ಬೆಂಗಳೂರು: ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷರನ್ನಾಗಿ ಲೀಲಾದೇವಿ ಆರ್. ಪ್ರಸಾದ್ ಅವರನ್ನು ನೇಮಿಸಲಾಗಿದ್ದು, ಅಲ್ಪಸಂಖ್ಯಾತ ನಾಯಕಿ ರೂತ್(ಋತ್) ಮನೋರಮರನ್ನು ಬೆಂಗಳೂರು ನಗರ ಮಹಿಳಾ ಘಟಕದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಹೆಚ್.ಡಿ.ದೇವೇಗೌಡರ ನೇತೃತ್ವದಲ್ಲಿ ಇಂದು ನಡೆದ ಸಭೆಯಲ್ಲಿ ಮಹಿಳಾ ಘಟಕದ ಅಧ್ಯಕ್ಷರನ್ನು ನೇಮಿಸಲಾಯಿತು. ಈ ವೇಳೆ ಮಾತನಾಡಿದ ನೂತನ ಮಹಿಳಾ ಘಟಕದ ಅಧ್ಯಕ್ಷೆ ಲೀಲಾದೇವಿ ಆರ್. ಪ್ರಸಾದ್, ದೇವೇಗೌಡರ ಅವಧಿಯಲ್ಲಿ ಶೇ. 33ರಷ್ಟು ಮೀಸಲಾತಿ ಜಾರಿಗೆ ತಂದಿದ್ದೇವೆ. ರಾಜ್ಯಸಭೆಯಲ್ಲಿ ಬಿಲ್ ಪಾಸ್ ಆಗಿದೆ. ಲೋಕಸಭೆಯಲ್ಲಿ ಪಾಸ್ ಆಗಬೇಕಿದೆ. 33ರಷ್ಟು ಮೀಸಲಾತಿಗೆ ನಾವು ಹೋರಾಟ ಮುಂದುವರಿಸುತ್ತೇವೆ. ಪ್ರಧಾನಿ ಮೋದಿ ಈ ಬಗ್ಗೆ ನಿರ್ಧಾರ ಮಾಡಬೇಕು. ನನ್ನ ಮೇಲೆ ದೇವೇಗೌಡರಿಗೆ ಭರವಸೆ ಇದೆ. ಆ ಭರವಸೆ ಉಳಿಸಿಕೊಳ್ಳುತ್ತೇನೆ ಎಂದರು.
ಪ್ರತಿ ಜಿಲ್ಲೆ, ತಾಲೂಕು ಮಟ್ಟದಿಂದ ಪಕ್ಷ ಸಂಘಟನೆ ಮಾಡುತ್ತೇನೆ. ಪುರುಷರ ಸಮಾನವಾಗಿ ಮಹಿಳೆಯರು ಕೆಲಸ ಮಾಡಬೇಕು. ಯುವ ಮಹಿಳೆಯರನ್ನು ಸಂಘಟನೆಯಲ್ಲಿ ತೊಡಗಿಸಿಕೊಂಡು ಪಕ್ಷ ಸಂಘಟನೆ ಮಾಡುತ್ತೇನೆ. ನಮ್ಮ ಚಿಹ್ನೆ ಮಹಿಳೆ. ಹೀಗಾಗಿ ಮಹಿಳೆಯರು ಏನು ಬೇಕಾದರೂ ಸಾಧನೆ ಮಾಡುತ್ತಾರೆ. ಪಕ್ಷ ಸಂಘಟನೆಗೆ ಒಟ್ಟಾಗಿ ದುಡಿದು ಪಕ್ಷ ಕಟ್ಟುತ್ತೇವೆ ಎಂದರು.