್ತಿವೆ.
ಇತ್ತ ಅನುದಾನ ರಹಿತ ಶಾಲೆಗಳು ಸಂಬಳ ನೀಡುವುದಕ್ಕೆ ಕಷ್ಟವಾಗುತ್ತಿದ್ದು, ಆರ್ಟಿಇ ಮರುಪಾವತಿ ಆಗಬೇಕಿದೆ. ಹೀಗಾಗಿ ಸರ್ಕಾರವೂ ಕಂತು ಕಂತಿನಲ್ಲಿ ಹಣ ಬಿಡುಗಡೆ ಮಾಡುವ ಬದಲು ಒಮ್ಮೆಲೆ ಹಣ ಬಿಡುಗಡೆ ಮಾಡುವಂತೆ ಖಾಸಗಿ ಅನುದಾನ ರಹಿತ ಶಾಲೆಗಳ ರಾಜ್ಯ ಸಂಘಟನೆ (ಕ್ಯಾಮ್ಸ್)ನ ಕಾರ್ಯದರ್ಶಿ ಶಶಿಕುಮಾರ್ ಒತ್ತಾಯಿಸಿದ್ದಾರೆ.
ಶಿಕ್ಷಕರ ವರ್ಗ ಕಷ್ಟದ ದಿನಗಳನ್ನು ಎದುರಿಸುತ್ತಿದ್ದು, ಮನೆ ಬಾಡಿಗೆ ಹಾಗೂ ಸಾಲ ಸೇರಿದಂತೆ ಹತ್ತಾರು ಸಮಸ್ಯೆಗಳ ಸುಳಿಗೆ ಸಿಲುಕಿದ್ದಾರೆ. ತಿಂಗಳ ಸಂಬಳವನ್ನೇ ಎದುರು ನೋಡುತ್ತಿರುವವರು ಇಂದು ಖಾಲಿ ಕೈಯಲ್ಲಿ ಕುಳಿತಿದ್ದಾರೆ. ರಾಜ್ಯದಲ್ಲಿ ಸುಮಾರು 2 ಲಕ್ಷಕ್ಕೂ ಹೆಚ್ಚು ಖಾಸಗಿ ಶಾಲಾ ಸಿಬ್ಬಂದಿ ಇದ್ದು, ಅವರಿಗೆ ವಿಶೇಷ ಪ್ಯಾಕೇಜ್ ರಿಲೀಸ್ ಮಾಡಿ ಎಂದು ಮನವಿ ಮಾಡಿದ್ದಾರೆ. ಶಿಕ್ಷಕರು ಸಹ ಕೋವಿಡ್-19 ಸರ್ವೇಯಲ್ಲಿ ಭಾಗಿಯಾಗುತ್ತಿದ್ದು, ಇವರಿಗೆ ವಿಮೆ ಸೌಲಭ್ಯ ಕಲ್ಪಿಸಬೇಕೆಂದು ಮನವಿ ಮಾಡಲಾಗಿದೆ.