ಬೆಂಗಳೂರು : ವೀರಶೈವ ಲಿಂಗಾಯತ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಬೇಕು ಎಂದು ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಯುವ ಘಟಕದ ರಾಜ್ಯಾಧ್ಯಕ್ಷ ಜಿ.ಮನೋಹರ್ ಅಬ್ಬಿಗೆರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ನೀವು ಸರ್ವ ಜನಾಂಗದ ನಾಯಕರು, ದೀನ ದಲಿತರ ಆಶಾಕಿರಣ ಎಂದು ಖಂಡಿತ ಒಪ್ಪುತ್ತೇವೆ. ಆದರೆ, ಬಹಳ ದಿನಗಳ ನಮ್ಮ ಬೇಡಿಕೆ ವೀರಶೈವ ಲಿಂಗಾಯತ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಬೇಕು ಎನ್ನುವುದು. ನಮ್ಮ ಸಮಾಜದ ಕಡು ಬಡವರು, ಸಮಾಜದ ಹಿಂದುಳಿದ ವರ್ಗಕ್ಕೆ, ಯುವಕರಿಗೆ ಸಹಾಯ ಆಗಬೇಕು ಹಾಗೂ ಸಮುದಾಯಕ್ಕೆ ಒಳ್ಳೆಯದಾಗಬೇಕು ಎನ್ನುವುದು ನಮ್ಮ ಅಪೇಕ್ಷೆ.
ನಮ್ಮ ಸಮಾಜದ ಎಲ್ಲ ನಾಯಕರು, ಧುರೀಣರು, ಮುಖಂಡರು, ಹಿರಿಯರು, ಸಮಾಜದ ಎಲ್ಲರ ಆಶಯ ಇದಾಗಿದ್ದು, ನಿಮಗೆ ಬಹಳಷ್ಟು ಬಾರಿ ಒತ್ತಾಯ ಹಾಗೂ ಮನವಿಗಳನ್ನು ಮಾಡಿದ್ದೇವೆ.
ತಾವು ಬೇರೆ ಎಲ್ಲ ಸಮುದಾಯದ ನಿಗಮ ಮತ್ತು ಪ್ರಾಧಿಕಾರ ರಚನೆ ಮಾಡುತ್ತಿದ್ದೀರಿ. ಆದರೆ, ಯಾಕೋ ನಮ್ಮ ಮನವಿಗೆ ನೀವು ಸ್ಪಂದಿಸುತ್ತಿಲ್ಲ. ಇದರಿಂದ ನಮಗೆ ಬಹಳ ಬೇಸರ ಆಗಿದೆ. ತಾವು ಆದಷ್ಟು ಬೇಗ ವೀರಶೈವ ಲಿಂಗಾಯತ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಬೇಕೆಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಶಿರಾ ಉಪಚುನಾವಣೆ ವೇಳೆ ಕಾಡುಗೊಲ್ಲ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿ ಆದೇಶ ಹೊರಡಿಸಿದ್ದ ಸಿಎಂ ಈಗ ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆಗೆ ಆದೇಶ ಹೊರಡಿಸಿದ್ದಾರೆ. ಈ ಹಿನ್ನೆಲೆ ವೀರಶೈವ ಲಿಂಗಾಯತ ಸಮುದಾಯ ತಮ್ಮ ಬೇಡಿಕೆ ಪರಿಗಣಿಸುವಂತೆ ಸಿಎಂ ಬಿಎಸ್ವೈ ಅವರನ್ನು ಒತ್ತಾಯಿಸಿದೆ.