ಬೆಂಗಳೂರು: ನಾಯಕತ್ವ ಬದಲಾದರೂ ಕಾವೇರಿ ರಾಜಕೀಯ ಚಟುವಟಿಕೆಯ ಕೇಂದ್ರ ತಾಣವಾಗಿದೆ. ಸಚಿವ ಸ್ಥಾನದ ಆಕಾಂಕ್ಷಿಗಳು ಕಿಂಗ್ ಬದಲು ಕಿಂಗ್ ಮೇಕರ್ ಬಿಎಸ್ವೈ ನಿವಾಸಕ್ಕೆ ಭೇಟಿ ನೀಡುತ್ತಿದ್ದು, ಸಂಪುಟದಲ್ಲಿ ಅವಕಾಶಕ್ಕಾಗಿ ಮನವಿ ಮಾಡುತ್ತಿದ್ದಾರೆ.
ಯಡಿಯೂರಪ್ಪ ಮಾಜಿ ಆದರೂ ಅವರ ನಿವಾಸಕ್ಕೆ ಆಗಮಿಸುವ ಶಾಸಕರ ಸಂಖ್ಯೆಗೆ ಕಡಿಮೆ ಆಗಿಲ್ಲ. ಸಚಿವ ಸಂಪುಟ ಸೇರುವ ಅಪೇಕ್ಷೆ ಹೊಂದಿರುವ ಬಹುತೇಕ ಶಾಸಕರು ಬಿಎಸ್ವೈ ನಿವಾಸಕ್ಕೆ ಭೇಟಿ ನೀಡಲು ಶುರು ಮಾಡಿದ್ದಾರೆ. ಮಾನಸಪುತ್ರ ಎಂದೇ ಕರೆಸಿಕೊಳ್ಳುವ ರೇಣುಕಾಚಾರ್ಯ ಹಾಗೂ ಮಾಡಾಳು ವಿರೂಪಾಕ್ಷಪ್ಪ, ಬಸವರಾಜ ದಡೇಸಗೂರು, ಆರಗ ಜ್ಞಾನೇಂದ್ರ, ಕುಮಾರ್ ಬಂಗಾರಪ್ಪ, ವಲಸಿಗ ಶಾಸಕ ಮುನಿರತ್ನ ಹೀಗೆ ಪಟ್ಟಿ ಉದ್ದ ಬೆಳೆಯುತ್ತಲೇ ಇದೆ.
ಪ್ರತಿದಿನ ಯಡಿಯೂರಪ್ಪ ನಿವಾಸಕ್ಕೆ ಆಗಮಿಸುತ್ತಿರುವ ಶಾಸಕರು, ಸಚಿವ ಸ್ಥಾನದ ಅಪೇಕ್ಷೆ ವ್ಯಕ್ತಪಡಿಸುತ್ತಿದ್ದಾರೆ. ಯಡಿಯೂರಪ್ಪ ಸಂಪುಟದಲ್ಲಿದ್ದ ಹಲವರು ಮತ್ತೆ ಅವಕಾಶಕ್ಕಾಗಿ ಕಾವೇರಿಯ ಕದ ತಟ್ಟುತ್ತಿದ್ದಾರೆ. ಹೊಸಬರು ಕೂಡ ಸಂಪುಟ ಸೇರ್ಪಡೆಗೆ ಶಿಫಾರಸು ಮಾಡುವಂತೆ ಬಿಎಸ್ವೈಗೆ ದುಂಬಾಲು ಬಿದ್ದಿದ್ದಾರೆ.
ವಲಸಿಗರಿಂದ ಒತ್ತಡ:
ವಲಸಿಗ ಶಾಸಕರಂತೂ ಯಡಿಯೂರಪ್ಪ ಮೇಲೆ ನಿರಂತರವಾಗಿ ಒತ್ತಡ ಹೇರುತ್ತಿದ್ದಾರೆ. ಪ್ರತಿದಿನ ಬಿಎಸ್ವೈ ಭೇಟಿಯಾಗುತ್ತಿರುವ ವಲಸಿಗರ ತಂಡ ನಿಮ್ಮನ್ನು ನಂಬಿ ಬಿಜೆಪಿಗೆ ಬಂದಿದ್ದೇನೆ. ಬಿಜೆಪಿ ಸರ್ಕಾರ ರಚನೆಯಾಗಲು ಕೊಡುಗೆ ನೀಡಿದ್ದೇವೆ. ಬೊಮ್ಮಾಯಿ ಸಂಪುಟದಲ್ಲೂ ನಮಗೆಲ್ಲ ಅವಕಾಶ ಇರಬೇಕು. ನಮ್ಮಲ್ಲಿ ಯಾರಿಗೂ ಸಚಿವ ಸ್ಥಾನ ಕೈತಪ್ಪಬಾರದು, ಹೈಕಮಾಂಡ್ ಜೊತೆ ಮಾತುಕತೆ ನಡೆಸಿ ನಮಗೆ ಸಚಿವ ಸ್ಥಾನ ಸಿಗುವಂತೆ ನೋಡಿಕೊಳ್ಳಬೇಕು ಎಂದು ಒತ್ತಡ ಹೇರುತ್ತಿದ್ದಾರೆ ಎಂದು ತಿಳಿದುಬಂದಿದೆ.
