ಬೆಂಗಳೂರು : ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಅವರಿಗೆ ಸಂಬಂಧಿಸಿದ್ದು ಎನ್ನಲಾದ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಈ ವಿಡಿಯೋ ಪರೀಕ್ಷಿಸಿದ ವಿಧಿವಿಜ್ಞಾನ ಪ್ರಯೋಗಾಲಯ ವಿಡಿಯೋ ನಕಲಿ ಎಂದು ಇದೀಗ ವರದಿ ಕೊಟ್ಟಿದೆ. ಈ ಮೂಲಕ ಲಿಂಬಾವಳಿ ಅವರಿಗೆ ರಿಲೀಫ್ ಸಿಕ್ಕಂತಾಗಿದೆ.
ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರವಿದ್ದ ಸಂದರ್ಭದಲ್ಲಿ ರಾಜ್ಯದಲ್ಲಿ ಪುನಃ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ತರುವಲ್ಲಿ ಲಿಂಬಾವಳಿ ಬಹುಮುಖ್ಯ ಪಾತ್ರ ವಹಿಸಿದ್ದರು. ಈ ವೇಳೆ ಲಿಂಬಾವಳಿ ಹೆಸರನ್ನು ಕೆಟ್ಟದಾಗಿ ಬಿಂಬಿಸಲು ಅಶ್ಲೀಲ ವಿಡಿಯೋ ಹರಿಬಿಡಲಾಗಿದೆ ಎನ್ನಲಾಗಿತ್ತು. ಈ ವಿಡಿಯೋ ಕೂಡಾ ಸಾಕಷ್ಟು ವೈರಲ್ ಆಗಿ ವಿವಾದಕ್ಕೂ ಕಾರಣವಾಗಿತ್ತು.
ಹೀಗಾಗಿ ಸತ್ಯಾಸತ್ಯತೆ ತಿಳಿಯಲು ಎಫ್ಎಸ್ಎಲ್ಗೆ ವಿಡಿಯೋ ರವಾನಿಸಲಾಗಿತ್ತು. ಇದೀಗ ವರದಿ ಬಂದಿದ್ದು ವಿಡಿಯೋ ನಕಲಿ ಎಂಬುದು ಗೊತ್ತಾಗಿದೆ.