ಬೊಮ್ಮಾಯಿ ಸಿಎಂ ಆಗಲು ಬಿಎಸ್ವೈ ಕಾರಣ:
ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಲು ಯಡಿಯೂರಪ್ಪ ಕಾರಣ ಎನ್ನುವುದು ಗುಟ್ಟಾಗಿ ಏನು ಉಳಿದಿಲ್ಲ. ಯಡಿಯೂರಪ್ಪ ಮಾತೇ ಹೈಕಮಾಂಡ್ ಮಟ್ಟದಲ್ಲೂ ಅಂತಿಮ ಎನ್ನುವುದು ಸಾಬೀತಾಗಿದೆ. ಹೀಗಾಗಿ ಸಚಿವ ಸ್ಥಾನಕ್ಕಾಗಿ ಸಿಎಂ, ಹೈಕಮಾಂಡ್ ಬದಲು ಯಡಿಯೂರಪ್ಪ ಅವರ ಹಿಂದೆಯೇ ಆಕಾಂಕ್ಷಿಗಳು ದುಂಬಾಲು ಬೀಳುತ್ತಿದ್ದಾರೆ.
ಬಿಎಸ್ವೈ ಮನೆಗೆ 3 ಬಗೆಯ ನಾಯಕರು ಭೇಟಿ:
ಯಡಿಯೂರಪ್ಪ ಸಂಪುಟದಲ್ಲಿದ್ದ ಹಳಬರು, ಹೊಸದಾಗಿ ಸಂಪುಟ ಸೇರಲು ನಿರೀಕ್ಷೆ ಇರಿಸಿಕೊಂಡವರು ಹಾಗೂ ವಲಸಿಗರು ಹೀಗೆ ಮೂರೂ ಬಗೆಯ ಶಾಸಕರು ಸಚಿವ ಸ್ಥಾನಕ್ಕಾಗಿ ಬಿಎಸ್ವೈ ಮನೆ ಬಾಗಿಲಿಗೆ ಬರುತ್ತಿದ್ದಾರೆ. ಸಿಎಂ ನಿವಾಸಕ್ಕಿಂತ ಹೆಚ್ಚಾಗಿ ಯಡಿಯೂರಪ್ಪನವರ ನಿವಾಸದಲ್ಲೇ ಸಚಿವ ಸ್ಥಾನದ ಕುರಿತು ಚರ್ಚೆ, ಸಭೆ, ಸಮಾಲೋಚನೆಗಳು ನಡೆಯುತ್ತಿವೆ.
ಸಚಿವ ಸಂಪುಟದ ಬಗ್ಗೆ ಮಾಜಿ ಸಿಎಂ ಜೊತೆ ಹಾಲಿ ಸಿಎಂ ಚರ್ಚೆ:
ಉತ್ತರ ಕನ್ನಡ ಜಿಲ್ಲಾ ಪ್ರವಾಸಕ್ಕೆ ತೆರಳುವ ಮುನ್ನ ಮಾಜಿ ಸಿಎಂ ನಿವಾಸಕ್ಕೆ ಹಾಲಿ ಸಿಎಂ ಬೊಮ್ಮಾಯಿ ಭೇಟಿ ನೀಡಿದ್ದರು. ಈ ವೇಳೆ ಇಬ್ಬರು ನಾಯಕರು ಪ್ರತ್ಯೇಕವಾಗಿ ಮಾತುಕತೆ ನಡೆಸಿದರು. ಹೈಕಮಾಂಡ್ ಸಮಯ ನೀಡುತ್ತಿದ್ದಂತೆ ದೆಹಲಿಗೆ ತೆರಳಲು ಸಿದ್ಧವಾಗಿರುವ ಸಿಎಂ ಬೊಮ್ಮಾಯಿ, ವರಿಷ್ಠರ ಜೊತೆ ಏನೆಲ್ಲ ಚರ್ಚೆ ಮಾಡಬೇಕು ಎನ್ನುವ ಕುರಿತು ಮೊದಲು ತಮ್ಮ ರಾಜಕೀಯ ಗುರು ಯಡಿಯೂರಪ್ಪ ಜೊತೆ ಸಮಾಲೋಚನೆ ನಡೆಸಿದರು. ಸಂಪುಟ ವಿಸ್ತರಣೆ ಸೇರಿದಂತೆ ರಾಜಕೀಯ ಚರ್ಚೆ ಕುರಿತು ಮಾತುಕತೆ ನಡೆಸಿದ್ದಾರೆ ಎನ್ನಲಾಗ್ತಿದೆ.
ಸಚಿವ ಸ್ಥಾನಕ್ಕಾಗಿ ಯಡಿಯೂರಪ್ಪ ಸೂಚಿಸುವ ಹೆಸರುಗಳನ್ನು ಪರಿಗಣಿಸಿ ಪಟ್ಟಿ ಸಿದ್ಧಪಡಿಸಿಕೊಂಡು ದೆಹಲಿಗೆ ತೆರಳಲು ಬೊಮ್ಮಾಯಿ ನಿರ್ಧರಿಸಿದ್ದು, ಅದಕ್ಕೆ ಪೂರಕವಾಗಿ ಮಾಜಿ ಸಿಎಂ ಬಿಎಸ್ವೈ ಜೊತೆ ಚರ್ಚಿಸಿದ್ದಾರೆ ಎನ್ನಲಾಗುತ್ತಿದೆ.
ಓದಿ: ನಾಳೆ ದೆಹಲಿಗೆ ಸಿಎಂ ಪ್ರವಾಸ: ಸಂಪುಟ ವಿಸ್ತರಣೆ, ರಾಜ್ಯದ ಯೋಜನೆಗಳ ಕುರಿತು ಚರ್ಚೆ